Vande Bharat; ಕರ್ನಾಟಕಕ್ಕೆ ಸೆ.24 ರಿಂದ ಮತ್ತೊಂದು ರೈಲು
ಬೆಂಗಳೂರು, ಸೆಪ್ಟೆಂಬರ್ 21; ಕರ್ನಾಟಕಕ್ಕೆ ಮತ್ತೊಂದು ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸಿಕ್ಕಿದೆ. ರಾಜ್ಯದಲ್ಲಿ ಈಗಾಗಲೇ ಎರಡು ವಂದೇ ಭಾರತ್ ರೈಲುಗಳು ಓಡುತ್ತಿವೆ. ಸೆಪ್ಟೆಂಬರ್ 24ರಿಂದ ರಾಜ್ಯದ 3ನೇ ರೈಲು ಬೆಂಗಳೂರಿನಿಂದ ಸಂಚಾರ ಆರಂಭಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 24ರಂದು ಒಟ್ಟು 9 ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇವುಗಳಲ್ಲಿ ಹೊಸ ಮಾದರಿಯ ಕೇಸರಿ ಬಣ್ಣದ ವಂದೇ ಭಾರತ್ ರೈಲುಗಳು ಸಹ ಸೇರಿವೆ. ಇದೇ ಮೊದಲ ಬಾರಿಗೆ ಇಷ್ಟು ವಂದೇ ಭಾರತ್ ರೈಲುಗಳು ಒಟ್ಟಿಗೆ ಸಂಚಾರ ಆರಂಭಿಸುತ್ತಿವೆ.

ಸೆಪ್ಟೆಂಬರ್ 24ರ ಭಾನುವಾರ ಐಟಿ ಕ್ಷೇತ್ರದ ಹಬ್ ಆಗಿರುವ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ವಂದೇ ಭಾರತ್ ರೈಲು ಸೇವೆಗೆ ಚಾಲನೆ ಸಿಗಲಿದೆ. ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಾಗುತ್ತದೆ.
ಕರ್ನಾಟಕದಲ್ಲಿ 2022ರ ನವೆಂಬರ್‌ನಲ್ಲಿ ಮೈಸೂರು-ಚೆನ್ನೈ ವಯಾ ಬೆಂಗಳೂರು ನಡುವೆ ಮೊದಲ ವಂದೇ ಭಾರತ್ ರೈಲು ಆರಂಭವಾಯಿತು. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ 2ನೇ ವಂದೇ ಭಾರತ್ ರೈಲು 2023ರಲ್ಲಿ ಆರಂಭವಾಯಿತು. ಈಗ ಯಶವಂತಪುರ-ಕಾಚಿಗುಡ ರೈಲು ರಾಜ್ಯದ 3ನೇ ವಂದೇ ಭಾರತ್ ರೈಲು ಆಗಲಿದೆ.
ಕರ್ನಾಟಕಕ್ಕೆ ಉಪಯೋಗ ಕಡಿಮೆ; ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ವಂದೇ ಭಾರತ್ ರೈಲು ಓಡಿಸಲಿದೆ. ಈ ರೈಲು ಸುಮಾರು 7 ಗಂಟೆ ಅವಧಿಯಲ್ಲಿ ಬೆಂಗಳೂರು ಮತ್ತು ಹೈದರಬಾದ್ ನಡುವಿನ 610 ಕಿ. ಮೀ. ಮಾರ್ಗವನ್ನು ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.
ಯಶವಂತಪುರದಿಂದ ಹೊರಡುವ ರೈಲು ಧರ್ಮಾವರಂ, ದೋನ್, ಕರ್ನೂಲ್ ನಗರ, ಗಡ್ಜಾಲ ಜಂಕ್ಷನ್, ಮೆಹಬೂಬ್ ನಗರ, ಶಾದ್ ನಗರ ಮೂಲಕ ಕಾಚಿಗುಡ ತಲುಪಲಿದೆ. ಆದರೆ ಈ ರೈಲು ಕರ್ನಾಟಕದಲ್ಲಿ ಸುಮಾರು 80-85 ಕಿ. ಮೀ. ಮಾತ್ರ ಸಂಚಾರ ನಡೆಸಲಿದೆ. ಆದ್ದರಿಂದ ಈ ರೈಲಿನಿಂದ ರಾಜ್ಯಕ್ಕೆ ಉಪಯೋಗ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ.
ಯಶವಂತಪುರ ದಾಟಿದ ಬಳಿಕ ಬರುವ ಹಿಂದೂಪುರ ರೈಲು ನಿಲ್ದಾಣ ಆಂಧ್ರ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಈ ರೈಲು ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರ ನಡೆಸುವ ಐಟಿ ಉದ್ಯೋಗಿಗಳಿಗೆ ಮಾತ್ರ ಹೆಚ್ಚು ನೆರವಾಗಲಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.
ಈ ವಂದೇ ಭಾರತ್ ರೈಲು ಗುಂತಕಲ್ಲು, ರಾಯಚೂರು ಮೂಲಕ ಸಂಚಾರ ನಡೆಸಿದ್ದರೆ ಕರ್ನಾಟಕದ ರಾಯಚೂರು ಜಿಲ್ಲೆ, ಮಂತ್ರಾಲಯಕ್ಕೆ ತೆರಳುವವರಿಗೆ, ಸೇಡಂ ಬಳಿಯ ಸಿಮೆಂಟ್ ಕೈಗಾರಿಕೆ ಭಾಗದವರಿಗೆ, ಯಾದಗಿರಿ ಜಿಲ್ಲೆಗೆ ಉಪಯೋಗವಾಗುತ್ತಿತ್ತು ಎಂಬ ಬೇಡಿಕೆ ಇದೆ.
ಯಶವಂತಪುರ-ಕಾಚಿಗುಡ ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಗುರುವಾರ ಆರಂಭವಾಗುತ್ತಿದೆ. ಮಧ್ಯಾಹ್ನ 2.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾಚಿಗುಡಕ್ಕೆ ಸಂಚಾರ ನಡೆಸಲಿದೆ. ಮಧ್ಯಾಹ್ನ 2 ಗಂಟೆಗೆಯಶವಂತಪುರಕ್ಕೆ ರೈಲು ಆಗಮಿಸಲಿದೆ.
ಈ ರೈಲಿನ ಅಧಿಕೃತ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಇನ್ನೂ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳ ಮಾಹಿತಿಯಂತೆ ಕಾಚಿಗುಡದಿಂದ ಬೆಳಗ್ಗೆ ಹೊರಡುವ ರೈಲು ಮಧ್ಯಾಹ್ನ 1 ಗಂಟೆ ಸುಮಾರಿಗೆ ಯಶವಂತಪುರಕ್ಕೆ ಬರಬಹುದು. ಮಧ್ಯಾಹ್ನ ಇಲ್ಲಿಂದ ಹೊರಟು, ರಾತ್ರಿ ಕಾಚಿಗುಡ ತಲುಪಲಿದೆ.
ಬೆಂಗಳೂರು-ಹೈದರಾಬಾದ್ ನಡವಿನ ಮಾರ್ಗದಲ್ಲಿ ಕಾಚಿಗುಡ ಮತ್ತು ದೋನ್ ನಡುವೆ ಈಗಾಗಲೇ ಪ್ರಾಯೋಗಿಕ ಸಂಚಾರ ನಡೆದಿದೆ. ಇಂದಿನಿಂದ ಸಂಪೂರ್ಣ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿವಾಗಿ ಸಂಚಾರ ನಡೆಸುತ್ತಿದೆ.












Click it and Unblock the Notifications