ಮೊದಲ ಬಾರಿಗೆ ಕರ್ನಾಟಕದಲ್ಲಿ ತೃತೀಯಲಿಂಗಿಗಳ ಸಮೀಕ್ಷೆ
ಈ ಸಮೀಕ್ಷೆಯು ಲಿಂಗತ್ವ ಅಲ್ಪಸಂಖ್ಯಾತ ಜನರಿಗೆ ವಿವಿಧ ಕಲ್ಯಾಣ ಯೋಜನೆಗಳಿಗೆ ನೀತಿಗಳನ್ನು ಮತ್ತು ಹಣವನ್ನು ಹಂಚಿಕೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
ಬೆಂಗಳೂರು, ಮಾರ್ಚ್ 4: ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಇರುವ ತೃತೀಯಲಿಂಗಿಗಳ ಜನಗಣತಿ ಮಾಡಲು ನಿರ್ಧರಿಸಿದೆ. ಈ ಸಮೀಕ್ಷೆಯು ಲಿಂಗತ್ವ ಅಲ್ಪಸಂಖ್ಯಾತ ಜನರಿಗೆ ವಿವಿಧ ಕಲ್ಯಾಣ ಯೋಜನೆಗಳಿಗೆ ನೀತಿಗಳನ್ನು ಮತ್ತು ಹಣವನ್ನು ಹಂಚಿಕೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
ಪ್ರಾಯೋಗಿಕವಾಗಿ ಈ ಸಮೀಕ್ಷಾ ಕಾರ್ಯವು ಮಾರ್ಚ್ 10 ರಿಂದ ಏಪ್ರಿಲ್ 24 ರವರೆಗೆ ವಿಜಯಪುರ ಮತ್ತು ಮೈಸೂರಿನಲ್ಲಿ ಸಮೀಕ್ಷೆ ಆರಂಭಗೊಳ್ಳಲಿದೆ. ಈ ಬಗ್ಗೆ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್, 2011ರ ಜನಗಣತಿಯಲ್ಲಿ ರಾಜ್ಯದಲ್ಲಿ ತೃತೀಯಲಿಂಗಿಗಳ ಸಂಖ್ಯೆಯನ್ನು ಸರ್ಕಾರ ದಾಖಲಿಸಿದ್ದು, ಆಗ 34,283 ಲೈಂಗಿಕ ಅಲ್ಪಸಂಖ್ಯಾತರು ದಾಖಲಾಗಿದ್ದಾರೆ ಎಂದರು.

ಈ ಜನಗಣತಿ ವರದಿಯು ನಿಖರವಾಗಿಲ್ಲ. ಏಕೆಂದರೆ ಹಲವಾರು ವ್ಯಕ್ತಿಗಳು ತಮ್ಮ ಹೆಸರುಗಳು ಪಟ್ಟಿಯಿಂದ ಕಾಣೆಯಾಗಿದೆ ಎಂದು ಹೇಳಿಕೊಂಡಿರುವುದರಿಂದ ಅವರಿಗೆ ಸರ್ಕಾರಿ ಪ್ರಯೋಜನಗಳನ್ನು ನಿರಾಕರಿಸಲಾಗಿದೆ. ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ ನಿರ್ದೇಶನಾಲಯವು (ಇಡಿಸಿಎಸ್) ಸಮೀಕ್ಷೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ಮಾಹಿತಿಯನ್ನು ನೋಂದಾಯಿಸಲು ವಿಶೇಷ ಅಪ್ಲಿಕೇಶನ್ - ಕರ್ಮಣಿ ವೆಬ್ ಅಪ್ಲಿಕೇಶನ್ - ಅನ್ನು ಪ್ರಾರಂಭಿಸಲಾಗಿದೆ. ದತ್ತಾಂಶ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಚ್ ಮಾತನಾಡಿ, ಅಧಿಕೃತ ಮಾಹಿತಿಯ ಕೊರತೆಯಿಂದ ಸರ್ಕಾರವು ಯಾವುದೇ ನೀತಿಯನ್ನು ರೂಪಿಸಲು ಮತ್ತು ತುಳಿತಕ್ಕೊಳಗಾದ ಸಮುದಾಯಕ್ಕೆ ನೇರ ಪ್ರಯೋಜನಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಸಮೀಕ್ಷೆಯು ತೃತೀಯಲಿಂಗಿಗಳ ವೈಯಕ್ತಿಕ ವಿವರಗಳು, ಶಿಕ್ಷಣ, ವೃತ್ತಿ, ವಸತಿ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಇತರ ಮಾಹಿತಿಯನ್ನು ದಾಖಲಿಸುತ್ತದೆ. ತೃತೀಯಲಿಂಗಿ ಸಮುದಾಯದ ಸದಸ್ಯರು ಸಮೀಕ್ಷೆಯನ್ನು ರೂಪಿಸಿದ್ದಾರೆ ಮತ್ತು ಪ್ರತಿ ಜಿಲ್ಲೆಯಲ್ಲೂ ಅವರು ಕಾರ್ಯಗತಗೊಳಿಸುತ್ತಾರೆ ಎಂದರು.

ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಸಮನ್ವಯಾಧಿಕಾರಿ ಮಲ್ಲು ಕುಂಬಾರ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ರಾಜ್ಯ ಸರ್ಕಾರ 2017ರಲ್ಲಿ ನೀತಿ ರೂಪಿಸಿದ್ದು, ಕಾರಣಾಂತರಗಳಿಂದ ಸಮೀಕ್ಷೆ ನಡೆದಿಲ್ಲ. ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಮಲ್ಲು, ಈ ಸಮೀಕ್ಷೆಯು ಹಲವಾರು ಟ್ರಾನ್ಸ್-ಪರ್ಸನ್ಸ್ ಹೊರಬರಲು ಸಹಾಯ ಮಾಡುತ್ತದೆ ಎಂದು ಹೇಳಿದರು.
2014ರಲ್ಲಿ ಕೇರಳದಲ್ಲಿ ಇದೇ ರೀತಿಯ ಸಮೀಕ್ಷೆಯನ್ನು ನಡೆಸಲಾಯಿತು. ಈಗ ಆ ರಾಜ್ಯವು ಈಗ ಸುಮಾರು ಎರಡು ಲಕ್ಷ ತೃತೀಯ ಲಿಂಗಿಗಳು ಇರುವುದನ್ನು ಅಧಿಕೃತವಾಗಿ ಖಾತರಿಪಡಿಸಿದೆ. ಕರ್ನಾಟಕದಲ್ಲೂ ಅದೇ ಮಾದರಿಯನ್ನು ನಿರೀಕ್ಷಿಸಬಹುದು. ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲು ಕೇವಲ 70 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದು, ಅದು ಸಾಕಾಗುತ್ತಿಲ್ಲ. ಹೆಸರಿಗಾಗಿ ಸರ್ಕಾರ ಈ ಸಮೀಕ್ಷೆ ನಡೆಸಬಾರದು ಎಂದು ಮಲ್ಲು ಹೇಳಿದರು.
ಪುಷ್ಪಲತಾ ಮಾತನಾಡಿ, ಪ್ರಯೋಗಾತ್ಮಕ ಸಮೀಕ್ಷೆಯ ಸಾಧಕ-ಬಾಧಕಗಳ ಆಧಾರದ ಮೇಲೆ ಅಗತ್ಯವಿದ್ದಲ್ಲಿ ಸರ್ಕಾರ ಮತ್ತಷ್ಟು ಹಣ ಮಂಜೂರು ಮಾಡಲಿದೆ. ತೃತೀಯಲಿಂಗಿ ಸಮುದಾಯದ ಅಗತ್ಯತೆಗಳು, ಪ್ರತಿ ಜಿಲ್ಲೆಯಲ್ಲಿನ ತೃತೀಯಲಿಂಗಿಗಳ ಸಾಂದ್ರತೆ, ಅವರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸ್ಥಿತಿಗತಿಗಳು ಮತ್ತು ಅವರ ಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಮೀಕ್ಷೆಯು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದರು.












Click it and Unblock the Notifications