ಸಿಎಂ ಬದಲಾವಣೆಗೆ ಟೈಮ್ ಬಂದೇ ಬಿಡ್ತು: ಸಿದ್ದರಾಮಯ್ಯ ಚೇಂಜ್ ಮಾಡಿದ್ರು ಕಷ್ಟ, ಡಿಕೆಶಿಯನ್ನು ಸಿಎಂ ಮಾಡಿದ್ರು ಕಷ್ಟ?
ಬೆಂಗಳೂರು, ಜೂನ್ 10: ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡು ವರ್ಷ ಪೂರೈಸಿದೆ. ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಕುರಿತು ಗುಸು ಗುಸು ಚರ್ಚೆ ನಡೆಯುತ್ತಿದ್ದು, ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನಲೆಗೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರ್ಕಾರ ರಚನೆಯ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಲೆಕ್ಕಾಚಾರವಾಗಿತ್ತು ಎಂದು ಈ ಹಿಂದೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದು, ಎರಡುವರೆ ವರ್ಷದ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಯುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಆದರೆ, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿದೆ. ಅದನ್ನು ಈಗ ಬಹಿರಂಗಪಡಿಸಲಾಗದು ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಕುರಿತು ವದಂತಿಗಳಿಗೆ ಮತ್ತೆ ಇಂಬು ನೀಡಿದ್ರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಸಿದ್ದರಾಮಯ್ಯ ಅವರು ಸಿಎಂ ಪಟ್ಟವನ್ನ ಅಲಂಕರಿಸಿ ಎರಡು ವರ್ಷ ಪೂರೈಸಿದೆ. ಅಧಿಕಾರ ಹಂಚಿಕೆ ಸೂತ್ರದ ಕುರಿತು ಡಿ ಕೆ ಶಿವಕುಮಾರ್ ಹೇಳಿದಂತೆ ಸಿಎಂ ಪಟ್ಟಕ್ಕಾಗಿ ಮತ್ತೆ ಕೈ ಪಾಳಯದಲ್ಲಿ ಗದ್ದಲಗಳು ಶುರುವಾಗಲಿದೆ ಎನ್ನಲಾಗಿದೆ.

ಈಗಾಗಲೇ ಸಿಎಂ ಪಟ್ಟಕ್ಕಾಗಿ ಆರಂಭಿದ ಹಂತದಿಂದಲೂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಆಂತರಿಕ ಬಿಕ್ಕಟ್ಟು ಹೆಚ್ಚಾಗಿದೆ. ಇದು ಸರ್ಕಾರದ ಸ್ಥಿರತೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆ ಪ್ರಶ್ನೆಯಾಗಿದೆ. ಕೈ ಪಾಳಯದಲ್ಲಿ ಮೊದಲಿನಿಂದಲೂ ಈ ಸಂಘರ್ಷಕ್ಕೆ ಮೂಲ ಕಾರಣವೇ ಸಿಎಂ ಬದಲಾವಣೆ. 2023 ರ ಮೇ ತಿಂಗಳಲ್ಲಿ ಹೈಕಮಾಂಡ್ ನಿರ್ಧಾರದಿಂದ ಮುಖ್ಯಮಂತ್ರಿ ಸ್ಥಾನವನ್ನ ಸಿದ್ದರಾಮಯ್ಯ ಅವರು ವಹಿಸಿಕೊಂಡರು ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಅಲಿಖಿತ ಒಪ್ಪಂದ ಆಗಿದೆ ಎಂದು ಕೈ ಪಾಳಯದಲ್ಲಿ ಚರ್ಚೆಯಾಗಿದೆ. ಈ ಒಪ್ಪಂದ ನಿಜ ಆಗಿದ್ದಲ್ಲಿ ಮುಂಬರುವ ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ನಡೆಯಬೇಕಿದೆ.
ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ ಹಾಗೂ ಹೈಕಮಾಂಡ್ ನಾಯಕರ ಭೇಟಿಗೆ ಡಿ ಕೆ ಶಿವಕುಮಾರ್ ತೆರಳಿದ ಸಂದರ್ಭದಲ್ಲೂ ಈ ವಿಚಾರವಾಗಿ ಚರ್ಚೆಯಾಗದ ಹಿನ್ನೆಲೆ ಡಿಕೆ ಶಿವಕುಮಾರ್ ಅವರನ್ನು ಕೆರಳಿಸುವಂತೆ ಮಾಡಿದೆ. ಎರಡೂವರೆ ವರ್ಷಗಳ ಕಾಲ ಮುಗಿತಾ ಬರುತ್ತಿದ್ದಂತೆ ಹೈಕಮಾಂಡ್ ನಾಯಕರ ಗಮನಕ್ಕೆ ಡಿ ಕೆ ಶಿವಕುಮಾರ್ ತರುತ್ತಿದ್ದಾರೆ. ಸಿಎಂ ಪಟ್ಟದ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಪರವಾಗಿ ಹಲವು ಶಾಸಕರು ಧ್ವನಿ ಎತ್ತಿದ್ರೆ, ಇನ್ನು ಸಿದ್ದರಾಮಯ್ಯ ಅವರ ಬಣದವರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳುತ್ತಿದ್ದಾರೆ. ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಮುಂದಿನ ನವೆಂಬರ್‌ಗೆ ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ತುಂಬಲಿದೆ. ಅಧಿಕಾರ ಹಸ್ತಾಂತರ ನಡೆಯುತ್ತೆ ಅಂತ ಡಿಕೆ ಶಿವಕುಮಾರ್ ಹೈಕಮಾಂಡ್ ನತ್ತ ನೋಡುತ್ತಿದ್ದಾರೆ. ಆದರೆ, ಹೈಕಮಾಂಡ್ ಮಾತ್ರ ಈ ಬಗ್ಗೆ ಯಾವುದೇ ಚರ್ಚೆಯನ್ನ ಮಾಡುತ್ತಿಲ್ಲ. ಹೀಗಾಗಿ ಪಕ್ಷದಲ್ಲಿ ಏನು ಆಗುತ್ತೆ ಅನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಿ ಡಿಕೆ ಶಿವಕುಮಾರ್ ಸಿಎಂ ಪಟ್ಟ ಕಟ್ಟಿದ್ರೆ, ಇತ್ತ ಸಿದ್ದರಾಮಯ್ಯ ಅವರ ಬಣ ಬಂಡಾಯ ಏಳುತ್ತೆ, ಡಿಕೆ ಶಿಯನ್ನು ಸಿಎಂ ಮಾಡದೇ ಇದ್ರೆ ಇವರ ಬೆಂಬಲಿಗರು ಸುಮ್ಮನಿರಲ್ಲ.
ಇತ್ತ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಅನಿವಾರ್ಯ. ಹೈಕಮಾಂಡ್ ಯಾರನ್ನೆ ಕಡೆಗಣಿಸಿದ್ರು. ಅದು ಪಕ್ಷಕ್ಕೆ ಸಮಸ್ಯೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯದ ಹಿಡಿತ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದರೆ, ಇತ್ತ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ನಿಧಿ ಸಂಗ್ರಹಣೆ ಸಾಮರ್ಥ್ಯ ಮತ್ತು ಪಕ್ಷ ಸಂಘಟನೆಯಲ್ಲಿ ಚತುರರಾಗಿದ್ದಾರೆ.
ಎರಡು ವರ್ಷಗಳ ಸೈಲೆಂಟ್ ಆಗಿದ್ದ ಡಿ ಕೆ ಶಿವಕುಮಾರ್ ಎರಡೂವರೆ ವರ್ಷ ಆದ ನಂತರ ಸುಮ್ಮನೆ ಕೂರಲ್ಲ ಅನ್ನುವುದು ಪಕ್ಷದೊಳಗಿನ ಆತಂಕವಾಗಿದೆ. ಒಟ್ಟಿನಲ್ಲಿ ಸಿಎಂ ಬದಲಾವಣೆ ಈಗ ಕಾಂಗ್ರೆಸ್ ಪಕ್ಷಕ್ಕೆ, ಹೈಕಮಾಂಡ್‌ಗೆ ದೊಡ್ಡ ಇಕ್ಕಟ್ಟು ತಂದಿಟ್ಟಿದೆ. ಸಿದ್ದರಾಮಯ್ಯರನ್ನು ಬದಲಾವಣೆ ಮಾಡಿದ್ರು ಕಷ್ಟ, ಡಿಕೆ ಶಿವಕುಮಾರ್ ಅವರನ್ನ ಸಿಎಂ ಮಾಡಿದ್ರು ಕಷ್ಟ ಎಂಬಂತಾಗಿದೆ. ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಇರುವಷ್ಟು ಶಾಸಕರ ಬೆಂಬಲ ಡಿ ಕೆ ಶಿವಕುಮಾರ್‌ಗೆ ಇಲ್ಲ. ಹೀಗಾಗಿ, ಹೈಕಮಾಂಡ್ ನಾಯಕರ ಮಟ್ಟದಲ್ಲಿ ಏನೇ ನಡೆದ್ರು ಪಕ್ಷಕ್ಕೆ ಡ್ಯಾಮೇಜ್ ಕಟ್ಟಿಟ್ಟ ಬುತ್ತಿ.
ರಾಜ್ಯ ರಾಜಕೀಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಜೊತೆಗೆ ಹೈಕಮಾಂಡ್ ನಾಯಕರು ಚರ್ಚೆ ನಡೆಸಲಾಗಿದ್ದಾರೆ. ಈ ಹಿಂದೆ ಸರ್ಕಾರ ರಚನೆಯ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆದಿತ್ತು. ಹೀಗಾಗಿ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಧಿಕಾರ ಹಂಚಿಕೆ ಪ್ರಚಾರ ಸಿಎಂ ಪಟ್ಟವನ್ನ ಡಿ ಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಅವರು ಬಿಟ್ಟುಕೊಡ್ತಾರಾ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.












Click it and Unblock the Notifications