ನಟ ಸುದೀಪ್ ಪಾರ್ಟಿಯಲ್ಲಿ ಡಿಕೆಶಿ ಜೊತೆ ಗುಪ್ತ ಮಾತುಕತೆ ನಡೆಸಿದ ಇಬ್ಬರು ಬಿಜೆಪಿ ನಾಯಕರು- ವದಂತಿಗಳಿಗೆ ರೆಕ್ಕೆಪುಕ್ಕ
ಬೆಂಗಳೂರು, ಸೆಪ್ಟೆಂಬರ್ 04: ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪಾರ್ಟಿಗೆ ಸಂಬಂಧಿಸಿದ ಫೋಟೊಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿವೆ. ಈ ಪಾರ್ಟಿಯಲ್ಲಿ ರಾಜ್ಯದ ಹಲವು ರಾಜಕೀಯ ನಾಯಕರು ಹಾಗೂ ಸಿನಿಮಾ ಸ್ಟಾರ್‌ಗಳು ಪಾಲ್ಗೊಂಡಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಪಾರ್ಟಿಯಲ್ಲಿ ಹಾಜರಿದ್ದರು. ಅವರೊಂದಿಗೆ ಇಬ್ಬರು ಬಿಜೆಪಿ ನಾಯಕರು ಆಪ್ತವಾಗಿ ಮಾತುಕತೆ ನಡೆಸಿರುವ ಫೋಟೊಗಳು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.
ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್, ಆರ್‌ಆರ್‌ನಗರ ಶಾಸಕ ಎನ್ ಮುನಿರತ್ನ, ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್‌ಗೆ ತೆರಳುವ ಸಾಧ್ಯತೆ ಇದೆ ಎಂಬ ಮಾತುಗಳು ಈಗಾಗಲೇ ಹರಿದಾಡುತ್ತಿವೆ.

ಈ ವದಂತಿಗಳ ನಡುವೆಯೇ ಮತ್ತೆ ಇಬ್ಬರು ಬಿಜೆಪಿ ನಾಯಕರು ಡಿಕೆಶಿ ಜೊತೆ ಮಾತುಕತೆ ನಡೆಸಿರುವುದು ತೀವ್ರ ಕೂತುಹಲಕ್ಕೆ ಕಾರಣವಾಗಿದೆ. 2019 ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಬಿಸಿ ಪಾಟೀಲ್ ಅವರು ಡಿಕೆಶಿ ಜೊತೆ ಆಪ್ತವಾಗಿ ಮಾತನಾಡತ್ತಿರುವ ಪೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಲ್ಲದೇ ಬಿಜೆಪಿ ಶಾಸಕ ನರಸಿಂಹ ನಾಯಕ್ ( ರಾಜುಗೌಡ ) ಸಹ ಈ ಇಬ್ಬರು ನಾಯಕರ ಜೊತೆ ಗುಪ್ತವಾಗಿ ಮಾತುಕತೆ ನಡೆಸುತ್ತಿರುವುದು ಫೋಟೊದಲ್ಲಿ ಕಂಡುಬಂದಿದೆ.
ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ನಟ ಸುದೀಪ್ ಅವರ ಹುಟ್ಟುಹಬ್ಬದ ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ಸುರಪುರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ರಾಜುಗೌಡ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿಸಿ ಪಾಟೀಲ್ ಅವರು ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಜುಗೌಡ, 'ಯಾವುದೇ ಆಪರೇಷನ್ ಇಲ್ಲ. ನನಗೆ ಯಾವುದೇ ಕಾಯಿಲೆ ಇಲ್ಲ. ಯಾವುದೇ ಸಮಸ್ಯೆ ಇಲ್ಲ. ನಿನ್ನೆ ಸುದೀಪ್ ಹುಟ್ಟುಹಬ್ಬವಿತ್ತು. ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಅದನ್ನು ಆಚರಿಸಲು ನಾವೆಲ್ಲರೂ ಒಟ್ಟಾಗಿದ್ದೆವು. ಅಲ್ಲಿಗೆ ಹೋದ ತಕ್ಷಣ ಬಿಸಿ ಪಾಟೀಲ್ ಅವರು ಸಿಕ್ಕರು. ಅವರು ಜೊತೆ ನಾನು ವಿಚಾರಗಳ ಕುರಿತು ಚರ್ಚೆ ನಡೆಸಿದೆ' ಎಂದು ಅವರು ಹೇಳಿದ್ದಾರೆ.

ಆ ಬಳಿಕ ಡಿಕೆ ಶಿವಕುಮಾರ್ ಕೂಡ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ನಟರು, ನಿರ್ದೇಶಕರು ಇದ್ದರು. ಇದು ನಮ್ಮಲ್ಲಿ ಕಡಿಮೆ ರಾಜಕಾರಣಿಗಳಿದ್ದರು. ನಾವು ಸೌಹಾರ್ದಯುತವಾಗಿ ಮಾತನಾಡಿದೆವು. ನಾನು ಪಕ್ಷವನ್ನು ಬಿಡಲು ಯಾವುದೇ ಕಾರಣವಿಲ್ಲ. ಕಷ್ಟದ ಸಮಯದಲ್ಲಿ ಅದರೊಂದಿಗೆ ನಿಲ್ಲುತ್ತೇನೆ ಎಂದು ರಾಜುಗೌಡ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಬಿಸಿ ಪಾಟೀಲ್, ನಾನು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ.
'ನಾನು ಮತ್ತೆ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ. ಸುದೀಪ್ ಹುಟ್ಟುಹಬ್ಬಕ್ಕೆ ಡಿಕೆ ಶಿವಕುಮಾರ್ ಆಗಮಿಸಿದ್ದರು. ನಾನು ಮತ್ತು ರಾಜುಗೌಡ ಕೂಡ ಇದ್ದೆವು. ಮೊದಲಿನಿಂದಲೂ ಡಿಕೆಶಿ ಜತೆ ನಾನು ಸ್ನೇಹ ಹೊಂದಿದ್ದು, ಚುನಾವಣೆ ನಂತರ ಅವರನ್ನು ನೋಡಿರಲಿಲ್ಲ. ನಾವು ಸೌಜನ್ಯಕ್ಕಾಗಿ ಮಾತನಾಡಿದ್ದೇವೆ' ಎಂದು ತಿಳಿಸಿದ್ದಾರೆ.

'ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ, ಸ್ವಲ್ಪ ಮಟ್ಟಿಗೆ ನಮ್ಮ ಅವನತಿ ಪ್ರಾರಂಭವಾಯಿತು. ಅದು ಮತ್ತೆ ಸುಧಾರಿಸಲೇ ಇಲ್ಲ. ಅದರ ಬಗ್ಗೆ ಎರಡನೇ ಯೋಚನೆ ಇಲ್ಲ. ಈಗ ಯಡಿಯೂರಪ್ಪ ಮುಂಚೂಣಿಯಲ್ಲಿದ್ದಾರೆ. ವಿಜಯೇಂದ್ರ ಕೂಡ ಇದ್ದಾರೆ. ಯಡಿಯೂರಪ್ಪ ಪಕ್ಷ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ' ಹೇಳಿದ್ದಾರೆ.
ಇದೇ ವೇಳೆ, ಆಪರೇಷನ್ ಹಸ್ತದ ಕುರಿತು ಮಾತನಾಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, 'ಹಲವು ಬಿಜೆಪಿ ನಾಯಕರಲ್ಲಿ ಅಸಮಾಧಾನ ಮತ್ತು ಅಭದ್ರತೆ ಇದೆ. ಅವರಲ್ಲಿ ಹಲವರು ಕಾಂಗ್ರೆಸ್ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ನನಗೂ ಅವರು ಹೇಳಿದ್ದಾರೆ. ಆದರೆ ನಾನು ಅವರ ಹೆಸರನ್ನು ಬಹಿರಂಗಪಡಿಸಲಾರೆ. ನಿರ್ಧರಿಸಿದ ನಂತರ, ಅವರು ಯಾರೆಂದು ನಾನು ಹೇಳಬಲ್ಲೆ. ನಾವು ಯಾರನ್ನೂ ವೈಯಕ್ತಿಕವಾಗಿ ಸಂಪರ್ಕಿಸಿಲ್ಲ. ಅವರು ಸ್ವಯಂಪ್ರೇರಣೆಯಿಂದ ನಮ್ಮೊಂದಿಗೆ ಸೇರಲು ಸಿದ್ಧರಿದ್ದಾರೆ. ಕಾದು ನೋಡೋಣ' ಎಂದು ತಿಳಿಸಿದ್ದಾರೆ.












Click it and Unblock the Notifications