ಸತತ ಸೋಲು ಕಂಡಿದ್ದ ನಾಯಕನಿಗೆ ಪರಿಷತ್ ಟಿಕೆಟ್ ಕೊಟ್ಟ ಜೆಡಿಎಸ್!
ಬೆಂಗಳೂರು, ಜೂನ್ 03; ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ನಾಯಕನಿಗೆ ಪರಿಷತ್ ಟಿಕೆಟ್ ನೀಡಲಾಗಿದ್ದು, ಜೂನ್ 11ರಂದು ಚುನಾವಣೆ ನಡೆಯಲಿದೆ.
ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 11ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಜನತಾದಳ (ಜಾತ್ಯತೀತ) ಪಕ್ಷದಿಂದ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಟಿ. ಎನ್. ಜವರಾಯಿ ಗೌಡ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಟಿ. ಎನ್. ಜವರಾಯಿ ಗೌಡ ಕ್ಷೇತ್ರದ ಪಕ್ಷದ ಮುಖಂಡ. ಅವರು ಹಲವು ವಿಧಾನಸಭೆ ಚುನಾವಣೆ ಎದುರಿಸಿದ್ದಾರೆ. 1 ಲಕ್ಷ ಮತಗಳನ್ನು ಪಡೆದರೂ ಸಹ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈಗ ಅವರನ್ನು ಪರಿಷತ್‌ಗೆ ಆಯ್ಕೆ ಮಾಡುವ ಮೂಲಕ ಜೆಡಿಎಸ್ ಪಕ್ಷ ಒಕ್ಕಲಿಗ ನಾಯಕನಿಗೆ ಮನ್ನಣೆ ನೀಡಿದೆ.

ಶಾಸಕರ ಬಲದ ಲೆಕ್ಕಾಚಾರ: ವಿಧಾನಸಭೆಯ ಶಾಸಕರು ಮತದಾನದ ಮೂಲಕ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ವಿಧಾನಸಭೆಯಲ್ಲಿ ಜೆಡಿಎಸ್‌ನ 19 ಶಾಸಕರು ಇದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಬಿಜೆಪಿಯ ಮೂವರು ಸದಸ್ಯರು ಆಯ್ಕೆಯಾದ ಬಳಿಕ ಉಳಿದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಾಗುತ್ತದೆ.
ಯಶವಂತಪುರ ಕ್ಷೇತ್ರದ ವಿಧಾನಸಭೆ ಚುನಾವಣೆ ಎಂದರೆ ಅದು ಟಿ. ಎನ್. ಜವರಾಯಿ ಗೌಡ ಮತ್ತು ಎಸ್. ಟಿ. ಸೋಮಶೇಖರ್ ನಡುವಿನ ಹೋರಾಟ. ಎಸ್. ಟಿ. ಸೋಮಶೇಖರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗಲೂ ಟಿ. ಎನ್. ಜವರಾಯಿ ಗೌಡ ಅವರಿಗೆ ಎದುರಾಳಿಯಾಗಿದ್ದರು. ಈಗ ಎಸ್. ಟಿ. ಸೋಮಶೇಖರ್ ಬಿಜೆಪಿಯಲ್ಲಿದ್ದು, ಕ್ಷೇತ್ರದ ಹಾಲಿ ಶಾಸಕರು.
2013, 2018ರ ವಿಧಾನಸಭೆ ಚುನಾವಣೆಯಲ್ಲಿ ಟಿ. ಎನ್. ಜವರಾಯಿ ಗೌಡ ಯಶವಂತಪುರದಲ್ಲಿ ಕಣಕ್ಕಿಳಿದು ಎಸ್. ಟಿ. ಸೋಮಶೇಖರ್ ವಿರುದ್ಧ ಸೋಲು ಕಂಡಿದ್ದರು. 2023ರ ಚುನಾವಣೆಯಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಕಣ್ಣೀರು ಹಾಕಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮನವೊಲಿಕೆ ಮಾಡಿ ಚುನಾವಣಾ ಕಣಕ್ಕಿಳಿಸಿದ್ದರು.
2013ರ ಚುನಾವಣೆಯಲ್ಲಿ ಟಿ. ಎನ್. ಜವರಾಯಿ ಗೌಡ 91,280 ಮತಗಳನ್ನು ಪಡೆದು ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಅವರು 104,562 ಮತಗಳನ್ನು ಪಡೆದು ಪುನಃ ಸೋಲು ಕಂಡರು. 2019ರ ಉಪ ಚುನಾವಣೆಯಲ್ಲಿಯೂ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಮಾಡಿತು, ಎಸ್. ಟಿ. ಸೋಮಶೇಖರ್‌ಗೆ ಪ್ರಬಲ ಪೈಪೋಟಿ ನೀಡಿದರೂ 27,699 ಮತಗಳಿಂದ ಸೋತರು.
2023ರ ಚುನಾವಣೆಯಲ್ಲಿ ಟಿ. ಎನ್. ಜವರಾಯಿ ಗೌಡ 154031 ಮತಗಳನ್ನು ಪಡೆದರು. ಆದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್. ಟಿ. ಸೋಮಶೇಖರ್ 169149 ಮತಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ವಿಧಾನ ಪರಿಷತ್ ಚುನಾವಣೆ ಘೋಷಣೆಯಾದಾಗಲೇ ಜೆಡಿಎಸ್ ಪಕ್ಷದಿಂದ ಟಿ. ಎನ್. ಜವರಾಯಿ ಗೌಡ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸೋಮವಾರ ಟಿ. ಎನ್. ಜವರಾಯಿ ಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೂನ್ 13ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಸೋಮವಾರ ಕೊನೆಯ ದಿನವಾಗಿತ್ತು. ನಾಮಪತ್ರ ವಾಪಸ್ ಪಡೆಯಲು ಜೂನ್ 6 ಕೊನೆಯ ದಿನವಾಗಿದೆ. ಟಿ. ಎನ್. ಜವರಾಯಿ ಗೌಡ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ.












Click it and Unblock the Notifications