ಬುಧವಾರ ಸಂಪುಟ ವಿಸ್ತರಣೆ : ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ?
ಬೆಂಗಳೂರು, ಜೂನ್ 02 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸಿಕ್ಕಿದೆ. ಬುಧವಾರ ಮೂವರು ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವುದು ಖಚಿತವಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶನಿವಾರ ರಾತ್ರಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ಸೋಮವಾರವೇ ಸಂಪುಟ ವಿಸ್ತರಣೆಗೆ ಚಿಂತನೆ ನಡೆದಿತ್ತು. ಆದರೆ, ಅಮಾವಾಸ್ಯೆ ಎಂಬ ಕಾರಣಕ್ಕೆ ಬುಧವಾರಕ್ಕೆ ಮುಂದೂಡಲಾಗಿದೆ.
ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಇಬ್ಬರು ಪಕ್ಷೇತರರು ಸಂಪುಟ ಸೇರುವುದು ಖಚಿತವಾಗಿದೆ. ಇನ್ನೊಂದು ಸ್ಥಾನ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್ ಕೋಟಾದ 2, ಕಾಂಗ್ರೆಸ್ ಕೋಟಾದ 1 ಸ್ಥಾನ ಸಂಪುಟದಲ್ಲಿ ಖಾಲಿ ಇದೆ.
ಸಂಪುಟ ಪುನಾರಚನೆಗೆ ತಾತ್ಕಾಲಿಕ ತಡೆ, ವಿಸ್ತರಣೆಗೆ ಹಸಿರು ನಿಶಾನೆ
ಹಲವು ಕಾಂಗ್ರೆಸ್ ಶಾಸಕರು ಸಂಪುಟ ಸೇರುವ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಕೋಟಾದಲ್ಲಿದ್ದ 2 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದು ಜೆಡಿಎಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಲಿದೆಯೇ? ಎಂದು ಕಾದು ನೋಡಬೇಕು.....

ಮೂರು ಸ್ಥಾನಗಳ ಭರ್ತಿ
ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಖಾಲಿ ಇರುವ 3 ಸ್ಥಾನಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಇಬ್ಬರು ಪಕ್ಷೇತರರು, ಮತ್ತೊಬ್ಬರು ಕಾಂಗ್ರೆಸ್ ಶಾಸಕರು ಸಂಪುಟ ಸೇರಲಿದ್ದಾರೆ. ಜೆಡಿಎಸ್ ಕೋಟಾದಲ್ಲಿದ್ದ 2 ಸ್ಥಾನಗಳನ್ನು ಪಕ್ಷೇತರ ಶಾಸಕರಿಗೆ ನೀಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸೇರುವವರು ಯಾರು?
ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಮುಳುಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್, ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಮತ್ತೊಂದು ಸ್ಥಾನಕ್ಕೆ ಕಾಂಗ್ರೆಸ್‌ನ ಶಾಸಕರೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಬಿ.ಸಿ.ಪಾಟೀಲ್, ಡಿ.ಸುಧಾಕರ್?
ಕಾಂಗ್ರೆಸ್ ಕೋಟಾದಿಂದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಿ.ಸುಧಾಕರ್ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಯಾರನ್ನು ಸೇರಿಸಿಕೊಳ್ಳಬೇಕು ಎಂದು ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

ರಮೇಶ್ ಜಾರಕಿಹೊಳಿ ಸಂಪುಟಕ್ಕೆ?
ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂಬ ಸುದ್ದಿಯೂ ಹಬ್ಬಿದೆ. ಅವರ ಮನವೊಲಿಸುವ ಜವಾವ್ದಾರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ.

ಸರ್ಕಾರ ಉಳಿಸಿಕೊಳ್ಳುವ ಕಸರತ್ತು
ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ವಿವಿಧ ತಂತ್ರಗಳನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಆದ್ದರಿಂದ, ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ. ಎಚ್.ನಾಗೇಶ್ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ಬಾರಿ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದರು.