Liquor Sale Ban: ನವೆಂಬರ್ 11ರಿಂದ ಮದ್ಯ ಮಾರಾಟ ನಿಷೇಧ
ಬೆಂಗಳೂರು, ನವೆಂಬರ್ 05: ಕರ್ನಾಟಕದಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಲಿದ್ದಾರೆ. ನವೆಂಬರ್ 13ರಂದು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಚುನಾವಣಾ ಕಣ ಈಗಾಗಲೇ ಅಂತಿಮವಾಗಿದ್ದು, ಪ್ರಚಾರ ಬಿರುಸಿನಿಂದ ಸಾಗಿದೆ.
ಲೋಕಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಬಳ್ಳಾರಿ ಜಿಲ್ಲೆಯ ಸಂಡೂರು, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನವೆಂಬರ್ 13ರಂದು ನಡೆಯಲಿದೆ. ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಈಗಾಗಲೇ ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ ಅಂತಿಮಗೊಂಡಿದೆ. ಉಪ ಚುನಾವಣೆ ಕಣದಲ್ಲಿ ಒಟ್ಟು 45 ಅಭ್ಯರ್ಥಿಗಳಿದ್ದಾರೆ. ನವೆಂಬರ್ 13ರಂದು ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಲಿದ್ದಾರೆ.
ಮದ್ಯ ಮಾರಾಟ ನಿಷೇಧ: ಮದ್ಯ ಮಾರಾಟ ನಿಷೇಧ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮಾತ್ರ ಅನ್ವಯವಾಗುತ್ತದೆ. ಸಂಡೂರು ವಿಧಾನಸಭೆ ಉಪ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶವನ್ನು ಹೊರಡಿಸಿ, ಮದ್ಯ ಮಾರಾಟ ನಿಷೇಧಿಸಿದ್ದಾರೆ.
ಸಂಡೂರು ವಿಧಾನಸಭೆ ಉಪ ಚುನಾವಣೆಯ ಅಂಗವಾಗಿ ನವೆಂಬರ್ 13ರಂದು ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ, 1951ರ ಕಲಂ 135-ಸಿ ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ) ನಿಯಮಗಳು, 1967ರ ನಿಯಮ 10-ಬಿ ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಹಾಗೂ ಈ ಕ್ಷೇತ್ರಕ್ಕೆ ಹೊಂದಿಕೊಂಡ ಕಂಪ್ಲಿ, ಕುರುಗೋಡು ಮತ್ತು ಬಳ್ಳಾರಿ ತಾಲ್ಲೂಕಗಳ 5 ಕಿ. ಮೀ. ವ್ಯಾಪ್ತಿಯಲ್ಲಿ ನವೆಂಬರ್ 11ರ ಸಂಜೆ 6 ಗಂಟೆಯಿಂದ ನವೆಂಬರ್ 14ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮೂರು ಕ್ಷೇತ್ರಗಳ ಪೈಕಿ ಶಿಗ್ಗಾವಿಯಲ್ಲಿ 8, ಸಂಡೂರು ಕ್ಷೇತ್ರದಲ್ಲಿ 6 ಮತ್ತು ಚನ್ನಪಟ್ಟಣದ ಚುನಾವಣಾ ಕಣದಲ್ಲಿ ಅತಿ ಹೆಚ್ಚು ಎಂದರೆ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 13ರಂದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರವನ್ನು ಸೇರಲಿದೆ.
ಮದ್ಯ ಮಾರಾಟ ನಿಷೇಧ ಮತದಾನ ನಡೆಯುವ ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಮತ್ತು ಅಕ್ಕಪಕ್ಕದ ತಾಲೂಕುಗಳಿಗೆ ಅನ್ವಯವಾಗುತ್ತದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದ್ದು, ಆಗ ಸಹ ಪುನಃ ಮದ್ಯ ಮಾರಾಟ, ಸಂಗ್ರಹ, ಸಾಗಾಟವನ್ನು ನಿಷೇಧಿಸಲಾಗುತ್ತದೆ.
ಮೂರು ಕ್ಷೇತ್ರಗಳ ಉಪ ಚುನಾವಣೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ ಚುನಾವಣೆಯಲ್ಲಿ ಪ್ರತಿಷ್ಠೆ ಅಡಗಿದೆ. ಅಧಿಕಾರದಲ್ಲಿರುವ ಪಕ್ಷ ಉಪ ಚುನಾವಣೆ ಗೆದ್ದು, ಜನರ ನಮ್ಮ ಪರ ಎಂದು ಸಾಬೀತು ಮಾಡಬೇಕಿದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರತಿಷ್ಠೆ ಅಡಗಿದೆ. ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದು, ಎರಡು ಚುನಾವಣೆಯಲ್ಲಿ ಸೋತಿರುವ ಅವರು 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.












Click it and Unblock the Notifications