Karnataka Bandh: ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕದಾದ್ಯಂತ ಇಂದಿನ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ
ಬೆಂಗಳೂರು ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮತ್ತು ರೈತರು ಸೇರಿದಂತೆ ಹಲವಾರು ಸಂಘಟನೆಗಳು ಇಂದು ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯದೆಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆದರೂ ಕೆಲವೆಡೆ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ಎಂದಿನಂತೆ ಜನ ಜೀವನ ಆರಂಭವಾಗಿದ್ದು ಬಸ್ ಸಂಚಾರಿಸುತ್ತಿವೆ, ಶಾಲಾ-ಕಾಲೇಜುಗಳು, ಅಂಗಡಿಗಳನ್ನು ತೆರೆಯಲಾಗಿದೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಂಡ್ಯ, ಮೈಸೂರು, ಹಾಸನ, ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು ಇತರೆಡೆ ರಸ್ತೆಗಳಲ್ಲಿ ಉರುಳು ಸೇವೆ, ಪೊರಕೆ ಹಿಡಿದು ಪ್ರತಿಭಟನೆ, ಎಂಕೆ ಸ್ಟಾಲಿನ್ ಫೋಟೋಕ್ಕೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ ಇನ್ನೂ ಹಲವೆಡೆ ಪರಿಣಾಮಕಾರಿ ಬಂದ್ ಯಶಸ್ವಿಯಾಗಿಲ್ಲ. ಎಲ್ಲವೂ ಜನ ಜೀವನ ಸಹಜ ಸ್ಥಿತಿಯಲ್ಲಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಒಂದು ವಾರದಲ್ಲಿ ನಡೆಯುತ್ತಿರುವ ಎರಡನೇ ಬಂದ್ ಇದಾಗಿದೆ. ಮಂಗಳವಾರದ ಬೆಂಗಳೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಂದು ಕೂಡ ರಾಜ್ಯದಾದ್ಯಂತ ಸಾರ್ವಜನಿಕ ಸಾರಿಗೆ, ಹೋಟೆಲ್‌ಗಳು, ವಾಣಿಜ್ಯ ಸಂಸ್ಥೆಗಳು, ಹೆದ್ದಾರಿಗಳು ಮತ್ತು ರೈಲು ಸೇವೆಗಳನ್ನು ಮುಚ್ಚಲು ಪ್ರತಿಭಟನಾಕಾರರು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ಮುಂದಾಗಿದ್ದಾರೆ.
ಅದಾಗ್ಯೂ ಎಲ್ಲೆಡೆ ಕರ್ನಾಟಕ ಬಂದ್‌ಗೆ ಸ್ವಯಂ ಪ್ರೇರಿತವಾಗಿ ಜನರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಯಾಣಿಕರು ಇಲ್ಲದ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಬಹುತೇಕ ಕಡೆ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಬೆಂಗಳೂರಿನಲ್ಲಿ ಮಾಲ್‌ಗಳು, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿ ಬಹುತೇಕ ಬಸ್‌ಗಳು ಸಂಚರಿಸದೇ ನಿಲ್ದಾಣದಲ್ಲಿ ನಿಂತುಕೊಂಡಿವೆ. ಪ್ರಯಾಣಿಕರು ಸಹ ಪ್ರಯಾಣಿಸಲು ನಿಲ್ದಾಣಗಳ ಕಡೆಗೆ ಬರುತ್ತಿಲ್ಲ. ಇನ್ನೂ ಆಟೋ, ಕ್ಯಾಬ್, ವ್ಯಾಪಾರ ವೈಹಿವಾಟು ಸಂಪೂರ್ಣವಾಗಿ ಬಂದ್ ಆಗಿದೆ. ಈ ಮೂಲಕ ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸದೇ ಇರಲು ಹೆಚ್ಚಿನ ಪ್ರಯತ್ನ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇದಕ್ಕೆ ರಾಜ್ಯ ಸರ್ಕಾರದ ನಿಲುವನ್ನು ವಿವರಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, "ಪ್ರತಿಭಟನೆ ಮಾಡಲು ಬಯಸುವವರಿಗೆ ನಾವು ಅಡೆತಡೆಗಳನ್ನು ಸೃಷ್ಟಿಸುವುದಿಲ್ಲ, ಆದರೆ ಯಾರಿಗೂ ಬಲವಂತವಾಗಿ ಬಂದ್ ಮಾಡಲು ನಾವು ಬಿಡುವುದಿಲ್ಲ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಂದ ಸಾಕಷ್ಟು ತೀರ್ಪುಗಳಿವೆ. ಬಂದ್‌ಗಳನ್ನು ಹೇರಲಾಗುವುದಿಲ್ಲ." ಎಂದು ಹೇಳಿದರು.
ಕುತೂಹಲಕಾರಿಯಾಗಿ ಈ ವಾರದ ಆರಂಭದಲ್ಲಿ ಬೆಂಗಳೂರು ಬಂದ್‌ಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಬಂದ್ ಮತ್ತು ಪ್ರತಿಭಟನೆಗಳನ್ನು ಮೊಟಕುಗೊಳಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ತಮಿಳುನಾಡಿಗೆ 18 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತೆರಳಲು ಕರ್ನಾಟಕ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬಂದ್‌ಗಳಿಗೆ ಅನುಮತಿ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಆತಂಕದಲ್ಲಿದೆ.
ಮಂಗಳವಾರದ ಬೆಂಗಳೂರು ಬಂದ್‌ನಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು 1,000-ರೂ.1,500 ಕೋಟಿ ನಷ್ಟವಾಗಿದೆ. ಶುಕ್ರವಾರದ ಬಂದ್ ಆ ಅಂಕಿಅಂಶಗಳನ್ನು ಮಾತ್ರ ಸೇರಿಸುವ ನಿರೀಕ್ಷೆಯಿದೆ.
ಜನರನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಈ ಹಿಂದೆ ಹೇಳಿದ್ದಾರೆ. ಡಿಜಿಪಿ ಅಲೋಕ್ ಮೋಹನ್ ಕೂಡ ಎಚ್ಚರಿಕೆ ನೀಡಿದ್ದು, ಜನಜೀವನ ಅಸ್ತವ್ಯಸ್ತಗೊಳಿಸಲು ಯತ್ನಿಸುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಎಲ್ಲಾ ಎಸ್ಪಿ ಮತ್ತು ಡಿಸಿಪಿಗಳಿಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಅವರು ಸಾತ್ ನೀಡಿದ್ದಾರೆ.












Click it and Unblock the Notifications