UKP Land: ಯುಕೆಪಿ ಭೂಸ್ವಾಧೀನಕ್ಕೆ ಪರಿಹಾರ: ಎಕರೆಗೆ 40 ಲಕ್ಷ ರೂ., ಒಣಭೂಮಿಗೆ 30 ಲಕ್ಷ ರೂ.; 15 ಸಾವಿರ ಎಕರೆಗೆ ಹಣ ವಿತರಣೆ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-1 ಮತ್ತು 2ರ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು ಹಾಗೂ ಹಂತ-3ರ ವ್ಯಾಪ್ತಿಯಲ್ಲಿ ನಿಯಮಾನುಸಾರ ಪ್ರೊಪೋರ್ಷನೇಟ್ ಆಧಾರದಲ್ಲಿ ಭೂಸ್ವಾಧೀನ ಕೈಗೊಳ್ಳಬೇಕೆಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟ ಸೂಚನೆ ನೀಡಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 184 ಗ್ರಾಮಗಳ ಜಮೀನು ಸ್ವಾಧೀನ ಕುರಿತು ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಚಿವರು ಮಾತನಾಡಿದರು. ಅಧಿಕಾರಿಗಳು ಮನಸೋಇಚ್ಛೆ ಕೆಲಸ ಮಾಡದೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯೋಜನೆ ವ್ಯಾಪ್ತಿಯ ಸಚಿವರು ಹಾಗೂ ಶಾಸಕರು ಭೂಸ್ವಾಧೀನದ ಹಂತಗಳ ಕುರಿತು ಪತ್ರದ ಮೂಲಕವೂ ಸಲಹೆಗಳನ್ನು ನೀಡಬಹುದು ಎಂದು ಸಚಿವರು ತಿಳಿಸಿದರು.

UKP Land Acquisition 40 Lakh per Acre for Irrigated Land 30 Lakh for Dry Land N Cheluvarayaswamy

ಪ್ರತಿ ಎಕರೆ ಭೂಮಿಗೆ ದರ ನಿಗದಿ

​ಕಳೆದ ವರ್ಷ ಹೊರಡಿಸಲಾದ ಸರ್ಕಾರಿ ಆದೇಶದನ್ವಯ (ಜಿಒ) ಪ್ರತಿ ಎಕರೆ ಭೂಮಿಗೆ ದರ ನಿಗದಿಯಾಗಿದ್ದು, ಕಟ್ಟಡಗಳ ಪರಿಹಾರ ದರ ನಿಗದಿಯಲ್ಲಿ ಗೊಂದಲಗಳಿದ್ದರೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದು ಸ್ಪಷ್ಟತೆ ಪಡೆಯಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಮಾರ್ಗಸೂಚಿ ಪ್ರಕಟಿಸಲಾಗುವುದು. ಪುನರ್ವಸತಿ ಕಲ್ಪಿಸಲು ಜಮೀನು ಗುರುತಿಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದ್ದು, ಪುನರ್ವಸತಿ ಕೇಂದ್ರಗಳಲ್ಲಿ ಕೆಲವರು ಕೋಟ್ಯಂತರ ರೂಪಾಯಿಗಳ ಮಾರಾಟ ಒಪ್ಪಂದ (ಸೇಲ್ ಅಗ್ರಿಮೆಂಟ್) ಮಾಡಿಕೊಂಡಿರುವ ಆರೋಪಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಶೀಘ್ರದಲ್ಲೇ ಪ್ರತ್ಯೇಕ ಸಭೆ

ಸಂತ್ರಸ್ತರ ಹಿತದೃಷ್ಟಿಯಿಂದ ಆರ್.ಸಿ. ಶೆಲ್ಟರ್ ಕುರಿತು ಪ್ರತ್ಯೇಕ ಸಭೆ ನಡೆಸುವ ತೀರ್ಮಾನವನ್ನೂ ಸಭೆಯಲ್ಲಿ ಪ್ರಕಟಿಸಿದರು. ಮುಳುಗಡೆಯಾಗಲಿರುವ 184 ಗ್ರಾಮಗಳ ಪೈಕಿ ವಿವಿಧ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ 79 ಗ್ರಾಮಗಳಿಗೆ ಆದ್ಯತೆ ನೀಡುವುದು, ಇನ್ನೂ ಅಧಿಸೂಚನೆ ಹೊರಡಿಸಬೇಕಿರುವ 87 ಗ್ರಾಮಗಳನ್ನು ಪ್ರವಾಹ ಬಾಧಿತ ಸ್ಥಿತಿಗತಿಯ ಆಧಾರದ ಮೇಲೆ ಸ್ವಾಧೀನಪಡಿಸಿಕೊಳ್ಳುವುದು ಹಾಗೂ ಕೊನೆಯ ಹಂತದ ಗ್ರಾಮಗಳನ್ನು ಅಂತಿಮವಾಗಿ ಪರಿಗಣಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಪ್ರಸಕ್ತ ವರ್ಷ ಒಟ್ಟು 75,563 ಎಕರೆ ಜಮೀನಿನ ಪೈಕಿ ಅಂದಾಜು 15,000 ಎಕರೆಗೆ ಪರಿಹಾರ ವಿತರಿಸುವ ಗುರಿಯಿದೆ. ಈ ಪೈಕಿ ಬಬಲೇಶ್ವರ ವ್ಯಾಪ್ತಿಯ 5,600 ಎಕರೆಯಲ್ಲಿ ಕನಿಷ್ಠ 1,000 ಎಕರೆಗಾದರೂ ತಕ್ಷಣವೇ ಪರಿಹಾರ ನೀಡಬೇಕು. ಈಗಾಗಲೇ 18 ಗ್ರಾಮಗಳಿಗೆ ಹಣ ಬಿಡುಗಡೆಯಾಗಿದ್ದರೂ ವಿಜಯಪುರ ಜಿಲ್ಲೆಯ ಗ್ರಾಮಗಳು ಅದರಲ್ಲಿ ಸೇರಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಪ್ರಸ್ತುತ ಪ್ರಸ್ತಾಪಿಸಲಾಗಿರುವ 3,000 ಕೋಟಿ ರೂ. ಮೊತ್ತದಲ್ಲಿ ಯೋಜನಾ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಿಗೆ ತಲಾ 500 ಕೋಟಿ ರೂ. ಹಂಚಿಕೆ ಮಾಡುವ ಭರವಸೆ ನೀಡಿದರು.

UKP Land: ಏನಿದು ಯೋಜನೆ?

​ಆಲಮಟ್ಟಿ ಅಣೆಕಟ್ಟಿನ ಗೇಟುಗಳ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಿ 100 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹಿಸುವುದು ಮತ್ತು 9 ಉಪ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಒಟ್ಟು 1,33,867 ಎಕರೆ ಭೂಸ್ವಾಧೀನದ ಅಗತ್ಯವಿದೆ. ಈ ಹಿಂದೆ ಎಕರೆಗೆ 2 ಲಕ್ಷ ರೂ. ಇದ್ದ ಪರಿಹಾರವನ್ನು, ಕಳೆದ ವರ್ಷ ನೀರಾವರಿ ಜಮೀನಿಗೆ 40 ಲಕ್ಷ ರೂ. ಹಾಗೂ ಒಣಭೂಮಿಗೆ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಈಗಾಗಲೇ 18 ಗ್ರಾಮಗಳ ಭೂಸ್ವಾಧೀನ ಮುಕ್ತಾಯಗೊಂಡಿದ್ದು, ಉಳಿದ 166 ಗ್ರಾಮಗಳ 71,284 ಎಕರೆ ಪ್ರದೇಶದ ಸ್ವಾಧೀನ ಬಾಕಿಯಿದೆ. ಕೆಲವು ನ್ಯಾಯಾಲಯ ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ.

​ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪುರ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಣ ಸವದಿ, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್) ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

UKP Land: ಹಿನ್ನೀರಿನ ಭಾದೀತರೊಂದಿಗೆ ಸಭೆ

ಯುಕೆಪಿ -3 ಸಭೆ ಬಳಿಕ ದೇವದುರ್ಗ ತಾಲೂಕಿನ ರಾಮದುರ್ಗ ಕೆರೆಯ ಹಿನ್ನೀರಿನಿಂದ ಭಾದೀತರಾಗಿರುವ ಗೋವಿಂದಪಲ್ಲಿ ಹಾಗೂ ಕರಡಿಗುಡ್ಡ ಗ್ರಾಮಗಳ ಜಮೀನುಗಳ ಭೂ ಸ್ವಾಧೀನ ಕುರಿತು ಸಭೆ ನಡೆಸಿದ ಸಚಿವರು, ಭಾದೀತ ರೈತರಿಗೆ ಪರಿಹಾರ ನೀಡುವ ಸಂಬಂಧ ಭರವಸೆ ನೀಡಿದರು. ಭಾದೀತ 243.43 ಎಕರೆ ಭೂಮಿಗೆ ಪರಿಹಾರ ನೀಡವ ಸಲುವಾಗಿ ಹಿನ್ನೀರಿನಿಂದ ಸಮಸ್ಯೆಯಾಗಿರುವ ಗ್ರಾಮಗಳ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ನೀಡಲು ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+