ಪಿತೂರಿ ಮಾಡಿದ್ದು ಆ ಮೂವರು, ಮತ್ತೆ ಸಚಿವ ಆಗ್ತೀನಿ: ಕೆ.ಎನ್.ರಾಜಣ್ಣ ಹೊಸ ಬಾಂಬ್
ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ ಹಾಗೂ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಕೆಲ ದಿನಗಳ ಹಿಂದೆ ಸಚಿವ ಸಂಪುಟದಿಂದಲೇ ಕೈಬಿಡಲಾಯಿತು. ಹೈಕಮಾಂಡ್ ನಿರ್ಧಾರದಿಂದಾಗಿ ರಾಜಣ್ಣ ಅವರ ಮೇಲೆ ಕ್ರಮ ತೆಗೆದುಕೊಂಡಿರುವುದಾಗಿ ಹೇಳಲಾಗಿತ್ತು. ರಾಜಣ್ಣ ಅವರು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಹೊಸ ಬಾಂಬ್ ಸಿಡಿಸಿರುವ ರಾಜಣ್ಣ 'ತಮ್ಮನ್ನ ಸಚಿವ ಸ್ಥಾನದಿಂದ ಕೆಳಗಿಳಿಸಲು ಆ ಮೂವರ ಪಿತೂರಿ ಇದೆ' ಎಂದಿದ್ದಾರೆ.
'ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನ ಮುಗಿಯಲಿ, ಬಳಿಕ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ. ಎಲ್ಲ ವಿಚಾರವನ್ನು ಅವರಿಗೆ ತಿಳಿಸುತ್ತೇನೆ. ಸೂಕ್ತ ಸಮಯ ಬಂದಾಗ ಸಚಿವ ಸ್ಥಾನವನ್ನು ಮತ್ತೆ ಪಡೆದುಕೊಳ್ಳುತ್ತೇನೆ. ಕಾಂಗ್ರೆಸ್ ಸರ್ಕಾರದ ಇದೇ ಅವಧಿಯಲ್ಲಿ ಮತ್ತೆ ಸಚಿವನಾಗುತ್ತೇನೆ. ಹೈಕಮಾಂಡ್ ಅನ್ನ ನಾನೇ ಒಪ್ಪಿಸುತ್ತೇನೆ. ದೆಹಲಿಗೆ ಹೋಗಿ ಬಂದು ಗುಡ್‌ನ್ಯೂಸ್ ಕೊಡ್ತೀನಿ' ಎಂದು ರಾಜಣ್ಣ ಹೇಳಿದ್ದಾರೆ.

'ನಾನು ಎಂದಿಗೂ ಸ್ವಾರ್ಥಕ್ಕಾಗಿ ಸುಳ್ಳು ಹೇಳಿಲ್ಲ. ಈ ಹಿಂದೆ ಉಪಮುಖ್ಯಮಂತ್ರಿಗಳ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಾನು ಸಾಕಷ್ಟು ಬಾರಿ ಹೇಳಿಕೆ ಕೊಟ್ಟಿದ್ದೆ. ಇದೆಲ್ಲವನ್ನೂ ಅವರು ದೆಹಲಿಗೆ ತಲುಪಿಸಿದ್ದಾರೆ. ಹಾಗಾಗಿ ನಾನು ಏನನ್ನೂ ಮುಚ್ಚಿಡುವುದಿಲ್ಲ. ಪಕ್ಷದೊಳಗಿನ ವಿಚಾರವನ್ನ ಸಾರ್ವಜನಿಕವಾಗಿ ಮಾತನಾಡಬಾರದು, ಆದರೆ ಪರಿಸ್ಥಿತಿಯು ಸತ್ಯವನ್ನ ಕಹಿ ಮಾಡುತ್ತೆ' ಎಂದಿದ್ದಾರೆ.
'ನನಗೂ ಪಿತೂರಿ ಗೊತ್ತಿದೆ'
'ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿರುವ ಅವರು ಪಿತೂರಿ ಮಾಡುವುದು ನನಗೂ ಬರುತ್ತೆ. ಪಿತೂರಿ ವಿದ್ಯೆ ನನಗೆ ಬರಲ್ಲ ಅಂತ ಅಂದುಕೊಳ್ಳಬೇಡಿ. ನನ್ನನ್ನು ಸಚಿವ ಸ್ಥಾನದಿಂದ ಇಳಿಸಲು ಮೂರು ಜನ ದೆಹಲಿಯಲ್ಲಿ ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದಾರೆ. ನನಗೂ ಪಿತೂರಿ ವಿದ್ಯೆ ತಿಳಿದಿದೆ. ಆದರೆ ಈ ಸಮಯದಲ್ಲಿ ನಾನು ಅದನ್ನ ಬಳಸಲ್ಲ. ಮುಂದೆ ಅದಕ್ಕೂ ಕಾಲ ಬರುತ್ತೆ' ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
'ಈಗ ನನ್ನ ಸಚಿವ ಸ್ಥಾನ ಹೋಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ದೂಷಿಸುವುದು ಸರಿ ಅಲ್ಲ. ನಾನು ಅಧಿಕಾರ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ, ಅದನ್ನು ಮುಂದೆ ಹೇಳುತ್ತೇನೆ. ಈ ಹಿಂದೆ ದೇವರಾಜ ಅರಸು ಹಾಗೂ ವೀರಪ್ಪ ಮೊಯ್ಲಿ ಅವರಂತಹ ಮಹಾನ್ ನಾಯಕರನ್ನೂ ಅಧಿಕಾರದಿಂದ ಕೆಳಗೆ ಇಳಿಸಿದ್ದರು. ಅದರ ಮುಂದೆ ನನ್ನ ಅಧಿಕಾರವೇನು ದೊಡ್ಡದಲ್ಲ ಎಂದೂ ರಾಜಣ್ಣ ಹೇಳಿದ್ದಾರೆ. ದೇವರಾಜ ಅರಸು ಬಡವರ ಪರವಾದ ಆಡಳಿತ ನೀಡಿದ್ದರು. ಅವರನ್ನೇ ಅಧಿಕಾರದಿಂದ ವಜಾ ಮಾಡಿದ್ದರು. ವೀರಪ್ಪ ಮೊಯ್ಲಿ ಅವರು ಬಡವರ ಮಕ್ಕಳಿಗೆ ಅನುಕೂಲ ಆಗಬೇಕು ಎಂದು ಸಿಇಟಿ ಜಾರಿಗೆ ತಂದರು. ಅವರನ್ನೂ ಅಧಿಕಾರದಿಂದ ಕೆಳಗೆ ಇಳಿಸಿದ್ರು' ಎಂದಿದ್ದಾರೆ.

'ರಾಹುಲ್ ಗಾಂಧಿ ಅವರು ಮತಗಳ್ಳನತದ ಬಗ್ಗೆ ಗಂಭೀರ ಆರೋಪ ಮಾಡಿ ಹೋರಾಟಕ್ಕೆ ಕರೆ ನೀಡಿದ್ದರು. ಆದರೆ ತಮ್ಮದೇ ಪಕ್ಷದ ಬಗ್ಗೆ ಕೆಎನ್ ರಾಜಣ್ಣ ಅವರು ಟೀಕಿಸಿದ್ದರು. ಮತಪಟ್ಟಿ ಸಿದ್ಧಪಡಿಸಿದ್ದೇ ನಮ್ಮ ಅವಧಿಯಲ್ಲಿ, ಈಗ ಇದೆಲ್ಲ ಮಾಡಬೇಕಾ? ಎಂದಿದ್ದರು. ಸ್ವಪಕ್ಷದ ವಿರುದ್ಧ ರಾಜಣ್ಣ ಅವರು ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಹೈಕಮಾಂಡ್ ಗರಂ ಆಗಿ ಈ ಕ್ರಮ ಜರುಗಿಸಿದೆ.












Click it and Unblock the Notifications