ಅತ್ತ ಸ್ಪೀಕರ್ ಸ್ಥಾನವೂ ಇಲ್ಲ, ಇತ್ತ ಸಚಿವರೂ ಅಲ್ಲ: ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಕಡೆಗಣನೆ?
ಬೆಂಗಳೂರು, ಮೇ 27: ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌ವಿ ದೇಶಪಾಂಡೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಭಾಗ್ಯ ದೊರೆತಿಲ್ಲ. ಹೀಗಾಗಿ ಅವರನ್ನು ಕಡೆಗಣಿಸಲಾಗಿದೆಯೇ ಎಂಬ ಮಾತು ಈಗ ಕೇಳಿ ಬರುತ್ತಿದೆ.
ಶನಿವಾರ 24 ನೂತನ ಸಚಿವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಮೊದಲ ವಿಧಾನಸಭಾ ಕಲಾಪದಲ್ಲಿ ಹಂಗಾಮಿ ಸ್ಪೀಕರ್ ಆಗಿ ಆರ್‌ವಿ ದೇಶಪಾಂಡೆ ಅವರು ನೇಮಕವಾಗಿದ್ದರು. ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅವರು ಈ ಹಿಂದೆ ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದರು. ನೂತನ ಸರ್ಕಾರದಲ್ಲಿ ಸ್ಪೀಕರ್ ಆಗಿ ಅವರನ್ನು ಕೇಳಿಕೊಳ್ಳಲಾಗಿತ್ತು, ಆದರೆ ಅವರು ಸ್ಪೀಕರ್ ಆಗುವುದಿಲ್ಲ ಎಂದು ಹೇಳಿಬಿಟ್ಟಿದ್ದರು.

ಇದಕ್ಕೂ ಮೊದಲು ಅವರು ಹೊಸ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಸ್ಪೀಕರ್ ಆಗುವ ಅರ್ಹತೆ ಇಲ್ಲವೆಂದು ಅನಿಸುತ್ತದೆ. ನನ್ನ ಪ್ರಕಾರ ಸ್ಪೀಕರ್ ಪೋಸ್ಟ್ ಬಹಳ ದೊಡ್ಡದು. ಆ ಅರ್ಹತೆ ನನಗೆ ಇಲ್ಲ ಎಂದು ಕಾಣುತ್ತದೆ. ಅದು ತುಂಬಾ ಜವಾಬ್ದಾರಿಯುತ ಹುದ್ದೆ ಎನ್ನುವ ಮೂಲಕ ತಮಗೆ ಸಚಿವ ಸ್ಥಾನವೇ ಬೇಕೆಂದು ಪರೋಕ್ಷವಾಗಿ ಹೇಳಿದ್ದರು. ಆದರೆ ಈಗ ಅವರಿಗೆ ಸಚಿವ ಸ್ಥಾನ ಕೊಡಲಾಗಿಲ್ಲ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರನ್ನು 2022ರ ಅತ್ಯುತ್ತಮ ಶಾಸಕರಾಗಿ ಆಯ್ಕೆ ಮಾಡಲಾಗಿತ್ತು. ವಿಧಾನಸಭೆ ಕಲಾಪದಲ್ಲಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ನ ಹಿರಿಯ ಶಾಸಕೂ ಆದ ಆರ್ ವಿ ದೇಶಪಾಂಡೆಯವರಿಗೆ ಸ್ಪೀಕರ್ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದ್ದರು.

ಸರಳ, ಸಜ್ಜನ ವ್ಯಕ್ತಿತ್ವ, ರಾಜ್ಯ ಹಾಗೂ ದೇಶದ ಹಿತಕ್ಕೆ ಚಿಂತನೆ ಮಾಡುವವರು. ರಾಜ್ಯದ ರಾಜಕಾರಣದಲ್ಲಿ ಗುರುತಿಸಲ್ಪಟ್ಟವರು. 1980 ರಲ್ಲಿ ಎಪಿಎಂಸಿ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಬಳಿಗೆ ಒಂದು ತಂಡವನ್ನು ಕರೆತಂದಿದ್ದರು. ಕೆಲವೇ ದಿನಗಳಲ್ಲಿ ಎಪಿಎಂಸಿ ಅಧ್ಯಕ್ಷರಾದರು. ಜನತಾ ಪಕ್ಷದ ಅಧ್ಯಕ್ಷರು, ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ 1983 ರ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರಕ್ಕೆ ಆಯ್ಕೆಯಾಗಿದ್ದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯ, ದೇಶಪಾಂಡೆಯವರು, ಎಂಪಿ ಪ್ರಕಾಶ್ ಅವರನ್ನೂ ಸೇರಿದಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿದ ದೊಡ್ಡ ತಂಡ 1983 ರಲ್ಲಿ ಬೆಳಕಿಗೆ ಬಂತು. ಇಡೀ ರಾಜಕಾರಣ ಬದಲಿಸಿದ ಸಮಯವಾಗಿತ್ತು. ಆ ತಂಡದಲ್ಲಿ ಆರ್.ವಿ.ದೇಶಪಾಂಡೆಯವರೂ ಒಬ್ಬರು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ 2ನೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ದೇಶಪಾಂಡೆಯವರನ್ನು ಸಚಿವರನ್ನಾಗಿ ಮಾಡಲಾಯಿತು. ಅಂದಿನಿಂದ ವಿವಿಧ ಖಾತೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದರು.












Click it and Unblock the Notifications