ಟಾಪ್ vs ಪಾಟ್ : ಬಿಜೆಪಿ ಏಟಿಗೆ ರಮ್ಯಾ ಎದಿರೇಟು!
Recommended Video

ಬೆಂಗಳೂರು, ಫೆಬ್ರವರಿ 05 : ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕಾಗಿ ಬೆಂಗಳೂರಿಗೆ ನರೇಂದ್ರ ಮೋದಿಯವರು ಬಂದು, ಗಂಟೆಗೂ ಹೆಚ್ಚು ಭಾಷಣ ಮಾಡಿಹೋದ ನಂತರ ಪರ-ವಿರೋಧಿಗಳ ನಡುವೆ ಮಾತಿನ ಚಕಮಕಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿದೆ.
ಒಂದು ಗಂಟೆಗೂ ಹೆಚ್ಚು ಮಾಡಿದ ಭಾಷಣದಲ್ಲಿ, ಕಾಂಗ್ರೆಸ್ ಸರಕಾರ ರಾಜ್ಯದಿಂದ ಹೊರಹೋಗುವ ಹಾದಿಯಲ್ಲಿದೆ ಎಂದಿದ್ದ ಮೋದಿ, ದೇಶದ ಕೃಷಿಕರಿಗಾಗಿ ಟೊಮೆಟೊ ಈರುಳ್ಳಿ ಆಲೂಗಡ್ಡೆ (TOP - Tamoto, Onion, Potato) ಬೆಳೆಯುವ ರೈತರಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದಿದ್ದರು.
ಮೋದಿ ಅವರ TOP (ಟೊಮೆಟೊ, ಈರುಳ್ಳಿ, ಆಲೂಗಡ್ಡೆ) ಆದ್ಯತೆಯ ಬಗ್ಗೆ, ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ವ್ಯಂಗ್ಯಭರಿತ ಟೀಕಾಸ್ತ್ರ ಪ್ರಯೋಗಿಸಿದ ಮೇಲೆ ಬಿಜೆಪಿಯ ನಾಯಕ, ನಟ ಜಗ್ಗೇಶ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿರುವ ಶಿಲ್ಪಾ ಗಣೇಶ್ ಮುಂತಾದವರು ತಿರುಗೇಟು ನೀಡಿದ್ದರು.
ಇವರ ಜೊತೆ ಅಮಿತ್ ಮಾಳವೀಯ ಅವರು ಕೂಡ ರಮ್ಯಾ ಅವರ ಕಾಲೆಳೆದಿದ್ದರು. ಇದಕ್ಕೆ ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಪ್ರತ್ಯುತ್ತರ ನೀಡಿದ್ದು, ಮತ್ತಷ್ಟು ವಾದವಿವಾದಗಳಿಗೆ ಆಹ್ವಾನ ನೀಡಿದ್ದಾರೆ. ರಮ್ಯಾ ಅವರ ಮೊದಲ ಟ್ವೀಟಿಗೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಕೂಡ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ರಮ್ಯಾ ಅವರ ಬಗ್ಗೆ ರಾಹುಲ್ ಏಕೆ ಮೌನ?
ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಘಟಕದ ಮುಖ್ಯಸ್ಥರಾಗಿರುವ ಅಮಿತ್ ಮಾಳವೀಯ ಅವರು, ಗುಜರಾತ್ ಚುನಾವಣೆಯಲ್ಲಿ ಪ್ರಧಾನಿಯನ್ನು 'ನೀಚ' ಎಂದಿದ್ದ ಮಣಿ ಶಂಕರ್ ಅಯ್ಯರ್ ಅವರನ್ನು ರಾಹುಲ್ ಗಾಂಧಿ ಅವರು ವಜಾ ಮಾಡಿದ್ದರು. ಆದರೆ, ಪ್ರಧಾನಿ ಬಗ್ಗೆ 'ಪಾಟ್' ಶಬ್ದ ಪ್ರಯೋಗ ಮಾಡಿದ ರಮ್ಯಾ ಅವರ ಬಗ್ಗೆ ಏಕೆ ಮೌನ? ರಾಹುಲ್ ಅವರು ಲೀಡರ್ ಆಗಿ ಬೆಳೆಯರು ಕಾರಣವಾಗಿರುವ ವ್ಯಕ್ತಿಯನ್ನು ಕೈಬಿಡಲು ಅವರಿಗೆ ಧೈರ್ಯ ಸಾಲುತ್ತಿಲ್ಲವಾ ಎಂದು ಕಾಲೆಳೆದಿದ್ದಾರೆ.

ಕಮಾನ್, ಕ್ರೀಡಾಸ್ಫೂರ್ತಿಯನ್ನು ಮೆರೆಯಿರಿ
ಇದಕ್ಕೆ ತಿರುಗೇಟು ನೀಡಿರುವ ರಮ್ಯಾ ಅವರು, ನಿಮ್ಮ ಈ ಟ್ವೀಟ್ ನಲ್ಲಿ ನನ್ನ ಟ್ವೀಟ್ ಹ್ಯಾಂಡಲ್ ಏಕೆ ಹಾಕಿಲ್ಲ? ನನ್ನ ಟೈಮ್ ಲೈನ್ ನಲ್ಲಿ ಮೇಲೆ ಪಿನ್ ಮಾಡಿ ಇಟ್ಟಿರುವ ನರೇಂದ್ರ ಮೋದಿಯ ವಿಡಿಯೋವನ್ನು ಟ್ವಿಟ್ಟಿಗರು ನೋಡುವುದು ನಿಮಗೆ ಬೇಕಾಗಿರಲಿಲ್ಲವೆ? ಕಮಾನ್, ಕ್ರೀಡಾಸ್ಫೂರ್ತಿಯನ್ನು ಮೆರೆಯಿರಿ. ಅಂದ ಹಾಗೆ, POT ಅಂದ್ರೆ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊ ಅಂತ ಅರ್ಥ. ನೀವೇನು ತಿಳಿದುಕೊಂಡಿದ್ದೀರಿ? ಎಂದು ವ್ಯಂಗ್ಯ, ಹಾಸ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.

ಸಂಸದ ರಾಜೀವ್ ಚಂದ್ರಶೇಖರ್ ಚಾಟಿ
ರಮ್ಯಾ ಅವರು ಮೊದಲಿಗೆ ಮಾಡಿದ್ದ ಟ್ವೀಟಿಗೆ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಅವರು ಕೂಡ ಚಾಟಿ ಬೀಸಿದ್ದು, ಮೂರ್ಖರನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ಅವರನ್ನು ಅವರ ಪಾಡಿಗೆ ಬಿಟ್ಟು ನಾವು ಮುನ್ನಡೆಯುತ್ತಿರಬೇಕು. ಈ ನಡುವೆ, ಕರ್ನಾಟಕದ ಬಗ್ಗೆ ಸಿದ್ದರಾಮಯ್ಯನವರಿಗೆ ಒಂದು ವಿಷನ್ ಇದೆ. ಅದೇನೆಂದರೆ, ಕರ್ನಾಟಕದ ಜನತೆ ಅವರಿಗೆ ಸದ್ಯದಲ್ಲಿಯೇ ಗುಡ್ ಬೈ ಹೇಳುವ ವಿಷನ್ ಎಂದು ವ್ಯಂಗ್ಯವಾಡಿದ್ದಾರೆ.

ಒಡೆದು ಆಳುವ ನೀತಿ ಕರ್ನಾಟಕದಲ್ಲಿಯೂ ಜಾರಿ
ಅದರ ಜೊತೆಗೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ, ಪ್ರಚಾರ ಮಾಡುತ್ತಿದ್ದ ಸಮಯದಲ್ಲಿ ಒಡೆದು ಆಳುವ ನೀತಿಯನ್ನು ಕರ್ನಾಟಕದಲ್ಲಿಯೂ ಕಾಂಗ್ರೆಸ್ ಜಾರಿಗೆ ತರಲಿದೆ ಎಂಬುದು ನನ್ನ ಭವಿಷ್ಯ. ಇನ್ನಷ್ಟು ಸುಳ್ಳುಗಳು, ಜಾತಿ ಮತ್ತು ಧರ್ಮದ ಇಬ್ಬಾಗ ಮಾಡುವುದು ಕಾಂಗ್ರೆಸ್ ನಿಂದ ಮುಂದುವರಿಯಲಿದೆ ಎಂದು ರಾಜೀವ್ ಚಂದ್ರಶೇಖರ್ ಅವರು ತಿರುಗೇಟು ನೀಡಿದ್ದಾರೆ.

ಮೂರ್ಖರಾಗಲು ಕಷ್ಟ ಪಡುತ್ತಿರಬೇಕು
ಗಾಯದ ಮೇಲೆ ಉಪ್ಪು ಸುರಿಯುವಂತೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿರುವ ಶಿಲ್ಪಾ ಗಣೇಶ್ ಅವರು, ನಾವು ಹುಟ್ಟಾ ಅಜ್ಞಾನಿಗಳು. ನಾವು ಮೂರ್ಖರಾಗಿಯೇ ಇರಬೇಕಾದರೆ ಸಾಕಷ್ಟು ಪ್ರಯತ್ನಶೀಲರಾಗಿರಬೇಕು. ಅವರು ಮೂರ್ಖರಾಗಿರಲು ಸಾಕಷ್ಟು ಪ್ರಯತ್ನ ಪಡುತ್ತಲೇ ಇದ್ದಾರೆ ಸರ್ ಎಂದಿದ್ದಾರೆ.












Click it and Unblock the Notifications