ತಾ & ಜಿ ಪಂಚಾಯಿತಿ ಚುನಾವಣೆ: 5 ಲಕ್ಷ ದಂಡ ಕಟ್ಟಿದ ಸರ್ಕಾರ!
ಕರ್ನಾಟಕ ಸರ್ಕಾರ ಕೊನೆಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಪ್ರಕಟಿಸಿದೆ.
ಬೆಂಗಳೂರು, ಮಾರ್ಚ್ 02; ಕೊನೆಗೂ ಕರ್ನಾಟಕ ಸರ್ಕಾರ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಕುರಿತು ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಹೈಕೋರ್ಟ್ ವಾಗ್ದಾಳಿ ನಡೆಸಿ ವಿಧಿಸಿದ್ದ 5 ಲಕ್ಷ ರೂ. ದಂಡವನ್ನೂ ಸಹ ಪಾವತಿ ಮಾಡಿ ನ್ಯಾಯಾಲಯ ಆದೇಶ ಪಾಲನೆ ಮಾಡಿದೆ.
ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಿರುವ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿರುವ ಸರ್ಕಾರ ಸದ್ಯಕ್ಕೆ ಕೋರ್ಟ್ ಕೆಂಗಣ್ಣಿನಿಂದ ಪಾರಾಗಿದೆ. ಸರ್ಕಾರ ಅಧಿಸೂಚನೆ ಪ್ರಕಟಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗಿತ್ತು. ಸುಮಾರು ಎರಡು ವರ್ಷಗಳಿಂದ ಅಧಿಕಾರಿಗಳ ದರ್ಬಾರ್‌ನಲ್ಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ವಿಧಾನಸಭಾ ಚುನಾವಣೆಯ ನಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು 'ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ'ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬುಧವಾರ ವಿಚಾರಣೆಗೆ ಬಂದಿತ್ತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠದ ಮುಂದೆ ಸರ್ಕಾರದ ಪರ ವಕೀಲರು ಹಾಜರಾಗಿ ವಿಷಯವನ್ನು ತಿಳಿಸಿದರು.
ಅಲ್ಲದೇ, ಕ್ಷೇತ್ರದ ಪುನರ್ವಿಂಗಡಣೆಗೆ ಕುರಿತು ಗುರುವಾರ ಹೊರಡಿಸಲಿರುವ ಅಧಿಸೂಚನೆ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
5 ಲಕ್ಷ ದಂಡ ಪಾವತಿ: ಅಲ್ಲದೇ ಈ ಹಿಂದೆ ನಡೆದ ಅರ್ಜಿ ವಿಚಾರಣೆ ವೇಳೆ ನಿಗದಿತ ಸಮಯಕ್ಕೆ ಚುನಾವಣೆ ಪ್ರಕ್ರಿಯೆ ನಡೆಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ 5 ಲಕ್ಷ ದಂಡ ವಿಧಿಸಿತ್ತು. ಈ ಮೊತ್ತವನ್ನು ಪಾವತಿಸಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಅರ್ಜಿದಾರರ ಪರ ಹಾಜರಿದ್ದ ವಕೀಲರು, ಹಿರಿಯ ವಕೀಲರು ಮತ್ತೊಂದು ನ್ಯಾಯಪೀಠದ ಮುಂದೆ ವಾದ ಮಂಡಿಸುತ್ತಿದ್ದ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಈ ಅಂಶ ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಗುರುವಾರ ಮುಂದೂಡಿತು.

ಫೆಬ್ರವರಿ 14ರಂದು ನಡೆದ ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಕ್ಷೇತ್ರ ಪುನರ್ ವಿಂಗಡಣೆ ಕುರಿತಂತೆ ಸರ್ಕಾರ ಸಮಿತಿ ರಚನೆ ಮಾಡಿದ್ದು, ಈ ಸಮಿತಿ 2022ರ ಜನವರಿ 30 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯ ಆಧಾರದಲ್ಲಿ ಅಧಿಸೂಚನೆ ಹೊರಡಿಸುವುದಕ್ಕಾಗಿ ಸರ್ಕಾರ ಸಿದ್ದವಿದೆ. ಮುಂದಿನ 10 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದ್ದರು.
ಏ.1ರಂದು ಮೀಸಲು ಪಟ್ಟಿ: ಅಲ್ಲದೆ, ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳು ಮತ್ತು ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ನೀಡುವ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ಏಪ್ರಿಲ್ 1ರಂದು ಮೀಸಲಾತಿ ಪಟ್ಟಿ ಸಲ್ಲಿಸಲಿದೆ. ಈ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಜೊತೆಗೆ ಕ್ಷೇತ್ರ ಪುನರ್ ವಿಂಗಡಣಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಈ ವೇಳೆಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಧಿಸೂಚನೆ ಹೊರಡಿಸುವುದಾಗಿ ನ್ಯಾಯಪೀಠಕ್ಕೆ ಅಡ್ವೋಕೇಟ್ ಜನರಲ್ ವಿವರಣೆ ನೀಡಿದ್ದರು.












Click it and Unblock the Notifications