198 ಕೋಟಿ ರೂ. ನಷ್ಟ; ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಮುಂದಾದ ಸಿಬಿಐ!
ಬೆಂಗಳೂರು, ಜನವರಿ 06; 'ಕಲ್ಯಾಣ ಪ್ರಗತಿ ರಾಜ್ಯ ಪಕ್ಷ' ಸ್ಥಾಪನೆ ಮಾಡಿ 2023ರ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಗೆ ಹೊಸ ಸಂಕಷ್ಟ ಆರಂಭವಾಗಿದೆ. ಜನಾರ್ದನ ರೆಡ್ಡಿಗೆ ಸೇರಿದ ಆಸ್ತಿ ಜಸ್ತಿಗೆ ಸಿಬಿಐ ಮುಂದಾಗಿದೆ.
ಕರ್ನಾಟಕದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ. ಇದೇ ಪ್ರಕರಣದಲ್ಲಿ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ ಈಗ ಸಿಬಿಐ ಮತ್ತೊಂದು ಸಂಕಷ್ಟ ತಂದಿಟ್ಟಿದೆ.
ಪಕ್ಷ ಕಟ್ಟಿ ರಾಜಕೀಯ ಅಸ್ತಿತ್ವ ಸಾಬೀತುಪಡಿಸಲು ಜನಾರ್ದನ ರೆಡ್ಡಿ ಸಜ್ಜಾಗುತ್ತಿರುವಂತೆಯೇ ಇತ್ತ ಸಿಬಿಐ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
ಸಿಬಿಐ ಸಲ್ಲಿಸಿರುವ ಮನವಿಯನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ. ಡಿಸೆಂಬರ್ 25ರಂದು ಹೊಸ ಪಕ್ಷ ಘೋಷಣೆ ಮಾಡಿರುವ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ವಿಚಾರಣೆಗೆ ನಿಗದಿಯಾಗಬೇಕಿದೆ
ಕ್ರಿಮಿನಲ್ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ 1944ರ ವಿವಿಧ ನಿಬಂಧನೆಗಳ ಅಡಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಜನಾರ್ದನ ರೆಡ್ಡಿ ಗಳಿಸಿರುವ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡಲು ವಿಶೇಷ ನ್ಯಾಯಾಲಯದ ಮೆಟ್ಟಿಲೇರಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅನುಮತಿ ಕೋರಿ 2022ರ ಆಗಸ್ಟ್ 30ರಂದು ಮನವಿ ಮಾಡಲಾಗಿದೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ವಿವರಿಸಿದೆ.

ಸುಮಾರು 19.14 ಕೋಟಿ ರೂ. ಆಸ್ತಿ
ತಮ್ಮ ಮತ್ತು ಕುಟುಂಬ ಸದಸ್ಯರಿಗೆ ಸೇರಿದ ಕರ್ನೂಲ್, ಹೈದರಾಬಾದ್ ಮತ್ತು ರಂಗಾ ರೆಡ್ಡಿ ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಸುಮಾರು 19.14 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗಳನ್ನು ಮಾರಾಟ ಮಾಡಲು ಜನಾರ್ದನ ರೆಡ್ಡಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.
ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಕ್ರಮಕೈಗೊಳ್ಳಲು ವಿಫಲವಾಗಿದೆ. ಜನಾರ್ದನ ರೆಡ್ಡಿ ಅವರು ಅಕ್ರಮವಾಗಿ ಆಸ್ತಿ ಮಾರಾಟ ಮಾಡಲು ಮುಂದಾಗುತ್ತಿದ್ದು, ಅವುಗಳ ನೋಂದಣಿ ಮಾಡದಂತೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ರಿಜಿಸ್ಟ್ರಾರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಸಿಬಿಐ ಅರ್ಜಿಯಲ್ಲಿ ಉಲ್ಲೇಖಿಸಿದೆ.

198 ಕೋಟಿ ರೂ. ನಷ್ಟವಾಗಿದೆ
ಓಬಳಾಪುರಂ ಮೈನಿಂಗ್ ಕಂಪೆನಿ ಲಿಮಿಟೆಡ್ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಲಿಮಿಟೆಡ್ ಮೂಲಕ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರ ವಿರುದ್ಧ 2015ರಲ್ಲಿಆರೋಪ ಪಟ್ಟಿ ಸಲ್ಲಿಸಲಾಗಿದೆ. ಅಕ್ರಮ ಗಣಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ರೆಡ್ಡಿ ಅವರು 198 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ಅರ್ಜಿಯಲ್ಲಿ ವಿವರಿಸಲಾಗಿದೆ.

ದಾಖಲೆ ಸಲ್ಲಿಕೆ ಮಾಡುವಂತೆ ಆದೇಶ
2015ರಲ್ಲಿ ಜನಾರ್ದನ ರೆಡ್ಡಿಗೆ ಸೇರಿದ 65.05 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಇಂಥದ್ದೇ ಮನವಿ ಮಾಡಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ ಅನುಮತಿಸಿದ ಬಳಿಕ ಆ ಆಸ್ತಿಗಳ ಜಪ್ತಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಲಾಗಿತ್ತು ಎಂದು ಸಿಬಿಐ ವಿವರಿಸಿದೆ.
ಅದರೂ ಜನಾರ್ದನ ರೆಡ್ಡಿ ಮತ್ತು ಇತರ ಆರೋಪಿಗಳ ವಿರುದ್ಧದ ಪ್ರಕರಣ ವಿಚಾರಣೆಗೆ ಬಾಕಿ ಇರುವ ನ್ಯಾಯಾಲಯದಲ್ಲಿ 2015ರಲ್ಲಿ ಜಪ್ತಿ ಆದೇಶ ಕೋರಿ ಸಲ್ಲಿಸಿದ್ದ ಮನವಿ ಬಾಕಿ ಉಳಿದಿತ್ತು. ನಿರಂತರವಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ 2022ರ ಮಾರ್ಚ್ 29ರಂದು ವಿಶೇಷ ನ್ಯಾಯಾಲಯವು ಸಿಬಿಐನ ಆಸ್ತಿ ಜಪ್ತಿ ಕೋರಿಕೆಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುವಂತೆ ರೆಡ್ಡಿಗೆ ಆದೇಶಿಸಿತ್ತು.












Click it and Unblock the Notifications