ರಷ್ಯಾ ಉಕ್ರೇನ್ ಯುದ್ಧ ಪ್ರಭಾವ : ಕಾಗದ ಸಿಗದೇ ಪಠ್ಯ ಪುಸ್ತಕ ಮುದ್ರಣ ವಿಳಂಬ
ಬೆಂಗಳೂರು, ಏ. 21: ರಷ್ಯಾ ಉಕ್ರೇನ್ ಯುದ್ಧ ಹಾಗೂ ಕೋವಿಡ್ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಓದಿನ ಮೇಲೂ ಪರಿಣಾಮ ಬೀರಿದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧ ಹಾಗೂ ಕೋವಿಡ್ ಪರಿಣಾಮದಿಂದಾಗಿ ಮುದ್ರಣ ಕಾಗದದ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ನೋಟ್ ಪುಸ್ತಕಗಳ ಬೆಲೆ ದುಪ್ಪಟ್ಟಾಗಿದೆ. ಮುದ್ರಣ ಕಾಗದ ಸಿಗದೇ ಪರಿಣಾಮ ಪಠ್ಯ ಪುಸ್ತಕಗಳ ಮುದ್ರಣದ ಮೇಲೂ ಗಂಭೀರ ಪರಿಣಾಮ ಬಿದ್ದಿದ್ದು, ಸಕಾಲದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುವುದು ಅನುಮಾನ ಮೂಡಿಸಿದೆ.
ಪ್ರತಿ ವರ್ಷ ಮೇ ಮಾಹೆ ಮೊದಲನೇ ವಾರದೊಳಗೆ ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡುತ್ತಿತ್ತು. ಈ ವರ್ಷ ಇನ್ನೂ ಶೇ. 35 ರಷ್ಟು ಪಠ್ಯ ಪುಸ್ತಕಗಳು ಪೂರೈಕೆ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗುವ ಲಕ್ಷಣ ಗೋಚರಿಸುತ್ತಿದೆ.

ರಷ್ಯಾ ಉಕ್ರೇನ್ ಯುದ್ಧ ಹಾಗೂ ಕೋವಿಡ್ ನಿಂದಾಗಿ ಮುದ್ರಣ ಕಾಗದ ಅಭಾವ ಸೃಷ್ಟಿಯಾಗಿದೆ. ಅತಿ ಕಡಿಮೆ ಬೆಲೆಗೆ ಮುದ್ರಣ ಕಾಗದ ಚೀನಾದಿಂದ ಅಮದು ಮಾಡಿಕೊಳ್ಳಲಾಗುತ್ತಿತ್ತು. ಭಾರತದಲ್ಲಿ ತಯಾರಾಗುವ ಮುದ್ರಣ ಕಾಗದ ಹೊರ ದೇಶಗಳಿಗೆ ರಫ್ತು ಆಗುತ್ತಿತ್ತು. ಕೋವಿಡ್ ಹಾಗೂ ರಷ್ಯಾ ಉಕ್ರೇನ್ ಯುದ್ಧ ಹಾಗೂ ಕೋವಿಡ್ ನಿಂದಾಗಿ ಜಾಗತಿಕವಾಗಿ ಮುದ್ರಣ ಕಾಗದ ಬೆಲೆ ದುಬಾರಿಯಾಗಿದೆ.
ಈ ಹಿಂದೆ ಒಂದು ಕೆ.ಜಿ ಮುದ್ರಣ ಕಾಗದ ದ ಬೆಲೆ 60 ರೂ. ಇತ್ತು. ಇದೀಗ 85 ರೂ. ಆಗಿದೆ. ಇದಕ್ಕೆ ಜಿಎಸ್‌ಟಿ ಪ್ರತ್ಯೇಕವಾಗಿ ಪಾವತಿ ಮಾಡಬೇಕು. ರಾಜ್ಯದಲ್ಲಿ ಕೇವಲ ಪಠ್ಯ ಪುಸ್ತಕ ಮುದ್ರಣಕ್ಕೆ ಸಾವಿರಾರು ಟನ್ ಕಾಗದ ಬೇಕು. ಇದರ ಜತೆಗೆ ನೋಟ್ ಪುಸ್ತಕಗಳಿಗೆ ಇದರ ನಾಲ್ಕು ಪಟ್ಟು ಕಾಗದ ಬೇಕಾಗಿದ್ದು, ಕಾಗದಕ್ಕೆ ಎದುರಾಗಿರುವ ಅಭಾವದಿಂದ ಪುಸ್ತಕೋದ್ಯಮ ಭಾರಿ ಸಂಕಷ್ಟ ಎದುರಿಸುವಂತಾಗಿದೆ.
''ರಾಜ್ಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಮುದ್ರಣಾಲಯಗಳಿವೆ. ಪ್ರತಿ ಮುದ್ರಕನಿಗೂ ದಿನಕ್ಕೆ 350 ಟನ್‌ಗೂ ಅಧಿಕ ಕಾಗದ ಅಗತ್ಯವಿದ್ದು, ಸದ್ಯಕ್ಕೆ 50 ಟನ್ ಕಾಗದ ಸಿಗುವುದು ಕಷ್ಟಕರವಾಗಿದೆ. ಹೀಗಾಗಿ ರಾಜ್ಯದಲ್ಲಿ ಶೇ. 35 ರಷ್ಟು ಸರ್ಕಾರಿ ಪಠ್ಯ ಪುಸ್ತಕ ಮುದ್ರಣವಾಗಿದೆ. ಎಲ್ಲಾ ಪುಸ್ತಕ ಮುದ್ರಣವಾಗಲು ಒಂದೂವರೆ ತಿಂಗಳಾದರೂ ಬೇಕು,'' ಎನ್ನುತ್ತಾರೆ ಪಠ್ಯ ಪುಸ್ತಕ ವಿತರಣೆಕಾರ ಅಧಿಕಾರಿ.
ನೋಟ್ ಪುಸ್ತಕ ಬೆಲೆ ದುಬಾರಿ:
ಈ ಹಿಂದೆ ಕೇವಲ 72 ಪುಟಗಳ ನೋಟ್ ಪುಸ್ತಕ 15 ರೂ. ಗೆ ಸಿಗುತ್ತಿತ್ತು. ಇದೀಗ ಒಂದು ಪುಸ್ತಕದ ಬೆಲೆ 22 ರೂ. ಆಗಿದೆ. ಇನ್ನೂ 162 ಪುಟದ ನೋಟ್ ಪುಸ್ತಕ 34 ರೂ. ಆಗಿದೆ. ಅದರಲ್ಲೂ ಗುಣಮಟ್ಟದ ನೋಟ್ ಪುಸ್ತಕವೊಂದಕ್ಕೆ 36 ರಿಂದ 40 ರೂ. ಆಗಿದ್ದು, ಓದುವ ಮಕ್ಕಳ ಪಸ್ತಕಗಳ ಬೆಲೆಗೆ ದುಪ್ಪಟ್ಟು ಬೆಲೆ ತೆರವಂತಾಗಿದೆ.












Click it and Unblock the Notifications