ರಸ್ತೆಯಲ್ಲಿ ವಾಹನ ಸವಾರರನ್ನು ತಡೆಯಕೂಡದು; ಡಿಜಿ & ಐಜಿಪಿ ಸುತ್ತೋಲೆ

ಬೆಂಗಳೂರು, ಜೂನ್ 06: ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಹೊರತುಪಡಿಸಿ ಇತರೆ ಯಾವುದೇ ಚಾಲಕ/ ಸವಾರರನ್ನು ರಸ್ತೆಗಳಲ್ಲಿ ತಡೆಯಕೂಡದು ಎಂದು ಡಿಜಿ & ಐಜಿಪಿ ಸುತ್ತೋಲೆಯಲ್ಲಿ ಎಲ್ಲಾ ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ.

ಡಾ. ಅಲೋಕ್ ಮೋಹನ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ಕರ್ನಾಟಕ ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಹಲವಾರು ಪರಿಣಾಮಗಳನ್ನು ಉಂಟುಮಾಡಿದೆ. ಅದರಲ್ಲೂ ಮುಖ್ಯವಾಗಿ ಸಂಚಾರ ದಟ್ಟಣೆ, ಮಾಲಿನ್ಯ ಮತ್ತು ಪ್ರಯಾಣದ ಸಮಯದಲ್ಲಿ ಹೆಚ್ಚಳ ಇತ್ಯಾದಿ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

Traffic Fine Collections

ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ರಾಜ್ಯವು ಕ್ಷಿಪ್ರ ನಗರೀಕರಣಕ್ಕೆ ಸಾಕ್ಷಿಯಾಗಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಕೈಗಾರಿಕೆಗಳ ಹಾಗೂ ವಾಣಿಜ್ಯೋದ್ಯಮಗಳ ನಿರಂತರ ಬೆಳವಣಿಗೆ ಹಾಗೂ ತತ್ಸಂಬಂಧಿತ ಉದ್ಯೋಗಗಳಿಂದಾಗಿ ಲಕ್ಷಾಂತರ ವಾಹನಗಳು ರಸ್ತೆಗೆ ಇಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆ ಹಾಗೂ ರಸ್ತೆ ಮೂಲಸೌಕರ್ಯದ ಕೊರತೆಗಳು ನಗರ ಪ್ರದೇಶದಲ್ಲಿ ಸಂಚಾರ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾದ ಅಂಶಗಳಾಗಿವೆ ಎಂದು ಅವರು ವಿವರಿಸಿದ್ದಾರೆ.

ನಗರ ಪ್ರದೇಶದ ಸಂಚಾರ ಸಮಸ್ಯೆ; ನಗರ ಪ್ರದೇಶಗಳಲ್ಲಿನ ಸಂಚಾರ ನಿರ್ವಹಣೆಯು ಹಲವು ಸಂಸ್ಥೆಗಳು ನಿರ್ವಹಿಸಬೇಕಾದ ಕಾರ್ಯವಾಗಿದೆ. ನಗರ ಪ್ರದೇಶದ ಸುಗಮ ಸಂಚಾರ ನಿರ್ವಹಣೆ ಹಾಗೂ ರಸ್ತೆ ಅಪಘಾತಗಳನ್ನು ತಡೆಯುವ ಕಾರ್ಯವು ಸಂಚಾರ ಪೊಲೀಸ್, ಪೌರಾಡಳಿತ ಇಲಾಖೆ, ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ ಮುಂತಾದ ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ. ಸಂಚಾರ ನಿರ್ವಹಣೆಯಲ್ಲಿ ಪ್ರಮುಖವಾಗಿ ಸಂಚಾರ ಪೊಲೀಸರು ರಸ್ತೆಯ ಮೇಲೆ ಗೋಚರಿಸುವುದರಿಂದ, ಸಂಚಾರ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಸಾಮಾನ್ಯವಾಗಿ ಸಂಚಾರ ಪೊಲೀಸರನ್ನೇ ದೂಷಿಸುವ ಪರಿಪಾಠವಿದೆ ಎಂದು ಹೇಳಿದ್ದಾರೆ.

Traffic Fine Collections

ಡಿಜಿ & ಐಜಿಪಿ ಸುತ್ತೋಲೆಯಲ್ಲಿ ನಗರ ಹಾಗೂ ನಗರ ಪ್ರದೇಶದಲ್ಲಿನ ಸಂಚಾರ ನಿರ್ವಹಣೆ ಸಂಬಂಧವಾಗಿ ಈ ಕೆಳಕಂಡ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವಂತೆ ಸಂಚಾರ ಪೊಲೀಸರಿಗೆ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

1. ಸಂಚಾರ ನಿಯಂತ್ರಣದ ಮೂಲಕ ಸುಗಮ ಸಂಚಾರವನ್ನು ಜಾರಿ ಮಾಡುವುದು
2. ಸಂಚಾರ ನಿಯಮಗಳ ಜಾರಿ, ತನ್ಮೂಲಕ ರಸ್ತೆಗಳಲ್ಲಿ ಶಿಸ್ತನ್ನು ತರುವುದು
3. ಅಪಘಾತಗಳನ್ನು ತಡೆಯುವುದು ಹಾಗೂ ಅಪಘಾತ ಪ್ರಕರಣಗಳ ತನಿಖೆ
4. ಸಂಚಾರ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಇತರೆ ಸಂಸ್ಥೆಗಳೊಂದಿಗೆ ಸಮನ್ವಯತೆ
5. ರಸ್ತೆ ಸುರಕ್ಷತೆ ಶಿಕ್ಷಣ

ರಾಜ್ಯದ ಸಂಚಾರ ಪೊಲೀಸ್ ಅಧಿಕಾರಿ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿಗಳು ಸಾಮಾನ್ಯವಾಗಿ ಸಂಚಾರ ನಿಯಮಗಳ ಜಾರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದನ್ನು ಕಾಣಬಹುದಾಗಿದೆ (ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ಮತ್ತು ದಂಡ ಸಂಗ್ರಹಣೆ). ಆದರೆ ಮೂಲ ಕರ್ತವ್ಯವಾದ ಸಂಚಾರ ನಿಯಂತ್ರಣದ ಮೂಲಕ ಸುಗಮ ಸಂಚಾರವನ್ನು ಏರ್ಪಡಿಸುವ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಎಂಬುದು ಕಂಡುಬರುತ್ತದೆ.

ಇದು ಸಂಚಾರ ದಟ್ಟಣೆಗೆ ಕಾರಣವಾಗಿರುವ ಪ್ರಮುಖ ಅಂಶವಾಗಿದ್ದು, ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ವಿಶ್ವಾಸಾರ್ಹತೆಯ ಮಟ್ಟವನ್ನು ತಗ್ಗಿಸಲು ಹಾಗೂ ವಿಶೇಷವಾಗಿ ಸಂಚಾರ ಪೊಲೀಸರ ಮೇಲಿನ ವಿಶ್ವಾಸಾರ್ಹತೆಯನ್ನು ಸಂಶಯಾಸ್ಪದವಾಗಿ ನೋಡುವ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರು ಕೈಗೊಳ್ಳುವ ಸಾರ್ವಜನಿಕರ ವಾಹನಗಳ ದಾಖಲಾತಿಗಳ ಪರಿಶೀಲನೆಯ ಕಾರ್ಯವನ್ನು ಜನರು ಅನುಮಾನದಿಂದ ನೋಡುವಂತಾಗಿ ವಿನಾಕಾರಣ ಸಂಚಾರ ಪೊಲೀಸರು ತಮಗೆ ತೊಂದರೆ ಕೊಡುತ್ತಿದ್ದಾರೆಂದು ದೂಷಿಸುವ ಸಂದರ್ಭಗಳು ಆಗಾಗ ಘಟಿಸುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಸಂಚಾರ ನಿಯಂತ್ರಣಕ್ಕೆ ಒತ್ತು; ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರ ಕರ್ತವ್ಯದ ಪ್ರಾಮುಖ್ಯತೆಯನ್ನು ವಾಹನಗಳ ದಾಖಲಾತಿ ಪರಿಶೀಲನೆ ಮಾಡುವ ಬದಲಿಗೆ ಸಂಚಾರ ನಿಯಂತ್ರಣದೆಡೆಗೆ ಒತ್ತು ನೀಡುವ ಅವಶ್ಯಕತೆ ಇದೆ. ಎಲ್ಲಾ ಸಂಚಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ವಾಹನಗಳ ದಾಖಲಾತಿ ಪರಿಶೀಲನೆಗೆ ತೊಡಗದೇ ರಸ್ತೆಗಳ ಮೇಲೆ ನಿಂತು ಸಂಚಾರ ನಿಯಂತ್ರಣದಲ್ಲಿ ತೊಡಗಿಕೊಳ್ಳುವುದು ಅಗತ್ಯ. ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸುವ ಹಳೆಯ ಪದ್ಧತಿಯನ್ನು ತೊರೆದು ಹೊಸ ಸ್ವಯಂಚಾಲಿತ ಚಲನ್ ವ್ಯವಸ್ಥೆ (ಸಂಪರ್ಕರಹಿತ ನಿಯಮಗಳ ಜಾರಿ ಪದ್ಧತಿ) ಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಸುತ್ತೋಲೆ ಹೇಳಿದೆ.

ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐ.ಟಿ.ಎಂ.ಎಸ್) ನ ಭಾಗವಾದ ಸ್ವಯಂಚಾಲಿತ ಚಲನಿಂಗ್ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆಯ ಶೇ 97ರಷ್ಟು ಪ್ರಕರಣಗಳನ್ನು ನವೀನ ತಂತ್ರಜ್ಞಾನದ ಬಳಕೆಯಿಂದಲೇ ದಾಖಲಿಸಲಾಗುತ್ತಿದೆ. ಈ ವ್ಯವಸ್ಥೆಯು ಮಾದರಿಯಾಗಿದ್ದು, ರಾಜ್ಯದ ಇತರ ಎಲ್ಲಾ ನಗರಗಳು ಹಾಗೂ ಜಿಲ್ಲಾ ಕೇಂದ್ರಸ್ಥಾನಗಳಲ್ಲಿ ಇದನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷಕರು ಕ್ರಮವಾಗಿ ತಮ್ಮ ನಗರ ಮತ್ತು ಜಿಲ್ಲೆಗಳಲ್ಲಿ ಸ್ವಯಂಚಾಲಿತ ಚಲನಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲು ಸೂಚಿಸಲಾಗಿದೆ.

ಈಗಾಗಲೇ ಸ್ಮಾರ್ಟ್ ಸಿಟಿ ಹಾಗೂ ಇತರೆ ಯೋಜನೆಗಳಡಿಯಲ್ಲಿ ಅಳವಡಿಸಲಾಗಿರುವ ಕಣ್ಣಾವಲು ಕ್ಯಾಮರಾಗಳನ್ನು ಬಳಸಿಕೊಂಡು ಸಂಪರ್ಕರಹಿತ ನಿಯಮ ಜಾರಿ ವ್ಯವಸ್ಥೆಯಲ್ಲಿ ಪರಿಚಯಿಸಲು ಮುಂದಾಗುವುದು. ಐ.ಟಿ.ಎಂ.ಎಸ್‌ ಯೋಜನೆಯನ್ನು ಪರಿಚಯಿಸುವವರೆಗೆ, ಡಿಜಿಟಲ್ ಕ್ಯಾಮರಾಗಳು, ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿರುವ ಕ್ಯಾಮರಾಗಳನ್ನು ಉಪಯೋಗಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆಗಳ ಛಾಯಾಚಿತ್ರವನ್ನು ಸೆರೆಹಿಡಿದು, ಸಂಚಾರ ಉಲ್ಲಂಘನೆ ಚಲಾನ್‌ಗಳನ್ನು ವಿತರಿಸುವುದು ಹಾಗೂ ಸಂಬಂಧಪಟ್ಟ ವಾಹನಗಳ ಮಾಲೀಕರಿಗೆ ಅಂಚೆಯ ಮೂಲಕ ದಂಡ ಪಾವತಿಸುವಂತೆ ನೋಟೀಸ್‌ಗಳನ್ನು ತಲುಪಿಸುವ ಕ್ರಮ ಕೈಗೊಳ್ಳುವುದು.

ಸಂಚಾರ ನಿಯಮ ಉಲ್ಲಂಘನೆಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಫೀಲ್ಡ್ ಟ್ರಾಫಿಕ್ ವಯೊಲೇಷನ್ ವರದಿ (ಎಫ್.ಟಿ.ವಿ.ಆರ್) ತಂತ್ರಾಂಶ ಹಾಗೂ ಎಫ್.ಟಿ.ವಿ.ಆರ್ ಪರವಾನಗಿಗಳನ್ನು ಬಳಸಿಕೊಳ್ಳುವುದು.
ರಸ್ತೆಗಳಲ್ಲಿ ಸುಗಮ ಸಂಚಾರ ಏರ್ಪಡಿಸುವ ಸಲುವಾಗಿ ಹಾಗೂ ಉತ್ತಮ ಸಂಚಾರ ನಿಯಂತ್ರಣದ ಹಿತದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ತುರ್ತಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದೆ.

* ಕಣ್ಣಿಗೆ ಗೋಚರಿಸುವ ಸಂಚಾರ ನಿಯಮ ಉಲ್ಲಂಘಿಸುವ ಉಲ್ಲಂಘನೆದಾರರನ್ನು ಹೊರತುಪಡಿಸಿ ಇತರೆ ಯಾವುದೇ ಚಾಲಕ/ ಸವಾರರನ್ನು ರಸ್ತೆಗಳಲ್ಲಿ ತಡೆಯಕೂಡದು.

* ಸಂಚಾರ ಪೀಕ್ ಸಮಯಕ್ಕೆ ಮುನ್ನವೇ ಸಂಚಾರ ಪೊಲೀಸ್‌ ಅಧಿಕಾರಿಗಳು ರಸ್ತೆಯ ಮೇಲಿದ್ದು ತಮ್ಮ ತಮ್ಮ ಸರಹದ್ದಿನಲ್ಲಿ ಗಸ್ತಿನಲ್ಲಿರತಕ್ಕದ್ದು. ಇದರಿಂದ ಸಂಚಾರ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿ ಆ ಕ್ಷಣದ ಸಂಚಾರ ಸಮಸ್ಯೆಗಳ ಬಗ್ಗೆ ಮಾಹಿತಿ ಲಭ್ಯವಾಗುವುದಲ್ಲದೇ ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಅದನ್ನು ಪರಿಹರಿಸಲು ಸಾಕಷ್ಟು ಸಮಯಾವಕಾಶವಿರುವ ಕಾರಣ ದಟ್ಟಣೆ ಉಂಟಾಗದಂತೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.

* ಸಂಚಾರ ಪೊಲೀಸ್ ಅಧಿಕಾರಿಗಳು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಸಮಯದಲ್ಲೂ ಬಾಡಿ ವೊರ್ನ್ ಕ್ಯಾಮರಾಗಳನ್ನು ಧರಿಸತಕ್ಕುದು.

* ನಿಲುಗಡೆ ನಿಷಿದ್ಧ ಸ್ಥಳದಲ್ಲಿ ನಿಲುಗಡೆ ಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳತಕ್ಕದ್ದು. ಇಂತಹ ಸಂದರ್ಭದಲ್ಲಿ ಅಂತಹ ವಾಹನಗಳನ್ನು ತಕ್ಷಣವೇ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡತಕ್ಕದ್ದು.

* ಎ.ಎಸ್.ಐ ಹಾಗೂ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಾನೂನು ಪ್ರದತ್ತವಾಗಿರುವ ಅಧಿಕಾರವು ಅತ್ಯಂತ ಮಹತ್ವದ್ದಾಗಿದ್ದು, ಇದು ಪೊಲೀಸ್ ಅಧಿಕಾರಿಗಳಿಗಿರುವ ಪ್ರಾಮುಖ್ಯತೆ ಹಾಗೂ ಅವರ ಸರಹದ್ದಿನಲ್ಲಿ ವಿವೇಚನೆಯನ್ವಯ ಬಳಸಬಹುದಾದ ಅಧಿಕಾರವಾಗಿದೆ. ಈ ಅಧಿಕಾರವು ಅಂಕಿ-ಅಂಶಗಳನ್ನು ಸೃಷ್ಟಿಸುವ ಅಥವಾ ಜನಸಾಮಾನ್ಯರಿಗೆ ಅವರು ಉಲ್ಲಂಘಿಸಿರುವ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಗಳನ್ನು ದಂಡ ಪಾವತಿಸಿ ಮುಕ್ತಾಯ ಮಾಡಿಕೊಳ್ಳಬೇಕೆಂದು ಒತ್ತಾಯಿಸುವ ಸಾಧನವನ್ನಾಗಿ ಬಳಸಿಕೊಳ್ಳಕೂಡದು.

* ನಿಯಮ ಉಲ್ಲಂಘನೆಗಳನ್ನು ಮಾಡಿದ ವ್ಯಕ್ತಿಗೆ ಇರುವ ಕಾನೂನು ಪ್ರಕ್ರಿಯೆಯ ಸಾಧ್ಯತೆಗಳನ್ನು ಅವರಿಗೆ ಆಯ್ಕೆ ಮಾಡಲು ಅವಕಾಶ ನೀಡಬೇಕೇ ಹೊರತು ದಂಡ ಪಾವತಿ ಮೂಲಕ ಮುಕ್ತಾಯಗೊಳಿಸಿಕೊಳ್ಳವಂತೆ ಒತ್ತಾಯಪೂರ್ವಕವಾಗಿ ಹಣಪಡೆಯುವುದಾಗಲೀ ಅಥವಾ ಅಂತಹ ವ್ಯಕ್ತಿಯೇ ಉಲ್ಲಂಘಿಸಿರುವರೆಂಬ ಆರೋಪವನ್ನು ದೃಢೀಕರಿಸುವುದಕ್ಕಾಗಲೀ ಬಳಸಕೂಡದು.

* ಸಾಕ್ಷಾಧಾರ ಸಹಿತ ಇರುವ ಸಂಚಾರ ನಿಯಮ ಜಾರಿ ಪ್ರಕ್ರಿಯೆಯು ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಹಾಗೂ ದೋಷರಹಿತವಾಗಿದೆ ಎಂಬುದನ್ನು ಎಲ್ಲಾ ಪೊಲೀಸ್ ಅಧಿಕಾರಿಗಳು ಮನಗಾಣಬೇಕು.

* ಜನಸಾಮಾನ್ಯರು ಈ ಪಾರದರ್ಶಕ ವ್ಯವಸ್ಥೆಯ ಜಾರಿ ಪದ್ಧತಿಯನ್ನು ಸ್ವಾಗತಿಸಿದ್ದಾರೆ. ಈ ಪ್ರಕ್ರಿಯೆಯು, ಮಾನವ ದೋಷದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಿ, ಉಲ್ಲಂಘನೆ ಸ್ಪಷ್ಟವಾಗಿ ಗೋಚರವಾದಲ್ಲಿ ಮಾತ್ರ ಕಾನೂನು ಪ್ರಕ್ರಿಯೆ ಚಾಲನೆಗೊಳ್ಳುವ ದೋಷರಹಿತ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

* ಸಂಚಾರ ಪೊಲೀಸ್ ಕರ್ತವ್ಯದ ಎಲ್ಲಾ ಸ್ಥರಗಳಲ್ಲೂ ಹಾಗೂ ಸಂದರ್ಭಗಳಲ್ಲೂ ಅತ್ಯಂತ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತೀ ಅವಶ್ಯಕ. ಪ್ರತಿಯೊಂದು ವ್ಯವಹಾರವೂ ದೋಷರಹಿತವಾಗಿದ್ದು, ಉಲ್ಲಂಘನೆದಾರರಿಗೆ ಅವರು ಪಾವತಿಸಿದ ಮೊತ್ತಕ್ಕೆ ಸಮನಾದ ಅಧಿಕೃತ ಸ್ವೀಕೃತಿಯನ್ನು ತಕ್ಷಣವೇ ನೀಡತಕ್ಕದ್ದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+