ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ
ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರ ಶಿಸ್ತು ಮತ್ತು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ವಸ್ತ್ರ ಸಂಹಿತೆ (Dress Code) ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಪರ್ಯಾಯ ಶೀರೂರು ಮಠದ ಆಡಳಿತವು ಜೀನ್ಸ್ ಪ್ಯಾಂಟ್, ಟೀ-ಶರ್ಟ್, ಮತ್ತು ಬರ್ಮುಡಾಗಳಂತಹ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿ ದೇವರ ದರ್ಶನಕ್ಕೆ ಬರುವುದನ್ನು ನಿಷೇಧಿಸಿದೆ.
ವಸ್ತ್ರ ಸಂಹಿತೆ ಇಡೀ ದಿನಕ್ಕೆ ವಿಸ್ತರಣೆ: ಇದುವರೆಗೆ ಮಧ್ಯಾಹ್ನದ ಮಹಾಪೂಜೆಯವರೆಗೆ ಮಾತ್ರ ಪುರುಷರು ಅಂಗಿ (ಶರ್ಟ್) ಮತ್ತು ಬನಿಯನ್ ತೆಗೆದು, ಪಂಚೆ ಅಥವಾ ಶಲ್ಯ ಧರಿಸಿ ದೇವರ ಗರ್ಭಗುಡಿಯ ಸುತ್ತು ಪೌಳಿಯನ್ನು ಪ್ರವೇಶಿಸಬೇಕಿತ್ತು. ಆದರೆ ಈಗ ಈ ನಿಯಮವನ್ನು ಇಡೀ ದಿನಕ್ಕೆ ವಿಸ್ತರಿಸಲಾಗಿದೆ. ವಸ್ತ್ರಸಂಹಿತೆಯ ವಿವರ ಹೀಗಿದೆ.

ಪುರುಷರಿಗೆ: ದೇವಸ್ಥಾನದ ಒಳ ಪ್ರವೇಶಿಸುವಾಗ ಶರ್ಟ್, ಬನಿಯನ್ ತೆಗೆಯುವುದು ಕಡ್ಡಾಯ. ಮೈಮೇಲೆ ಶಲ್ಯ ಹೊದ್ದುಕೊಳ್ಳಬಹುದು.
ಮಹಿಳೆಯರಿಗೆ: ಸೀರೆ, ಚೂಡಿದಾರ್ ಅಥವಾ ಸಭ್ಯವಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರಬೇಕು.
ನಿಷೇಧಿತ ಉಡುಪುಗಳು: ಜೀನ್ಸ್, ಟೀ-ಶರ್ಟ್, ಸ್ಲೀವ್‌ಲೆಸ್ (ತೋಳಿಲ್ಲದ) ಬಟ್ಟೆಗಳು, ಬರ್ಮುಡಾ ಮತ್ತು ಶಾರ್ಟ್ಸ್ ಧರಿಸಿ ಬರುವಂತಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪರ್ಯಾಯ ಶೀರೂರು ಮಠದ ದಿವಾನರಾದ ಡಾ ಉದಯಕುಮಾರ್ ಸರಳತ್ತಾಯ, "ಉಡುಪಿಗೆ ಪ್ರವಾಸಕ್ಕೆಂದು ಬರುವವರು ಬೀಚ್‌ಗಳಿಗೆ ಧರಿಸುವ ಉಡುಪುಗಳಲ್ಲೇ ದೇವಸ್ಥಾನಕ್ಕೂ ಬರುತ್ತಾರೆ. ಇದರಿಂದ ಇತರೆ ಭಕ್ತರ ಏಕಾಗ್ರತೆಗೆ ಮತ್ತು ಮಠದ ಧಾರ್ಮಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ. ದೇವಸ್ಥಾನಕ್ಕೆ ಬರುವವರು ಕೃಷ್ಣ ಭಕ್ತರಾಗಿಯೇ ಬರಬೇಕು. ಹಾಗಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಸೂಕ್ತ ಉಡುಪು ಧರಿಸದವರಿಗೆ ಮಠದ ವತಿಯಿಂದಲೇ ಶಲ್ಯಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ದರ್ಶನ ಅವಧಿ ವಿಸ್ತರಣೆ: ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತು ಸಾಲುಗಟ್ಟಿ ನಿಲ್ಲುವ ಭಕ್ತರಿಗೆ ಅನುಕೂಲವಾಗಲು ದೇವರ ದರ್ಶನದ ಅವಧಿಯನ್ನೂ ವಿಸ್ತರಿಸಲಾಗಿದೆ. ಇನ್ನು ಮುಂದೆ ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಮಠದ ಮೂಲಗಳು ತಿಳಿಸಿವೆ.












Click it and Unblock the Notifications