ಸುರ್ಜೇವಾಲ ಸಭೆಗೆ ಇಬ್ಬರು ಸಚಿವರು ಗೈರು, ಹೈಕಮಾಂಡ್ ಗರಂ
ಬೆಂಗಳೂರು, ಜನವರಿ 13: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನಲ್ಲಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದು, ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಹ ಮಾತನಾಡಿದರು. ಕಾಂಗ್ರೆಸ್ ಸರ್ವ ಸದಸ್ಯರ ಸಭೆಯನ್ನು ಸಹ ಅವರು ನಡೆಸಿದ್ದಾರೆ. ಆದರೆ ಈ ಸಭೆಗೆ ಇಬ್ಬರು ಸಚಿವರು ಗೈರಾಗಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲಾ ಭಾನುವಾರವೇ ಬೆಂಗಳೂರು ನಗರಕ್ಕೆ ಆಗಮಿಸಿದ್ದರು. ಸೋಮವಾರ ಅವರು ಕೆಪಿಸಿಸಿ ಕಛೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಇಬ್ಬರು ಸಚಿವರು ಗೈರು: ರಣದೀಪ್ ಸಿಂಗ್ ಸುರ್ಜೇವಾಲಾ ಕೆಪಿಸಿಸಿ ಕಛೇರಿಯಲ್ಲಿ ನಡೆಸಿದ ಸಭೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಹಕಾರ ಸಚಿವ ಕೆ. ಎನ್. ರಾಜಣ್ಣ ಗೈರಾಗಿದ್ದರು. ಸಚಿವರ ಗೈರು ಹಾಜರಿ ಬಗ್ಗೆ ಡಿ. ಕೆ. ಶಿವಕುಮಾರ್ ಅವರಿಂದ ಅವರು ಮಾಹಿತಿಯನ್ನು ಪಡೆದುಕೊಂಡರು.
ಸಚಿವರ ಗೈರು ಹಾಜರಿಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಕೆಲಸಕ್ಕಿಂತ ಮುಖ್ಯವಾದ ಕಾರ್ಯಕ್ರಮ ಏನಿತ್ತು?, ಗೈರಾಗಲು ಅನುಮತಿಯನ್ನು ಪಡೆದಿದ್ದಾರೆಯೇ? ಎಂದು ಡಿ. ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು.
ಅನುಮತಿ ಪಡೆದಿರುವ ವಿಚಾರ ತಮಗೆ ಗೊತ್ತಿಲ್ಲ. ಸಭೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿತ್ತು. ಸಭೆಗೆ ಹಾಜರಾಗುವಂತೆ ಎಲ್ಲರಿಗೂ ಸೂಚನೆ ನೀಡಲಾಗಿತ್ತು ಎಂದು ಡಿ. ಕೆ. ಶಿವಕುಮಾರ್ ರಣದೀಪ್ ಸಿಂಗ್ ಸುರ್ಜೇವಾಲಾಗೆ ಮಾಹಿತಿ ಕೊಟ್ಟರು.
ಬಿಜೆಪಿ ವಿರುದ್ಧ ಸುರ್ಜೇವಾಲಾಗೆ ಟೀಕೆ: ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಣದೀಪ್ ಸಿಂಗ್ ಸುರ್ಜೇವಾಲಾಗೆ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ವಿರುದ್ಧ ಟೀಕೆಗಳನ್ನು ಮಾಡಿದರು. "ತಮ್ಮ ದುಷ್ಕೃತ್ಯ ಮತ್ತು ವೈಫಲ್ಯಗಳನ್ನು ಮರೆ ಮಾಚಲು ಕಾಂಗ್ರೆಸ್ ಪಕ್ಷ ಮತ್ತು ಅದರ ಗ್ಯಾರಂಟಿ ಯೋಜನೆಗಳ ಮೇಲೆ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ" ಎಂದು ಆರೋಪಿಸಿದರು.
'ಬಿಜೆಪಿ, ಜೆಡಿಎಸ್ ಕೇವಲ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮೇಲೆ ದಾಳಿ ಮಾಡುತ್ತಿಲ್ಲ. ಕರ್ನಾಟಕದ ಜನರ ಮೇಲೆ ದಾಳಿ ನಡೆಸುತ್ತಿವೆ. ಗ್ಯಾರಂಟಿ ಯೋಜನೆಗಳ ಮೇಲೆ ಅವರ ದಾಳಿ ದುರುದ್ದೇಶ ಪೂರಿತವಾಗಿದೆ" ಎಂದರು.
"ಕರ್ನಾಟಕ ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿ ಬರುತ್ತಿರುವ ಮಾತುಗಳು ಉಹಾಪೋಹ. ಕಾಂಗ್ರೆಸ್ ಪಕ್ಷ, ಸರ್ಕಾರ ಒಗ್ಗಟ್ಟಾಗಿದೆ. ಬಿಜೆಪಿ, ಜೆಡಿಎಸ್‌ನ ಭಿನ್ನಾಭಿಪ್ರಾಯಗಳನ್ನು ಮುಚ್ಚಿಕೊಳ್ಳಲು, ಕಾಂಗ್ರೆಸ್ ವಿರುದ್ಧ ಕಥೆಗಳನ್ನು ಹಣೆಯುತ್ತಿವೆ" ಎಂದು ದೂರಿದರು.
"ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಒಡಕಿಲ್ಲ. ಸಿಎಂ, ಡಿಸಿಎಂ ನಡುವೆ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ವಿರೋಧ ಪಕ್ಷಗಳ ಆಧಾರ ರಹಿತ ಆರೋಪಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ" ಎಂದರು.
ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಈ ಸಿಎಲ್‌ಪಿ ಸಭೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications