ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಏಪ್ರಿಲ್ 11 : ಕೊಡಗಿನ ಪ್ರವಾಸಿ ತಾಣಗಳಲ್ಲೊಂದಾದ ದುಬಾರೆ ಆನೆಶಿಬಿರ ವರ್ಷಪೂರ್ತಿ ಪ್ರವಾಸಿಗರ ಸ್ವರ್ಗವಾದರೆ, ಇಲ್ಲಿ ನೆಲೆಸಿರುವ ಗಿರಿಜನರು ಮತ್ತು ಅರಣ್ಯ ಸಿಬ್ಬಂದಿಗಳಿಗೆ ನರಕವಾಗಿದೆ. ಇದಕ್ಕೆ ಕಾರಣಗಳೂ ಹಲವಾರು.

ರಿವರ್ ರಾಫ್ಟಿಂಗ್, ಆನೆ ಸಫಾರಿ ಹಾಗೂ ಗಜಮಜ್ಜನ ನಡೆಯುವುದರಿಂದ ಸದಾ ಪ್ರವಾಸಿಗರು ಇಲ್ಲಿ ಕಾಣಸಿಗುತ್ತಾರೆ. ಕಾವೇರಿ ನದಿದಡದಲ್ಲಿ ಜಂಗಲ್‌ಲಾಡ್ಜ್ ರೆಸಾರ್ಟ್ ಸೇರಿದಂತೆ ಹಲವು ಖಾಸಗಿ ರೆಸಾರ್ಟ್‌ಗಳು ಇಲ್ಲಿವೆ. ಕುಶಾಲನಗರಕ್ಕೆ ಹತ್ತಿರ ಇರುವುದರಿಂದ ಪ್ರವಾಸಿಗರಿಗೆ ಕೊರತೆಯಿಲ್ಲ.

ದುಬಾರೆ ಅರಣ್ಯ ಪ್ರದೇಶವನ್ನು ಕಾವೇರಿ ನದಿ ಸುತ್ತುವರೆದಿರುವುದರಿಂದ ಇಲ್ಲಿ ವಾಸಿಸುವ ಗಿರಿಜನರಿಗೆ, ಕೆಲಸ ನಿರ್ವಹಿಸುವ ಅರಣ್ಯ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಮಾತ್ರ ನರಕ ಎಂದರೆ ತಪ್ಪಾಗಲಾರದು. ಕುಶಾಲನಗರ ಬಳಿಯ ನಂಜರಾಯಪಟ್ಟಣದ ಬಳಿ ಕಾವೇರಿ ಕವಲೊಡೆದು ದುಬಾರೆ ಅರಣ್ಯ ಪ್ರದೇಶ ಸೃಷ್ಟಿಯಾಗಿದೆ. ಇಲ್ಲಿಗೆ ತೆರಳಬೇಕಾದರೆ ಕಾವೇರಿ ನದಿಯನ್ನು ದಾಟುವುದು ಅನಿವಾರ್ಯ. [ದುಬಾರೆ ಆನೆ ಶಿಬಿರದಲ್ಲಿ ಸಮಸ್ಯೆಗಳದ್ದೇ ದರ್ಬಾರ್]

Tribals in Dubare forest are living in hell

ದುಬಾರೆಯಲ್ಲಿ ಪುಂಡ ಆನೆಗಳನ್ನು ಹಿಡಿದು ಪಳಗಿಸಲಾಗುತ್ತದೆ. ಈ ತಾಣ ಜನರ ಸಂಪರ್ಕದಲ್ಲಿದ್ದರೂ ಸೌಲಭ್ಯಗಳ ವಿಚಾರದಲ್ಲಿ ಕುಗ್ರಾಮವೇ. ತಕ್ಷಣಕ್ಕೆ ಹೋಗಬೇಕೆಂದರೆ ನದಿ ದಾಟಲು ಸೇತುವೆಯಿಲ್ಲ, ವಿದ್ಯುತ್ ಇಲ್ಲ, ಶಾಲೆಯಿಲ್ಲ... ಹೀಗೆ ಇಲ್ಲಗಳ ನಡುವೆಯೇ ದುಬಾರೆಯಲ್ಲಿ ಅನಾದಿ ಕಾಲದಿಂದಲೂ ನೆಲೆನಿಂತಿರುವ ಗಿರಿಜನರು ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ.

ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳು ಕೂಡ ಸೀಮೆಣ್ಣೆ, ಕ್ಯಾಂಡಲಿನ ಮೊರೆ ಹೋಗಿದ್ದಾರೆ. ಎಲ್ಲದಕ್ಕೂ ಕಾವೇರಿ ನದಿಯನ್ನು ದೋಣಿಯಲ್ಲಿ ದಾಟಿ ಹೋಗಬೇಕಾಗಿರುವುದರಿಂದ ಅನಾರೋಗ್ಯ ಕಾಡುತ್ತಿರುತ್ತದೆ. ಅಥವಾ ಇನ್ನೇನಾದರು ಅವಘಡ ಸಂಭವಿಸಿದರೆ ದೇವರೇ ಗತಿ. ಬೇರೆ ಕಡೆಗಳಿಗೆ ಹೋಲಿಸಿದರೆ ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳದ್ದು ಮಾತ್ರ ನಾಯಿಪಾಡು.

ಆನೆಶಿಬಿರದಲ್ಲಿರುವ ಸಾಕಾನೆಗಳನ್ನು ನೋಡಿಕೊಳ್ಳಲು ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳು ನೆಲೆಸಿದ್ದು, ಮುರುಕಲು ಗುಡಿಸಲಲ್ಲೇ ಜೀವನ ಸಾಗಿಸುತ್ತಿದ್ದಾರೆ. [ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು]

Tribals in Dubare forest are living in hell

ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದು ಸುಮಾರು ಎಂಬತ್ತಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿವೆ. ನದಿ ದಾಟಿ ಹೋಗಿ ವಿದ್ಯಾಭ್ಯಾಸ ಕಲಿಯಲು ಹಾಡಿ ಮಕ್ಕಳಿಗೆ ಸಾಧ್ಯವಾಗದ ಹಿನ್ನಲೆಯಲ್ಲಿ ಅಲ್ಲಿ 5ನೇ ತರಗತಿವರೆಗೆ ಶಾಲೆಯನ್ನು ತೆರೆಯಲಾಗಿದ್ದು ಕೆಲವೇ ಕೆಲವು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಆದರೆ 5ನೇ ತರಗತಿ ಬಳಿಕ ಬೇರೆ ಕಡೆ ಹೋಗಬೇಕಾಗಿರುವುದರಿಂದ ಅಲ್ಲಿ ಓದಲಾಗದೆ ಮರಳಿ ಬಂದು ಅಪ್ಪ ಅಮ್ಮಂದಿರ ಜೊತೆಯಲ್ಲಿ ತೋಟ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿನ ಶಾಲೆಗೆ ಬರುವ ಶಿಕ್ಷಕರು ನದಿ ದಾಟಿ ಬರಬೇಕು, ಅದು ಸುಲಭದ ಕೆಲಸವಲ್ಲ. ಏಕೆಂದರೆ ಇಲ್ಲಿನ ಕಾವೇರಿ ನದಿಯನ್ನು ದಾಟಲು ಇರುವ ದೋಣಿಗಳೆಲ್ಲವೂ ಖಾಸಗಿಯವರದ್ದಾಗಿದೆ.

ದುಬಾರೆಯಲ್ಲಿರುವ ಗಿರಿಜನರು ಮುರುಕಲು ಗುಡಿಸಲ್ಲೇ ಬದುಕುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕನಸಿನ ಮಾತಾಗಿದೆ. ಇಲ್ಲಿ ಸೌಲಭ್ಯ ಕಲ್ಪಿಸಿಕೊಡುವ ಕೆಲಸವನ್ನು ಇದುವರೆಗೆ ಯಾರೂ ಮಾಡಿಲ್ಲ. ಕೆಲವರ ಪ್ರಕಾರ ಅರಣ್ಯ ಇಲಾಖೆಗೂ ಇಲ್ಲಿ ಗಿರಿಜನರು ವಾಸವಿರುವುದು ಇಷ್ಟವಿಲ್ಲ. ಅವರನ್ನು ಬೇರೆಡೆಗೆ ಪನರ್ವಸತಿಗೊಳಿಸಬೇಕೆಂಬ ಇರಾದೆ. ಆದರೆ ಗಿರಿಜನರು ಮಾತ್ರ ದುಬಾರೆ ಅರಣ್ಯವನ್ನು ಬಿಟ್ಟು ಹೋಗಲು ತಯಾರಿಲ್ಲ. ಎಷ್ಟೇ ತೊಂದರೆಯಾದರೂ ಪರ್ವಾಗಿಲ್ಲ ಇಲ್ಲಿಯೇ ಇರುತ್ತೇವೆ ಎಂಬ ಪಟ್ಟು ಹಿಡಿದಿದ್ದಾರೆ.

ಆಧುನಿಕತೆಯ ನಾಗಾಲೋಟದಲ್ಲಿ ಎಲ್ಲರೂ ಹೆಜ್ಜೆಹಾಕುತ್ತಿದ್ದರೂ ಗಿರಿಜನರು ಮಾತ್ರ ಶಿಕ್ಷಣ, ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವುದು ಮಾತ್ರ ನಮ್ಮ ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tribals and forest department personnel are living with minimum infrastructure in Dubare, which is famous for elephant training. This place, which is surrounded by Cauvery river, is heaven for tourist, but has become hell for these people.
Please Wait while comments are loading...