ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರೀ ಯಾರಿಗೆ ಟಿಕೆಟ್: ಹಾಲಿ ಸಂಸದೆ ಹೇಳಿದ್ದೇನು?
ಬೆಳಗಾವಿ, ಸೆಪ್ಟೆಂಬರ್15 : 2024 ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿದ್ದು, ಈ ಬಾರೀ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶತಾಯುಗತಾಯ ಗೆಲುವು ಸಾಧಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ನಡೆಸಿದೆ.
ಇತ್ತ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಈ ಬಾರೀ ಹಾಲಿ ಸಂಸದೆ ಮಂಗಳ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಬೆಳಗಾವಿ ಹಾಲಿ ಸಂಸದೆ ಮಂಗಲ ಅಂಗಡಿ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಈ ಬಾರೀ ಟಿಕೆಟ್ ಕೈತಪ್ಪಲಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಟಿಕೆಟ್ ಕೈತಪ್ಪುತ್ತದೆ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ. ಇನ್ನೂ ಸಾಕಷ್ಟು ಸಮಯವಿದೆ. ನಾನು ಟಿಕೆಟ್ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಟಿಕೆಟ್ ವಿಚಾರವಾಗಿ ನನ್ನ ಜತೆಗೆ ಯಾವ ನಾಯಕರೂ ಚರ್ಚಿಸಿಲ್ಲ ಎಂದು ಹೇಳಿದರು.
ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿರುವುದರಿಂದ ಸಹಜವಾಗಿಯೇ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕು ಎಂದು ಸ್ಪಷ್ಟಪಡಿಸಿದರು.
ಇನ್ನೂ ಕಾಂಗ್ರೆಸ್ ಸೆರ್ಪಡೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಪ್ರಶ್ನೆಯೇ ಬರುವುದಿಲ್ಲ. ಟಿಕೆಟ್ ಸಿಗಲಿ, ಬಿಡಲಿ ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ ಅವರು, ಪುತ್ರಿಯರಿಗೆ ಟಿಕೆಟ್ ಕೊಡುವಂತೆ ನಾನು ಪಕ್ಷದ ನಾಯಕರಿಗೆ ಕೇಳಿಲ್ಲ. ಮುಂದೆ ಅಂಥ ಪ್ರಸಂಗ ಬಂದರೆ ನೋಡೋಣ. ಹಿಂದೆ ಪುತ್ರಿಗೆ ಟಿಕೆಟ್ ಕೇಳಿದ್ದೆ. ಅಂಗಡಿ ಕುಟುಂಬಕ್ಕೆ ಟಿಕೆಟ್ ಬದಲಾವಣೆ ಸಂಬಂಧ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳಷ್ಟು ಜನ ಇರುತ್ತಾರೆ ಎಂದು ಹೇಳಿದರು.












Click it and Unblock the Notifications