ನಾನು ಹಿಂದುವಲ್ಲ ಎಂದವರು ಈಗ ಚುನಾವಣೆ ಬಂದಾಗ ನಾಮ ಹಾಕಿ, ಕೇಸರಿ ಶಾಲು ಧರಿಸಿದ್ದಾರೆ: ಕೋಟ
ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರಿಗೆ ಹಿಂದು ಧರ್ಮ ನೆನಪಾಗುತ್ತದೆ ಎಂದು ಪರೋಕ್ಷವಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಉತ್ತರ ಕನ್ನಡ,ಫೆಬ್ರವರಿ27: ರಾಜ್ಯ ರಾಜಕಾರಣದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂ ಹಾಗೂ ಹಿಂದುತ್ವದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಕುರಿತು ಕಾರವಾರದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನಿನ್ನೆ-ಮೊನ್ನೆವರೆಗೂ ನಾನು ಹಿಂದುವಲ್ಲ, ಹಿಂದು ಧರ್ಮದಲ್ಲಿ ಅಸಮಾನತೆ ಇದೆ, ನಾನು ಹಿಂದುಧರ್ಮದಲ್ಲಿ ಬದುಕಿರುವವನಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಚುನಾವಣೆ ಸಮೀಪಿಸಿದಾಗ ನಾಮ ಹಾಕಿ, ಕೇಸರಿ ಶಾಲು ಧರಿಸಿಕೊಂಡು ತಿರುಗಾಡುವುದನ್ನ ನೋಡಿದ್ರೆ ದಿಗ್ಭ್ರಮೆಯಾಗುತ್ತದೆ. ಹೀಗಾಗಿ ಇಂತಹ ರಾಷ್ಟ್ರ ವಿರೋಧಿ ಮಾನಸಿಕತೆಯ ಜನರನ್ನ ಗುರುತಿಸ ಬೇಕು ಎಂದು ಹೇಳಿದರು.

ಒಂದು ಕಾಲದಲ್ಲಿ ರಾಷ್ಟ್ರಭಕ್ತರಾದಂತಹ ರಾಜಕೀಯ ಮುಖಂಡರು ಇಂದು ರಾಷ್ಟ್ರ ಆಳುವ ಗುರಿಯನ್ನಿಟ್ಟುಕೊಂಡೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಇಂದು ರಾಷ್ಟ್ರಭಕ್ತ ಯುವಜನಾಂಗ ಸೃಷ್ಟಿಯಾಗಬೇಕಾದ ಅಗತ್ಯತೆ ಇದೆ. ಭಾರತ ಮಾತಾಕೀ ಜೈ ಎನ್ನಬೇಕಾದ ಕೆಲ ದನಿಗಳು, ತಮ್ಮ ಸ್ವಾರ್ಥಕೋಸ್ಕರ ಎಲ್ಲೆಮೀರಿದ ಮಾತನಾಡಿದಾಗ ದಿಗ್ಭ್ರಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
15 ವರ್ಷದ ಕೆಳಗೆ ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನ ಹಾರಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಬಂದೂಕು ಹಿಡಿದವರು ತಾಯಿ ಎದೆಹಾಲು ಕುಡಿದಿದ್ದರೆ ಕಾಶ್ಮೀರಕ್ಕೆ ಬಂದು ಭಾರತದ ಧ್ವಜ ಹಾರಿಸಿ ವಾಪಸ್ ಹೋಗಿ ನೋಡಿ ಎಂದು ಸವಾಲು ಹಾಕುತ್ತಿದ್ದರು. ಆದರೆ ನಮ್ಮ ನರೇಂದ್ರ ಮೋದಿ ಅವರು ಕಾಶ್ಮೀರದಲ್ಲಿ ಹೇರಲಾಗಿದ್ದ ಆರ್ಟಿಕಲ್ 370 ಹಿಂಪಡೆದ ಮೇಲೆ ಕಾಶ್ಮೀರದ ಸರ್ಕಾರಿ ಕಚೇರಿಗಳ ಮೇಲೆ ಪ್ರತಿನಿತ್ಯ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡಿದ್ದಾರೆ.

ಪ್ರತಿಯೊಬ್ಬ ಮಗುವೂ ರಾಷ್ಟ್ರಭಕ್ತನಾಗುವಂತೆ ರಾಷ್ಟ್ರಪ್ರೇಮವನ್ನು ಬೆಳೆಸುವಂತಹ ಶಿಕ್ಷಣ ಕೊಡಬೇಕಾಗಿದೆ. ಈ ನಮ್ಮ ನಾಡಿನ ನೆಲದ ಅನ್ನ ತಿಂದವರು ತಮ್ಮ ಬದುಕನ್ನ ಸಮರ್ಪಣೆ ಮಾಡುವಂತಿರಬೇಕು ಎಂದು ಹೇಳಿದರು.
ಮಂಗಳೂರಿನಲ್ಲಿ ಈ ನೆಲದ ಪ್ರಜೆಯಾದವರೇ ಕನ್ನಡ ಶಾಲೆಯ ಮಕ್ಕಳ ನಡುವೆ ಕುಕ್ಕರ್‌ನಲ್ಲಿ ಬಾಂಬ್ ಇಡಲು ಮುಂದಾಗಿದ್ದರು. ಇದು ದೇಶದಲ್ಲಿ ಎಂತಹ ಮಾನಸಿಕತೆ ಇರುವ ಜನ ನುಗ್ಗಿದ್ದಾರೆ ಎನ್ನುವ ಆತಂಕ ಮೂಡಿಸುವಂತಿದೆ. ಓರ್ವ ಭಯೋತ್ಪಾದಕನಿಗಿಂತ ಹೆಚ್ಚಾಗಿ ಅವರನ್ನ ಸಮರ್ಥನೆ ಮಾಡುವವರ ಮಾನಸಿಕತೆಯನ್ನು ನಾವು ಗಮನಿಸಬೇಕಾಗಿದೆ. ಕುಕ್ಕರ್‌ನಲ್ಲಿ ಬಾಂಬ್ ಇಟ್ಟುಕೊಂಡು ಹೋದಾಗ ಅಲ್ಲೇ ಸ್ಪೋಟಗೊಂಡ ವ್ಯಕ್ತಿಯನ್ನ ಭಯೋತ್ಪಾದಕ ಎಂದು ಕರೆದದ್ದನ್ನ ಕೆಲವರು ವಿರೋಧಿಸಿದ್ದರು ಎಂದು ಡಿ ಕೆ ಶಿವಕುಮಾರ್ ವಿರುದ್ದ ಕಿಡಿಕಾರಿದರು.












Click it and Unblock the Notifications