ಮೂಡಿಗೆರೆ ತ್ರಿಕೋನ ಸ್ಪರ್ಧೆ: ಬಿಜೆಪಿಗೆ ಬೇಡವಾಗಿ ಜೆಡಿಎಸ್‌ಗೆ ಬೇಕಾದರು, ಕಾಂಗ್ರೆಸ್?

ಮೂಡಿಗೆರೆ ಏಪ್ರಿಲ್ 29: ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡಿಗೆರೆ ಮೀಸಲು ಕ್ಷೇತ್ರವಾಗಿದೆ. ಈ ಬಾರಿ ಮೂಡಿಗೆರೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಒಳ ಬೇಗುದಿ ಹೊರ ಬಂದು ಚುನಾವಣ ಕಣ ಮತ್ತಷ್ಟು ರಂಗು ಪಡೆದುಕೊಂಡಿದೆ.

ಮೂಡಿಗೆರೆ ತಾಲ್ಲೂಕು ಕಸಬಾ, ಗೋಣಿಬೀಡು, ಬಣಕಲ್, ಬಾಳೂರು, ಕಳಸ, ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಮಲ್ಲಂದುರು, ಆವತಿ ಮತ್ತು ಆಲ್ದೂರು ಸೇರಿದಂತೆ ಒಟ್ಟು ಒಂಬತ್ತು ಹೋಬಳಿಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಜೊತೆಗೆ ಇಲ್ಲಿ 230 ಮತಗಟ್ಟೆಗಳು ಇವೆ. ಡಿ.ಬಿ.ಚಂದೇಗೌಡ, ಡಿಕೆ ತಾರಾದೇವಿಸಿದ್ಧಾರ್ಥ, ಮೋಟಮ್ಮ ಅವರಂಥ ಘಟಾನುಘಟಿಗಳ ತವರು ಇದಾಗಿದೆ.

Karnataka Election, mudigere Triangular Fight: MP Kumaraswamy vs Nayana Motamma vs Deepak Dodaiah

ಮೂಡಿಗೆರೆ ಕ್ಷೇತ್ರದಲ್ಲಿ ಒಟ್ಟು 1,66,888 ಮತದಾರರು ಇದ್ದಾರೆ. ಈ ಪೈಕಿ 82,615 ಪುರುಷರು, 84,262 ಮಹಿಳೆ ಹಾಗೂ 11 ಇತರ ಮತದಾರರು ಇದ್ದಾರೆ. ದಲಿತರು, ಒಕ್ಕಲಿಗರು, ಬಿಲ್ಲವರು, ಮುಸ್ಲಿಮರು, ವಿಶ್ವಕರ್ಮರು, ಲಿಂಗಾಯತರು, ಕ್ರಿಶ್ಚಿಯನ್ನರು ಇತರರ ಸಮುದಾಯದವರು ಇದ್ದಾರೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನಡುವೆ ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಪಿ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ನಯನಾ (ಮೋಟಮ್ಮ ಪುತ್ರಿ) ಹಾಗೂ ಬಿಜೆಪಿಯಿಂದ ದೀಪಕ್ ದೊಡ್ಡಯ್ಯ ಸ್ಪರ್ಧೆ ಮಾಡಲಿದ್ದಾರೆ.

2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಎಂ ಪಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ 12512 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೊತೆಗೆ ಜೆಡಿಎಸ್‌ನಿಂದ ಬಿಬಿ ನಿಂಗಯ್ಯ 22,063 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

Karnataka Election, mudigere Triangular Fight: MP Kumaraswamy vs Nayana Motamma vs Deepak Dodaiah

ಎಂ.ಪಿ ಕುಮಾರಸ್ವಾಮಿ

ಈ ಬಾರಿ ಮೂಡಿಗೆರೆ ಕ್ಷೇತ್ರದ ಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ. ಕಾರಣ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಪಿ ಕುಮಾರಸ್ವಾಮಿ ಜಯ ಗಳಿಸಿದ್ದರು. ಮೂಡಿಗೆರೆಯಲ್ಲಿ ಬಿಜೆಪಿ ಕೋಟೆಯನ್ನು ಭದ್ರಪಡಿಸಿದ್ದರು. ಆದರೆ ಎಂ.ಪಿ. ಕುಮಾರಸ್ವಾಮಿ ಗೆದ್ದ ಮೇಲೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸಿಗುತ್ತಿಲ್ಲ. ಯಾರ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ಕಾರ್ಯಕರ್ತರು ಕಿಡಿಕಾರಿದ್ದರು. ಪ್ರತಿಭಟನೆಗಳನ್ನೂ ಕಾರ್ಯಕರ್ತರು ಮಾಡಿದ್ದರು. ಜೊತೆಗೆ ಎಂ.ಪಿ. ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದು, ಈ ಬಾರಿ ಇವರಿಗೆ ಟಿಕೆಟ್​ ನೀಡಬಾರದು ಎಂದು ಒತ್ತಾಯಿಸಿದ್ದರು.

ಆದರೆ ಎಂ.ಪಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮೂಡಿಗೆರೆಯಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಕಾರ್ಯಕರ್ತರ ಮನವಿಯನ್ನು ಆಲಿಸಿತು. ಬಳಿಕ ಕುಮಾರಸ್ವಾಮಿಗೆ ಟಿಕೆಟ್ ಘೋಷಣೆ ಮಾಡಲೇ ಇಲ್ಲ. ಇದರಿಂದ ಟಿಕೆಟ್ ಕೈತಪ್ಪಿದ್ದರಿಂದ ಬೇಸತ್ತು ಕುಮಾರಸ್ವಾಮಿ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಸದ್ಯ ಅವರು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ. ಈಗಾಗಲೇ ಬಿಬಿ ನಿಂಗಯ್ಯ ಅವರೇ ಮುಂದಿನ ಅಭ್ಯರ್ಥಿ ಎಂದು ಜೆಡಿಎಸ್ ಹೇಳಿಕೊಂಡಿತ್ತು. ಆದರೆ ಯಾವಾಗ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರಿದರೂ ಎಲ್ಲವೂ ಉಲ್ಟಾ ಆಗಿದೆ. ಸದ್ಯ ಜೆಡಿಎಸ್ ಎಂ ಪಿ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಿದೆ.

ಬಿ.ಬಿ ನಿಂಗಯ್ಯ ಟಿಕೆಟ್ ನೀಡದಂತೆ ಒತ್ತಾಯ: ಈ ಹಿಂದೆ ಮಾಜಿ ಶಾಸಕ ಬಿ.ಬಿ ನಿಂಗಯ್ಯಗೆ ಎಚ್,ಡಿ ಕುಮಾರಸ್ವಾಮಿ ಟಿಕೆಟ್ ಘೋಷಿಸಿದ್ದರು. ಆದರೆ, ಮಾಜಿ ಸಚಿವ ಜೆಡಿಎಸ್ ಅಭ್ಯರ್ಥಿ ವಿರುದ್ಧ ಕಾರ್ಯಕರ್ತರ ಅಸಮಾಧಾನ ಹೊರಹಾಕಿದ್ದರು. ಬಿ.ಬಿ.ನಿಂಗಯ್ಯ ಬದಲಿಸಿ ಜೆಡಿಎಸ್ ಉಳಿಸಿ ಅಭಿಯಾನ ಆರಂಭಿಸಿದ್ದ ಮೂಡಿಗೆರೆ ಕಾರ್ಯಕರ್ತರು, ಟಿಕೆಟ್ ಘೋಷಣೆಯಾದ್ರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಬಿ.ಬಿ.ನಿಂಗಯ್ಯ ತೊಡಗಿಸಿಕೊಂಡಿಲ್ಲ ಎಂದು ಆರೋಪಿಸಿದ್ದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪಂಚರತ್ನಯಾತ್ರೆ ವೇಳೆ ಕೂಡ ಮಾಜಿ ಶಾಸಕ ನಿಂಗಯ್ಯ ವಿರುದ್ಧ ಕಾರ್ಯಕರ್ತರು ಆರೋಪಗಳನ್ನು ಮಾಡಿದ್ದರು. ಬಿ.ಬಿ.ನಿಂಗಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಕೆಟ್ ಘೋಷಣೆ ಮಾಡಿದ ಬಳಿಕವೂ ಬದಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ಕೊಟ್ಟರು ಬದಲಾಗದ ನಿಂಗಯ್ಯ ಅವರ ಬದಲಿಗೆ ಎಂ ಪಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ.

Karnataka Election, mudigere Triangular Fight: MP Kumaraswamy vs Nayana Motamma vs Deepak Dodaiah

ನಯನಾ ಮೋಟಮ್ಮ

ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ನಯನಾ ಮೋಟಮ್ಮಗೆ ಟಿಕೆಟ್‌ ನೀಡಲಾಗಿದೆ. ಕಾರ್ಯಕರ್ತರ ತೀವ್ರ ವಿರೋಧದ ಮಧ್ಯೆಯೂ ಕಾಂಗ್ರೆಸ್‌ ನಯನಾ ಮೋಟಮ್ಮಾಗೆ ಟಿಕೆಟ್ ನೀಡಿದೆ. ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನ ಮೋಟಮ್ಮಾಗೆ ಟಿಕೆಟ್ ಬೇಡವೇ ಬೇಡ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗ ಸಭೆ ನಡೆಸಿದ್ದರು.

ಸಾಲು ಸಾಲು ಸಭೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಮೋಟಮ್ಮ ಪುತ್ರಿ ನಯನ ಮೋಟಮ್ಮಾಗೆ ಟಿಕೆಟ್ ನೀಡದಂತೆ ರಾಜ್ಯ ನಾಯಕರು ಹಾಗೂ ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಿದ್ದರು. ನಯನಾಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲು ಖಚಿತ. ಕ್ಷೇತ್ರದ ಜನ ನಯನ ಅವರನ್ನು ಒಪ್ಪುತ್ತಿಲ್ಲ ಎಂದು ಪಕ್ಷದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ನಯನಾಗೆ ಟಿಕೆಟ್ ನೀಡಲು ವಿರೋಧಿಸಿದ್ದರು. ಆದರೂ ಕಾಂಗ್ರೆಸ್ ನಯನಾ ಅವರನ್ನೇ ಈ ಬಾರಿ ಕಣಕ್ಕೆ ಇಳಿಸಿದೆ.

Karnataka Election, mudigere Triangular Fight: MP Kumaraswamy vs Nayana Motamma vs Deepak Dodaiah

ದೀಪಕ್ ದೊಡ್ಡಯ್ಯ

ಬಿಜೆಪಿ ಅಂತರಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ಎಂ ಪಿ ಕುಮಾರಸ್ವಾಮಿ ಅವರನ್ನು ಕೈಬಿಟ್ಟ ಬಿಜೆಪಿ ಹೈಕಮಾಂಡ್​ ದೀಪಕ್ ದೊಡ್ಡಯ್ಯನವರಿಗೆ ಮೂಡಿಗೆರೆ ಟಿಕೆಟ್​ ಘೋಷಣೆ ಮಾಡಿದೆ. ಬಿಜೆಪಿಯಲ್ಲಿ ದೀಪಕ್ ದೊಡ್ಡಯ್ಯ, ಶೃಗೇರಿ ಶಿವಣ್ಣ, ಬಣಕಲ್ ಶಾಮಣ್ಣ, ಬಿಎಸ್ ಚೈತ್ರಶ್ರೀ, ಡಿ.ಧರ್ಮಯ್ಯ ಟಿಕೆ ಆಕಾಂಕ್ಷಿಗಾಲಿದ್ದರು. ಕುಮಾರಸ್ವಾಮಿಗೆ ಬಿಟ್ಟು ಬೇರೆ ಯಾರೇ ಯಾರಿಗೇ ಟಿಕೆಟ್ ನೀಡಿದರೂ ಸ್ವೀಕಾರ ಎಂದು ಕಾರ್ಯಕರ್ತರು ಬಿಜೆಪಿ ರಾಜ್ಯ ನಾಯಕರಿಗೆ ತಿಳಿಸಿದ್ದರು. ಇದರಿಂದಾಗಿ ಬಿಜೆಪಿ ಆಳಕ್ಕಿದು ಯೋಚಿಸಿ ದೀಪಕ್ ದೊಡ್ಡಯ್ಯ ಟಿಕೆಟ್ ನೀಡಿದೆ.

ಒಟ್ಟಿನಲ್ಲಿ ಒಂದೆಡೆ ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಎಂ ಪಿ ಕುಮಾರಸ್ವಾಮಿ ಅವರನ್ನು ಬಿಟ್ಟು ದೀಪಕ್ ದೊಡ್ಡಯ್ಯ ಅವರನ್ನು ಕಣಕ್ಕಿಳಿಸಿದರೆ, ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಬಿ.ಬಿ.ನಿಂಗಯ್ಯ ಅವರನ್ನು ಬಿಟ್ಟು ಎಂ ಪಿ ಕುಮಾರಸ್ವಾಮಿಗೆ ಟಿಕೆ ನೀಡಿದೆ. ಇತ್ತ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಒತ್ತಾಯಕ್ಕೆ ಮಣಿಯದೆ ನಯನಾ ಮೋಟಮ್ಮ ಅವರಿಗೆ ಟಿಕೆಟ್ ಘೋಷನೆ ಮಾಡಿದೆ. ಈ ತ್ರೀಕೋನ ಸ್ಪರ್ಧೆಯಲ್ಲಿ ಯಾರನ್ನು ಮತದಾರರು ಕೈ ಹಿಡಿಯುತ್ತಾರೆಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+