ಸಾರಿಗೆ ನಿಗಮಗಳಿಗೆ ಅನುದಾನವಿಲ್ಲ; ಪತ್ರ ವೈರಲ್
ಬೆಂಗಳೂರು, ಜೂನ್ 15; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡುವ 'ಶಕ್ತಿ' ಯೋಜನೆಗೆ ಚಾಲನೆ ಸಿಕ್ಕಿದೆ.
'ಶಕ್ತಿ' ಯೋಜನೆಯ ಸಮಯದಲ್ಲಿಯೇ ಸಾರಿಗೆ ನಿಗಮಗಳ ಅನುದಾನದ ಕುರಿತ ಪತ್ರವೊಂದು ವೈರಲ್ ಆಗಿದೆ. ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ, ಬೆಂಗಳೂರು ದಿನಾಂಕ 7/6/2023ರಂದು ಬಂದಿರುವ ಪತ್ರವಿದಾಗಿದೆ. ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪಾ ವಿ. ಎಸ್. ಹೆಸರಿನಲ್ಲಿರುವ ಪತ್ರವಿದು.

ಈ ಪತ್ರವನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು. ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು. ವ್ಯವಸ್ಥಾಪಕ ನಿರ್ದೇಶಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ, ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ಇವರಿಗೆ ಬರೆಯಲಾಗಿದೆ. ಸಾರಿಗೆ ನಿಗಮಗಳಿಗೆ ಅನುದಾನ ನೀಡುವ ವಿಚಾರಕ್ಕೆ ಕುರಿತ ಪತ್ರವಿದು.
ಪತ್ರದದಲ್ಲಿ ಏನಿದೆ?; ಈ ಪತ್ರವು ನಿಗಮಗಳ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚವನ್ನು ನಿಭಾಯಿಸಲು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು ಎಂಬ ವಿಚಾರ ಒಳಗೊಂಡಿದೆ. ವಿವಿಧ ಸಾರಿಗೆ ಸಂಸ್ಥೆಗಳ ಪತ್ರಗಳನ್ನು ಉಲ್ಲೇಖಿಸಿ ಈ ಪತ್ರವನ್ನು ಬರೆಯಲಾಗಿದೆ.
ಪತ್ರದಲ್ಲಿ ಕೋರಿರುವ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲವೆಂದು ತಿಳಿಸಲಾಗಿದೆ ಹಾಗೂ ಪತ್ರಗಳಲ್ಲಿನ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಯಿಂದ ಉಂಟಾಗುವ ವೆಚ್ಚವನ್ನು ನಿಗಮಗಳು ಆಂತರಿಕ ಸಂಪನ್ಮೂಲಗಳಿಂದ ಭರಿಸುವಂತೆ ಹಾಗೂ ಇನ್ನು ಮುಂದೆ, ವೇತನ ಪಾವತಿಗಾಗಿ, ಇಂಧನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಅವಕಾಶವಾಗುವುದಿಲ್ಲವೆಂದು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಪತ್ರದ ಮೂಲಕ ಸರ್ಕಾರ 4 ಸಾರಿಗೆ ನಿಗಮಗಳಿಗೆ ಹಿನ್ನಡೆ ಉಂಟು ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನೌಕರರಿಗೆ ಶೇ 15ರಷ್ಟು ವೇತನ ಪರಿಷ್ಕರಣೆ ಮಾಡಿತ್ತು. ಆ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಆದರೆ ನೂತನ ಕಾಂಗ್ರೆಸ್ ಸರ್ಕಾರ ಅನುದಾನ ನೀಡಲು ಆಗುವುದಿಲ್ಲ ಎಂದು ಹೇಳಿದೆ.
ಪ್ರತಿಪಕ್ಷ ಬಿಜೆಪಿ ಟ್ವೀಟ್; ಈ ಪತ್ರವನ್ನು ಟ್ವೀಟ್ ಮಾಡಿರುವ ಪ್ರತಿಪಕ್ಷ ಬಿಜೆಪಿ #ATMSarkara ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿದೆ. #ATMSarkaraದ ಗ್ಯಾರಂಟಿ ಎಫೆಕ್ಟ್..! ಶಕ್ತಿ ಯೋಜನೆ ಪರಿಣಾಮ BMTC, KSRTC ಸೇರಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಅನುದಾನ ನೀಡುವುದು ಸಾಧ್ಯವಿಲ್ಲವೆಂದು ಆರ್ಥಿಕ ಇಲಾಖೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಹೇಳಿದೆ.
ಮಾನ್ಯ @siddaramaiah ರವರೇ, ತಮ್ಮ ಯೋಚನಾರಹಿತ ಯೋಜನೆಗಳ ಜಾರಿಯ ನೆಪದಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಹಾಗೂ ನಿಗಮಗಳನ್ನು ರಸ್ತೆಗೆ ತರಬೇಡಿ ಎಂದು ಬಿಜೆಪಿ ಹೇಳಿದೆ. ಆದರೆ, ಸಾರಿಗೆ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಈ ಪತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಇಲ್ಲಿಯ ತನಕ ನೀಡಿಲ್ಲ.
ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರಿಗೆ ನಿಗಮಗಳಿಗೆ ಅನುದಾನ ನೀಡದಿದ್ದರೆ ಮುಂದೆ ನಿಗಮಗಳ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಲಾಗುತ್ತಿದೆ. ಈಗಾಗಲೇ 'ಶಕ್ತಿ' ಯೋಜನೆ ಅನ್ವಯ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ನಿಗಮಗಳು ನಷ್ಟವನ್ನು ಅನುಭವಿಸುತ್ತಿವೆ.












Click it and Unblock the Notifications