Bengaluru-Mumbai Expressway: ಬೆಂಗಳೂರು-ಪುಣೆ-ಮುಂಬೈ 14 ಲೇನ್ ಹೆದ್ದಾರಿ ಯೋಜನೆ ಅಪ್‌ಡೇಟ್
ಬೆಂಗಳೂರನ್ನು ಸಂಪರ್ಕಿಸಲು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಹುತೇಕ ಮುಕ್ತಾಯ ಹಂತ ತಲುಪಿದೆ. ಇದೀಗ ಬೆಂಗಳೂರು - ತುಮಕೂರು ನಡುವೆ ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಡೆಯುತ್ತಿದ್ದು ಇನ್ನು ಎರಡು ವರ್ಷದಲ್ಲಿ ಮುಗಿಯುವ ಸಾಧ್ಯತೆ ಇದೆ. ಇದರ ಜೊತೆ ಬೆಂಗಳೂರು ಪುಣೆ ಮುಂಬೈ ಸಂಪರ್ಕಿಸುವ 14 ಲೇನ್ ಹೆದ್ದಾರಿ ಯೋಜನೆ ರೂಪಿಸಲಾಗಿದ್ದು, ಸಂಸದ ಪಿಸಿ ಮೋಹನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಸಂಸದ ಪಿಸಿ ಮೋಹನ್, ಮುಂಬೈ-ಪುಣೆ-ಬೆಂಗಳೂರು 14-ಲೇನ್ ಹೆದ್ದಾರಿ ಯೋಜನೆಯು ಶೀಘ್ರದಲ್ಲೇ ಅನುಷ್ಠಾನವಾಗಲಿದೆ. ಮಹಾರಾಷ್ಟ್ರದಲ್ಲಿ 360 ಕಿ.ಮೀ ಹೆದ್ದಾರಿ ನಿರ್ಮಾಣಕ್ಕೆ ಈಗಾಗಲೇ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲಾಗಿದ್ದು ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 496 ಕಿ.ಮೀ ಮಾರ್ಗದ ಹೆದ್ದಾರಿ ನಿರ್ಮಾಣವಾಗಲಿದ್ದು ಯೋಜನೆಯ ಹಂತದಲ್ಲಿದೆ. 2028ರ ವೇಳೆಗೆ ಕಾಮಗಾರಿಯನ್ನು ಮುಗಿಸುವ ಗುರಿ ಹೊಂದಲಾಗಿದೆ. ಈ ಹೆದ್ದಾರಿ ನಿರ್ಮಾಣವಾದ ಬಳಿಕ ಬೆಂಗಳೂರಿನಿಂದ ಪುಣೆ ನಡುವಿನ ಪ್ರಯಾಣದ ಅವಧಿ 8 ಗಂಟೆಗೆ ಕಡಿಮೆಯಾಗಲಿದೆ, ಬೆಂಗಳೂರಿನಿಂದ ಮುಂಬೈ ಪ್ರಯಾಣದ ಅವಧಿ ಕೇವಲ 10 ಗಂಟೆಗಳಾಗಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆ
ಕೇಂದ್ರ ಸಚಿವ ನಿತಿನ್ ಗಡ್ಕರಿ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ಮುಂಬೈನ ಅಟಲ್ ಸೇತುವೆಯಿಂದ ಆರಂಭವಾಗುವ 14 ಲೇನ್‌ಗಳ ಹೆದ್ದಾರಿ ಪುಣೆ ಮೂಲಕವಾಗಿ ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಿದ್ದರು. ಇನ್ನು ಆರು ತಿಂಗಳಿಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದ್ದು, ಈ ಹೊಸ ಮಾರ್ಗವು ಈ ಅಸ್ತಿತ್ವದಲ್ಲಿರುವ ಮುಂಬೈ ಪುಣೆ ಎಕ್ಸ್‌ಪ್ರೆಸಸ್‌ವೇಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು 50 ಪ್ರತಿಶತ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ ರೈತರು ಮತ್ತು ಗ್ರಾಮೀಣ ನಿವಾಸಿಗಳ ಅಭಿವೃದ್ಧಿಗೆ ಪೂರಕವಾಗಿರಬೇಕು, ನಗರ ವಲಸೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. ಈ ಹೆದ್ದಾರಿ ಪೂರ್ಣವಾದ ಬಳಿ, ಪುಣೆ, ಸಂಭಾಜಿನಗರ ಮತ್ತು ಬೆಂಗಳೂರು ನಡುವೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಜೊತೆಗೆ ಆರ್ಥಿಕ ಸಂಬಂಧವನ್ನು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಇನ್ನು ಕೆಲವೇ ತಿಂಗಳಿನಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಒಮ್ಮೆ ಶುರುವಾದರೆ ತ್ವರಿತವಾಗಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ. ನಾಲ್ಕು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಂಡಿದ್ದು, ಹೆದ್ದಾರಿಯ ಅಕ್ಕಪಕ್ಕದಲ್ಲಿ ಬರುವ ಜಿಲ್ಲಾ, ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಭಾರಿ ಸಹಾಯವಾಗಲಿದೆ.












Click it and Unblock the Notifications