ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ವರ್ಗಾವಣೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಜೂನ್ 25 : ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ವಿಶಾಲ್ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಇನ್ನೂ ಯಾರನ್ನು ನೇಮಕ ಮಾಡಿಲ್ಲ.

ಶುಕ್ರವಾರ 20ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಆರ್.ವಿಶಾಲ್ ಅವರನ್ನು ಪೌರಾಡಳಿತ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. [ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆ : ಪರ, ವಿರೋಧ ಪ್ರತಿಭಟನೆ]

r vishal

ಡಾ.ವಿಶಾಲ್ ತೆರವುಗೊಳಿಸುವ ಜಿಲ್ಲಾಧಿಕಾರಿ ಸ್ಥಾನವನ್ನು ಮುಂದಿನ ಆದೇಶದವರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಭಾರಿಯಾಗಿ ನಿರ್ವಹಿಸಲಿದ್ದಾರೆ. [ಬಿಡಿಎ ಆಯುಕ್ತ ಶ್ಯಾಂ ಭಟ್ ವರ್ಗಾವಣೆ]

ಸಂತಸ ತಂದಿದೆ : ವರ್ಗಾವಣೆ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ಡಾ.ವಿಶಾಲ್ ಅವರು, 'ತಮಗಿದು ಸಂತಸ ತಂದಿದೆ. ತಾನು ಹಿರಿಯ ಅಧಿಕಾರಿಯಾಗಿರುವುದರಿಂದ ಕೆಲ ಸಮಯದಿಂದ ಇದನ್ನು ನಿರೀಕ್ಷಿಸಿದ್ದೆ. ಇದೀಗ ಪೌರಾಡಳಿತ ನಿರ್ದೇಶಕನಾಗಿ ನೇಮಕಗೊಂಡಿರುವುದರಿಂದ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಇಲಾಖೆಯ ಆಡಳಿತದಡಿ ಬರುತ್ತದೆ. ಹೀಗಾಗಿ ಉಡುಪಿಯೊಂದಿಗಿನ ನನ್ನ ಸಂಬಂಧ ಮುಂದುವರಿಯಲಿದೆ' ಎಂದರು. [ಯುಪಿಎಸ್ಸಿ: ಕರ್ನಾಟಕದ ಸಾಧಕರಿಗೊಂದು ಅಭಿನಂದನೆ]

'ಉಡುಪಿಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಉತ್ತಮವಾಗಿತ್ತು. ಜಿಲ್ಲೆಯ ಎಲ್ಲರಿಂದಲೂ ನನಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಸರ್ಕಾರಿ ಸೇವೆಯಲ್ಲಿ ನಾವು ಒತ್ತಡಗಳ ಮಧ್ಯೆಯೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದನ್ನು ಸವಾಲಾಗಿ ಸ್ವೀಕರಿಸಿ ನಾವು ಕೆಲಸ ಮಾಡಬೇಕು. ಆದರೆ ಇಲ್ಲಿ ನನಗೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ' ಎಂದು ಹೇಳಿದರು.

ವೈದ್ಯಕೀಯ ಪದವೀಧರ : ಡಾ.ಆರ್.ವಿಶಾಲ್ ಅವರು ಮೂಲತಃ ಹುಬ್ಬಳ್ಳಿಯವರು. ಹುಬ್ಬಳ್ಳಿಯ ಕಿಮ್ಸ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ. 2004ನ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಇವರು ಚಿಕ್ಕಬಳ್ಳಾಪುರ ಮತ್ತು ಕಲಬುರಗಿ ಜಿಲ್ಲಾಧಿಕಾರಿಗಳಾಗಿ ಕೆಲಸ ನಿರ್ವಹಿಸಿದ್ದಾರೆ. 2014ರಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi deputy commissioner R.Vishal transferred to Bengaluru as director of municipal administration. On Friday, June 24, 2016 Karnataka government issued transfer ordered.
Please Wait while comments are loading...