ಅನ್ಯ ಕೋಮಿನವರೊಂದಿಗೆ ಕಂಡರೆ ಏಟು: ಯುವತಿಯರಿಗೆ ಬೆದರಿಕೆ ಸಂದೇಶ
ಚಿಕ್ಕಮಗಳೂರು, ಜನವರಿ 09: ನೈತಿಕ ಪೊಲೀಸ್‌ಗಿರಿಗೆ ಚಿಕ್ಕಮಗಳೂರಿನಲ್ಲಿ ಯುವತಿಯೋರ್ವಳು ಬಲಿಯಾದ ನಂತರ ಇಂತಹಾ ಚಟುವಟಿಕೆಗಳನ್ನು ಹತ್ತಿಕ್ಕುತ್ತೇವೆ ಎಂದು ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರು ಗುಡುಗಿದ್ದಾರೆ ಆದರೆ ಘಟನೆ ನಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಯುವತಿಯರನ್ನು ಬೆದರಿಸುವ ವಾಟ್ಸ್‌ಆಪ್ ಸಂದೇಶಗಳು ಹರಿದಾಡುತ್ತಿವೆ.
ಮೊನ್ನೆಯಷ್ಟೆ ಹಿಂದೂ ಸಂಘಟನೆಯ ಸದಸ್ಯರ ನೈತಿಕ ಪೊಲೀಸ್‌ಗಿರಿಗೆ ಯುವತಿ ಧನ್ಯಶ್ರೀ ಜೀವ ತೆತ್ತಿದ್ದಾಳೆ, ಈ ಪ್ರಕರಣ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿ, ಐವರ ಮೇಲೆ ಕೇಸು ದಾಖಲಿಸಿದ್ದಾರೆ ಆದರೂ ಬುದ್ಧಿ ಕಲಿಯದ ಕೆಲವರು ಹಿಂದೂ ಯುವತಿಯರಿಗೆ ಬೆದರಿಕೆ ಒಡ್ಡುವ ಸಂದೇಶಗಳನ್ನು ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ, ಫೇಸ್‌ಬುಕ್‌ನಲ್ಲಿ ಹರಿಬಿಡುತಿದ್ದಾರೆ.
'ಹಿಂದೂ ಯುವತಿಯರು ಅನ್ಯ ಕೋಮಿನವರೊಂದಿಗೆ ಕಾಣಿಸಿಕೊಂಡರೆ ಹೊಡೆಯುತ್ತೇವೆ ಎಂಬ ಅರ್ಥವುಳ್ಳ ಈ ಸಂದೇಶ, ಕರಾವಳಿಯ ಹಲವು ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ, ಮೆಸೆಜ್ ಕೊನೆಯಲ್ಲಿ 'ಮೂಡಿಗೆರೆ ಭಜರಂಗದಳ' ಎಂಬ ಹೆಸರಿದೆ.

ವಾಟ್ಸ್‌ಆಪ್ ನಲ್ಲಿ ಹರಿದಾಡುತ್ತಿರುವ ಬೆದರಿಕೆ ಮೆಸೆಜ್ ಇಂತಿದೆ 'ಮೂಡಿಗೆರೆ ನಗರದ ಆಸುಪಾಸಿನ ಎಲ್ಲಾ ಹುಡುಗಿಯರಿಗೆ ಕೊನೆ ಎಚ್ಚರಿಕೆ, ನಮ್ಮ ಸಹಪಾಠಿ ಎಂಬ ಕಾರಣಕ್ಕೆ ಅನ್ಯ ಕೋಮಿನ ಯುವಕನೊಂದಿಗೆ ಚಕ್ಕಂದ ಆಡುವುದು ಕಂಡು ಬಂದರೆ ಅಲ್ಲೇ ಧರ್ಮದೇಟು ಗ್ಯಾರೆಂಟಿ, ನಿಮ್ಮ ಕಾರಣ ನೂರಿರಬಹುದು ಅದರ ಅವಶ್ಯಕತೆ ನಮಗಿಲ್ಲ, ನಮಗೆ ಹಿಂದೂ ಧರ್ಮ ಮುಖ್ಯ, ಅದನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ, #ಧರ್ಮೋ ರಕ್ಷತಿ ರಕ್ಷಿತಃ, *ಮೂಡಿಗೆರೆ ಬಜರಂಗ ದಳ'.
ಈ ರೀತಿಯ ಬೆದರಿಕೆ ಸಂದೇಶ ಮೂಡಿಗೆರೆ ಸೇರಿದಂತೆ ಕರಾವಳಿಯ ಬಹುತೇಕ ನಗರಗಳ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಚಿಕ್ಕಮಗಳೂರಿನ ಅಣ್ಣಾಮಲೈ ಅವರು ಈ ರೀತಿಯ ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದು, ನೈತಿಕ ಪೊಲೀಸ್‌ಗಿರಿ ಗೂಂಡಾಗಳ ಮೇಲೆ ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications