ನವೆಂಬರ್ 27 ಇನ್ಮುಂದೆ 'ವಿಶ್ವ ಬಾಲ್ಯವಿವಾಹ ನಿರ್ಮೂಲನೆ ದಿನ: ಕರ್ನಾಟಕದ ಶಾಲೆಗಳಲ್ಲೂ ಆಚರಣೆಗೆ ಒತ್ತಾಯ

ಬೆಂಗಳೂರು: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 27 ಆನ್ನು 'ಬಾಲ್ಯವಿವಾಹ, ಬೇಗ ಮತ್ತು ಬಲವಂತವಾಗಿ ಮಾಡುವ ವಿವಾಹಗಳ ನಿರ್ಮೂಲನೆಯ ಅಂತಾರಾಷ್ಟ್ರೀಯ ದಿನ' ಎಂದು ಅಧಿಕೃತವಾಗಿ ಘೋಷಿಸಿದೆ. ಇದರ ಬೆನ್ನಲ್ಲೆ ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ ಒಂದಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂದು ಬೆಂಗಳೂರು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ.ರಾವ್ ಅವರು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಈ ನಿರ್ಧಾರ ಸ್ವಾಗತಿಸಿರುವ ಅವರು, 'ಬಾಲ್ಯವಿವಾಹ, ಬೇಗ ಮತ್ತು ಬಲವಂತವಾಗಿ ಮಾಡುವ ವಿವಾಹಗಳ ನಿರ್ಮೂಲನೆಯ ಅಂತಾರಾರಾಷ್ಟ್ರೀಯ ದಿನ'ವನ್ನು ಕರ್ನಾಟಕದ ಪ್ರತಿಯೊಂದು ಶಾಲೆಯಲ್ಲೂ ಆಚರಿಸುವಂತಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.

Child Marriage

2026 ಸೆಪ್ಟೆಂಬರ್ 4ರಂದು ವಿಶ್ವಸಂಸ್ಥೆಯಿಂದ ಅಂಗೀಕರಿಸಲ್ಪಟ್ಟ ಈ ಮಹತ್ವದ ನಿರ್ಣಯಕ್ಕೆ ಸಿಯೆರಾ ಲಿಯೋನ್ ಮತ್ತು ಭಾರತ ಸೇರಿದಂತೆ 66ಕ್ಕೂ ಹೆಚ್ಚು ದೇಶಗಳು ಸಹ-ಪ್ರಾಯೋಜಕರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾರತದಲ್ಲಿ 2024ರ ನವೆಂಬರ್ 27ರಂದು ಆರಂಭಿಸಲಾದ 'ಬಾಲ್ಯವಿವಾಹ ಮುಕ್ತ ಭಾರತ' ಅಭಿಯಾನದ ಸ್ಮರಣಾರ್ಥವಾಗಿ ದೇಶವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಕ್ಕಳ ಹಕ್ಕುಗಳ ಉಲ್ಲಂಘಿಸುವ ಬಾಲ್ಯ ವಿವಾಹ

ಬಾಲ್ಯವಿವಾಹವು ಕೇವಲ ಒಂದು ಸಾಮಾಜಿಕ ಸಮಸ್ಯೆಯಲ್ಲ. ಅದು ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ಅಭಿವೃದ್ಧಿಯ ಹಕ್ಕು, ರಕ್ಷಣೆ ಮತ್ತು ಘನತೆಯ ಹಕ್ಕುಗಳನ್ನು ಗಂಭೀರವಾಗಿ ಉಲ್ಲಂಘಿಸುವ ಮಾನವ ಹಕ್ಕುಗಳ ಸಮಸ್ಯೆಯಾಗಿದೆ. ವಿಶೇಷವಾಗಿ ಬಾಲಕಿಯರ ಶಿಕ್ಷಣ, ಆರೋಗ್ಯ, ಭವಿಷ್ಯದ ಅವಕಾಶಗಳು ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಕ್ಕಿನ ಮೇಲೆ ಇದರ ಪರಿಣಾಮ ಅತ್ಯಂತ ಗಂಭೀರವಾಗಿದೆ.

ಬಾಲ್ಯವಿವಾಹವು ದೇಶದ ಅಭಿವೃದ್ಧಿಗೂ ಮಾರಕವಾಗಿದೆ. ಮಕ್ಕಳು ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಬಾಲ್ಯದಲ್ಲಿಯೇ ವಿವಾಹ ಮತ್ತು ಕುಟುಂಬದ ಜವಾಬ್ದಾರಿಗಳಿಗೆ ಒಳಗಾದಾಗ, ದೇಶವು ತನ್ನ ಅಮೂಲ್ಯವಾದ ಮಾನವ ಸಂಪನ್ಮೂಲದ ಒಂದು ದೊಡ್ಡ ಭಾಗವನ್ನು ಕಳೆದುಕೊಳ್ಳುತ್ತದೆ. ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶ, ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಪ್ರಗತಿಯ ಮೇಲೂ ಇದು ನೇರ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬಾಲ್ಯವಿವಾಹ ನಿರ್ಮೂಲನೆ ಎನ್ನುವುದು ಕೇವಲ ಮಕ್ಕಳ ರಕ್ಷಣೆಯ ಕಾರ್ಯವಲ್ಲ. ಅದು ಭಾರತದ ಸಾಮಾಜಿಕ, ಆರ್ಥಿಕ ಮತ್ತು ಮಾನವ ಅಭಿವೃದ್ಧಿಯ ಭವಿಷ್ಯವನ್ನು ರಕ್ಷಿಸುವ ಕಾರ್ಯವೂ ಆಗಿದೆ. ಪ್ರತಿಯೊಂದು ಮಗು ಶಿಕ್ಷಣ ಪಡೆದು, ತನ್ನ ಸಾಮರ್ಥ್ಯವನ್ನು ಬೆಳೆಸಿಕೊಂಡು ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು. ಇದೆಲ್ಲ ಗಮನಿಸಿ ರಾಜ್ಯ ಸರ್ಕಾರ ನವೆಂಬರ್ 27ನ್ನು ಕೇವಲ ಒಂದು ದಿನದ ಆಚರಣೆಯಾಗಿ ಸೀಮಿತಗೊಳಿಸದೆ, ಮಕ್ಕಳಿಗೆ ಅರಿವು, ರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಯನ್ನು ತರುವ ಪ್ರಮುಖ ಶೈಕ್ಷಣಿಕ ದಿನವನ್ನಾಗಿ ರೂಪಿಸಬೇಕು. ಶಾಲೆಗಳಲ್ಲಿ ಈ ದಿನದ ಆಚರಣೆ ಜಾರಿಗೆ ತರಬೇಕು ಎಂಬಿತ್ಯಾದಿ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಬೇಕು?

* ಕರ್ನಾಟಕ ಸರ್ಕಾರವು ಪ್ರತಿಯೊಂದು ಸರ್ಕಾರಿ, ಅನುದಾನಿತ ಮತ್ತು ಸರ್ಕಾರೇತರ ಶಾಲೆಯಲ್ಲೂ ಪ್ರತಿವರ್ಷ ನವೆಂಬ‌ರ್ 27ರಂದು ಈ ದಿನವನ್ನು ಅಧಿಕೃತವಾಗಿ ಆಚರಿಸಲು ನಿರ್ದೇಶಿಸಬೇಕು.

* ಶಾಲೆಗಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳು, ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ ಹಾಗೂ ಬಾಲ್ಯ ವಿವಾಹ ತಡೆಯುವ ಕಾನೂನುಗಳ ಕುರಿತು ವಿಶೇಷ ಅರಿವು ಕಾರ್ಯಕ್ರಮ ಆಯೋಜಿಸಬೇಕು.

* ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಶಾಲಾ ನಿರ್ವಹಣಾ ಸಮಿತಿಗಳು ಮತ್ತು ಸ್ಥಳೀಯ ಸಮುದಾಯ ಒಳಗೊಂಡಂತೆ ಬಾಲ್ಯವಿವಾಹ ವಿರೋಧಿ ಪ್ರತಿಜ್ಞೆ, ಚರ್ಚೆ, ಪ್ರಬಂಧ/ಚಿತ್ರಕಲೆ ಸ್ಪರ್ಧೆ, ಜಾಗೃತಿ ರಾಲಿ ಮತ್ತು ಸಂವಾದ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸಬೇಕು.

* ಶಾಲಾ ಶಿಕ್ಷಕರು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಸಿಬ್ಬಂದಿಗೆ ಬಾಲ್ಯವಿವಾಹ ಗುರುತಿಸುವುದು, ತಡೆಯುವುದು ಮತ್ತು ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡುವ ತರಬೇತಿ ಕೊಡಬೇಕು.

* ಬಾಲ್ಯ ವಿವಾಹದ ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಶಿಕ್ಷಣ ಮುಂದುವರಿಸಲು ಮತ್ತು ಅಗತ್ಯ ರಕ್ಷಣಾ ಸೇವೆಗಳನ್ನು ಪಡೆಯಲು ಶಾಲೆ-ಮಕ್ಕಳ ರಕ್ಷಣಾ ವ್ಯವಸ್ಥೆಯ ನಡುವೆ ಪರಿಣಾಮಕಾರಿ ಸಂಪರ್ಕ ವ್ಯವಸ್ಥೆ ರೂಪಿಸಬೇಕು.

* ಈ ದಿನದ ಅಂಗವಾಗಿ ರಾಜ್ಯಮಟ್ಟದಲ್ಲಿ 'ಕರ್ನಾಟಕ- ಬಾಲ್ಯವಿವಾಹ ಮುಕ್ತ ರಾಜ್ಯ' ಎಂಬ ಗುರಿಯೊಂದಿಗೆ ದೀರ್ಘಕಾಲಿಕ ಜನಜಾಗೃತಿ ಮತ್ತು ಕಾರ್ಯಯೋಜನೆ ರೂಪಿಸಬೇಕು.

ಮಕ್ಕಳನ್ನು ಬಾಲ್ಯವಿವಾಹದಿಂದ ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ; ಅದು ಸಮಾಜದ ಪ್ರತಿಯೊಬ್ಬರ ನೈತಿಕ ಮತ್ತು ಕಾನೂನುಬದ್ಧ ಹೊಣೆಗಾರಿಕೆ. ಮಕ್ಕಳ ಬಾಲ್ಯವನ್ನು ರಕ್ಷಿಸಿದರೆ ದೇಶದ ಭವಿಷ್ಯ ರಕ್ಷಣೆ ಆಗುತ್ತದೆ. ಈ ಮೇಲಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾದರಿಯಾಗಬೇಕು ಎಂದು ನಾಗಸಿಂಹ ಜಿ.ರಾವ್ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+