ರಾಜ್ಯದಲ್ಲಿ ಟೊಯೋಟಾ ಕಂಪನಿಯ ಹೂಡಿಕೆ ಅಬಾಧಿತ: ಎಂ ಬಿ ಪಾಟೀಲ
ಬೆಂಗಳೂರು: ಮಹಾರಾಷ್ಟ್ರದಲ್ಲೂ ಹೂಡಿಕೆ ಮಾಡುತ್ತಿರುವುದನ್ನು ಬೇರೆ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ, ರಾಜ್ಯದಲ್ಲಿ ಆ ಕಂಪನಿಯ ಹೂಡಿಕೆ ಅಬಾಧಿತ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟಪಡಿಸಿದ್ದಾರೆ.
'ನಮ್ಮಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರು ಇನ್ನೊಂದು ಕಡೆ ಬಂಡವಾಳ ಹೂಡಬಾರದು ಎಂದೇನಿಲ್ಲ. ಟೊಯೋಟಾ ಕಂಪನಿಯು ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು. ಆದರೆ ರಾಜ್ಯದಲ್ಲಿ ಆ ಕಂಪನಿಯ ಹೂಡಿಕೆ ಎಂದಿನಂತೆಯೇ ಮುಂದುವರಿದುಕೊಂಡು ಹೋಗಲಿದೆ' ಎಂದು ಭರವಸೆ ನೀಡಿದ್ದಾರೆ.

ಕೈಗಾರಿಕ ಉದ್ಯಮಗಳು ತಮ್ಮ ವಿಸ್ತಾರವನ್ನು ಪಸರಿಸುವುದು ಸಾಮಾನ್ಯ ವಿದ್ಯಮಾನ. ಟೊಯೋಟಾ ಕೂಡ ಅದೇ ರೀತಿಯಲ್ಲಿ ನೆರೆ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ಭಾವಿಸಬಾರದು ಎಂದು ತಿಳಿಸಿದ್ದಾರೆ.
ಟೊಯೋಟಾ ಕಂಪನಿಯು 2023ರಲ್ಲಿ 3,300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬಿಡದಿಯಲ್ಲಿ ತನ್ನ ಮೂರನೇ ಕಾರು ತಯಾರಿಕೆ ಘಟಕ ತೆರೆಯಲು ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2022ರಲ್ಲಿ ಅದು ನಮ್ಮಲ್ಲಿ 4,100 ಕೋಟಿ ರೂಪಾಯಿ ಹೂಡಿದೆ. ಅದರ ಕೇಂದ್ರ ಕಚೇರಿ ಮತ್ತು ಸಂಶೋಧನಾ ಕೇಂದ್ರಗಳು ನಮ್ಮಲ್ಲೇ ಇವೆ ಎಂದು ಅವರು ಹೇಳಿದ್ದಾರೆ.
ಬಿಡದಿಯಲ್ಲಿ ಮೂರನೇ ಕಾರು ಉತ್ಪಾದನಾ ಘಟಕ ಆರಂಭಿಸಿ, ಎರಡು ಸಾವಿರ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಕಂಪನಿ ನೀಡಿದೆ. ಈ ಘಟಕ ಸಂಬಂಧ ಸರ್ಕಾರ ಹಾಗೂ ಕಂಪನಿ ನಡುವೆ ಒಪ್ಪಂದ ಆಗಿದೆ. ಈಗಾಗಲೇ ಟೊಯೋಟಾ ಕಂಪನಿಯ ಎರಡು ಘಟಕಗಳು ಬಿಡದಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ.
ಮೂರನೇ ಘಟಕವನ್ನು ಆರಂಭಿಸಿ ವರ್ಷಕ್ಕೆ ಹೆಚ್ಚುವರಿಯಾಗಿ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.












Click it and Unblock the Notifications