ಮತದಾರರಿಗೆ ಆಮಿಷ; ಮಾದರಿ ನೀತಿ ಸಂಹಿತೆ ಹೇಳುವುದೇನು?
ಬೆಂಗಳೂರು, ಏಪ್ರಿಲ್ 02; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮತದಾರರಿಗೆ ಆಮಿಷವೊಡ್ಡುವ ಪ್ರಕರಣಗಳು ಕಂಡು ಬಂದರೆ ಮಾದರಿ ನೀತಿ ಸಂಹಿತೆ ಹೇಳುವುದೇನು? ಎಂಬ ಮಾಹಿತಿ ಇಲ್ಲಿದೆ. ರಾಜ್ಯದಲ್ಲಿ ಮೇ 10ರ ಬುಧವಾರ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಫಲಿತಾಂಶ ಘೋಷಣೆಯಾಗಲಿದೆ.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಾಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಯಾವುದೇ ರೀತಿಯಲ್ಲಿ ಹಣ ವರ್ಗಾಯಿಸುವುದು, ವಿವಿಧ ಸಾಧನ ಸಾಮಾಗ್ರಿಗಳ ವಿತರಣೆ, ಗಿಫ್ಟ್ ಓಚರ್‌ಗಳು, ಸಿಮ್ ಕಾರ್ಡ್ ಬ್ಯಾಲೆನ್ಸ್, ಪ್ರವಾಸಕ್ಕೆ ಏರ್ಪಾಡು ಮಾಡುವುದು, ಆಹಾರ ಪದಾರ್ಥಗಳ ವಿತರಣೆ, ಮದ್ಯ ಮತ್ತಿತರ ಪಾನೀಯಗಳ ವಿತರಣೆ, ವಾಹನಗಳಿಗೆ ಯಾವುದೇ ರೀತಿಯಲ್ಲಿ ಇಂಧನ ಭರಿಸುವುದು ಐಪಿಸಿ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿ ಶಿಕ್ಷಾರ್ಹ ಅಪರಾಧವಾಗಿದೆ.

ಜನರು ಸೂಕ್ತ ದಾಖಲೆ ಅಥವಾ ಸಮಜಾಯಿಷಿ ಇಲ್ಲದೆ 50 ಸಾವಿರ ರೂ. ಗಿಂತ ಅಧಿಕ ನಗದನ್ನು ಕೊಂಡೊಯ್ಯಬಾರದು. ಯಾವುದೇ ಸಾಧನ, ಸಾಮಾಗ್ರಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡಬಾರದು. ಚುನಾವಣಾ ಅಕ್ರಮಗಳ ತಡೆಗೆ ಈಗಾಗಲೇ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ವಿವಿಧ ಇಲಾಖೆಗಳು ಜಂಟಿಯಾಗಿ 24*7 ಕಾರ್ಯ ನಿರ್ವಹಣೆ ಮಾಡುತ್ತಿವೆ.
ಚುನಾವಣಾ ಸಂದರ್ಭದಲ್ಲಿ ಯಾವುದೇ ಅಕ್ರಮ ಕಂಡು ಬಂದರೆ ಉಚಿತ ಸಹಾಯವಾಣಿ ಸಂಖ್ಯೆ 1950 ಹಾಗೂ ದೂರು ಸಲ್ಲಿಕೆಗಾಗಿ ಸಿವಿಜಿಲ್ ಮೊಬೈಲ್ ಅಪ್ಲಿಕೇಶನ್ ಬಳಸುವಂತೆ ಸಾರ್ವಜನಿಕರಲ್ಲಿ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ. ಜನರು ಗೂಗಲ್ ಪ್ಲೇ ಸ್ಟೋರ್ ಮೂಲಕ CVIGIL Citigen App ಡೌನ್‍ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರದ ವಿವರ, ಅಂಚೆ ಪಿನ್‍ಕೋಡ್ ನಮೂದಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.
ಯಾವುದೇ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಫೋಟೋ, ವಿಡಿಯೋ ಮೂಲಕ ನೇರವಾಗಿ ಸೆರೆ ಹಿಡಿದು ವಾಯ್ಸ್ ಮೂಲಕ ಕಳುಹಿಸಬಹುದು. ಇದು ನೇರವಾಗಿ ಚುನಾವಣಾಧಿಕಾರಿಗಳ ತಂಡಕ್ಕೆ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ತಂಡಗಳು ಕಾರ್ಯ ಪ್ರವೃತ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿವೆ.

ಕಟ್ಟುನಿಟ್ಟಾಗಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜನರು ಸಹ ಸಹಕಾರ ನೀಡಬೇಕಿದೆ. ಪ್ರತಿಯೊಬ್ಬ ನಾಗರಿಕರು ಈ ಅಪ್ಲಿಕೇಶನ್ ಅನ್ನು ಸ್ವಯಂ ಪ್ರೇರಿತವಾಗಿ ಬಳಸಿ ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಬೇಕು. ಇದರಿಂದ ಪಾರದರ್ಶಕ ಚುನಾವಣೆ ನಡೆಸಬಹುದಾಗಿದ್ದು, ಯಾವುದೇ ಆಕ್ರಮಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಇದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಕೂಡ ಆಗಿರುತ್ತದೆ ಎಂದು ಆಯೋಗ ಹೇಳಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಚೆಕ್‌ಪೋಸ್ಟ್ ರಚನೆ ಮಾಡಲಾಗಿದೆ. ಚೆಕ್ ಪೋಸ್ಟ್ ಮಾರ್ಗವಾಗಿ ಸಂಚರಿಸುವ ವಾಹನ ತಪಾಸಣೆ ನಡೆಸಲಾಗುತ್ತದೆ. ದಾಖಲೆಗಳಿಲ್ಲದೇ ನಗದು, ಸಾಮಗ್ರಿ, ಚಿನ್ನಾಭರಣ, ಮದ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವುದನ್ನು ಪರಿಶೀಲಿಸಲಾಗುತ್ತದೆ. ದಾಖಲೆ ರಹಿತ ಸಾಮಗ್ರಿ, ನಗದು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಮಾರ್ಚ್ 29ರಿಂದ ಮಾದರಿ ನೀತಿ ಸಂಹಿತೆಯು ಅನ್ವಯವಾಗುತ್ತದೆ. ಈ ಮಾದರಿ ನೀತಿ ಸಂಹಿತೆಯು ಎಲ್ಲಾ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ಹಾಗೂ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಅನ್ವಯವಾಗುತ್ತದೆ. ಈ ಮಾದರಿ ನೀತಿ ಸಂಹಿತೆಯ ವಿವಿಧ ಆಯಾಮಗಳನ್ನು ಎಲ್ಲರೂ ಪಾಲಿಸುವುದು ಅವಶ್ಯಕವಾಗಿದೆ. ಅಭ್ಯರ್ಥಿಗಳು ಸಭೆ, ಸಮಾರಂಭ, ರೋಡ್ ಶೋ ಮುಂತಾದ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವುದು ಕಡ್ಡಾಯ.
ಅಭ್ಯರ್ಥಿಗಳು ಚುನಾವಣೆಯ ಸಂದರ್ಭದಲ್ಲಿ ಕೈಗೊಳ್ಳುವ ಎಲ್ಲಾ ವಿಧದ ವೆಚ್ಚಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಈ ಕಾರ್ಯಕ್ಕಾಗಿ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್ ಸ್ಕ್ವಾಡ್, ಚೆಕ್‍ಪೋಸ್ಟ್, ವಿಡಿಯೋ ಪರಿಶೀಲನಾ ತಂಡ ಹಾಗೂ ವೆಚ್ಚ ಪರಿಶೀಲನಾ ತಂಡಗಳನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಸಲ್ಲಿಸುವ ವೆಚ್ಚಗಳನ್ನು ಸಹ ಪರಿಶೀಲಿಸಲು ತಂಡವನ್ನು ರಚಿಸಲಾಗಿದೆ.












Click it and Unblock the Notifications