ಸದನದಲ್ಲಿ ಬಿಸಿ ಬಸಿ ಚರ್ಚೆ: ಕುಮಾರಸ್ವಾಮಿಯೇ ಸಮರ್ಥ ವಿಪಕ್ಷ ನಾಯಕ: ಲಕ್ಷ್ಮಣ್ ಸವದಿ
ಬೆಂಗಳೂರು,ಜುಲೈ 12: ಬಿಜೆಪಿಯಲ್ಲಿ ಕಚ್ಚಾಡ್ತಿದ್ದಾರೆ, ನೋಡ್ತಾ ಇರಿ, ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ. ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸದನದಲ್ಲಿ ಭವಿಷ್ಯ ನುಡಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಜಿಟಿ ದೇವೇಗೌಡ ಮಾತನಾಡುತ್ತಾ, ಬಿಎಸ್ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಇಳಿಸಿದ್ರು. ಆದರೆ ಅವರನ್ನು ಯಾಕೆ ಇಳಿಸಿದ್ರು ಅನ್ನೋದು ಗೊತ್ತಿಲ್ಲ. ನರೇಂದ್ರ ಮೋದಿಯವರು ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಕ್ಷ್ಮಣ್ ಸವದಿ ಅವರು ಉಪ ಮುಖ್ಯಮಂತ್ರಿ ಆಗಿದ್ದರು. ಸವದಿ ಅವರೇ ನಿಮಿಗಾದ್ರೂ ಗೊತ್ತಾ..? ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಲಕ್ಷ್ಮಣ ಸವದಿ, ಯಡಿಯೂರಪ್ಪ ಅವರನ್ನ ಯಾಕೆ ಇಳಿಸಿದ್ರು ಹೇಗೆ ಇಳಿಸಿದ್ರು ಅನ್ನೋದು ನಮಗಿಂತ ಹೆಚ್ಚು ನಿಮಗೆ ಗೊತ್ತಿದೆ. ನೀವು ಹೇಳ್ತಾ ಇಲ್ಲ ಅಷ್ಟೇ. ಆದರೆ ವಿರೋಧ ಪಕ್ಷದ ನಾಯಕ ಇಲ್ಲ ಅಂತ ಹೇಳುತ್ತಿದ್ದೀರಲ್ವಾ, ಅದಕ್ಕೋಸ್ಕರನೇ ಎರಡನೇ ಸೀಟ್ ನಲ್ಲಿ ಯಾರೂ ಕೂರುತ್ತಿಲ್ಲ. ಸ್ಥಾನಕ್ಕಾಗಿ ಬಹಳ ಕಚ್ಚಾಡ್ತಾ ಇದ್ದಾರೆ ಆದರೆ ಪ್ರಯೋಜನ ಇಲ್ಲ. ಕುಮಾರಸ್ವಾಮಿ ಅವರು ಮಾತ್ರ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡ್ತಾ ಇದ್ದಾರೆ. ಅದಕ್ಕಾಗಿಯೇ ಇನ್ನೂ ಆಯ್ಕೆ ಮಾಡಿಲ್ಲ ಅಂತ ಹೊರಗೆ ಚರ್ಚೆ ನಡೀತಾ ಇದೆ. ಇಬ್ಬರು ಸೇರಿಕೊಂಡೇ ವಿಪಕ್ಷ ನಾಯಕ ನೇಮಕ ಮಾಡ್ತಾರೆ ಎಂದರು.
ಈ ವೇಳೆ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮಧ್ಯಪ್ರವೇಶಿಸಿ, ಲಕ್ಷ್ಮಣ್ ಸವದಿ ಅವರನ್ನು ಹೊರಗೆ ಹಾಕಿದ್ದು ಯಾರು ಅಂತ ಗೊತ್ತಾಗಲಿಲ್ಲ. ಅವರು ಪಾಪ ಏನು ಮಾಡಿದ್ರು ಯಾಕೆ ಹೊರಗೆ ಕಳಿಸಿದ್ರು ಗೊತ್ತಿಲ್ಲ ಎಂದರು.
ಇನ್ನೂ ಸದನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವಾಗಿ ಜೆಡಿಎಸ್ ಸದಸ್ಯ ಜಿ.ಟಿ.ದೇವೆಗೌಡ ಬ್ಯಾಟಿಂಗ್ ಮಾಡಿದ್ದು, ಅನ್ನಭಾಗ್ಯ ಯೋಜನೆ ಪರವಾಗಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಹಿಂದೆ ಸಿದ್ಧರಾಮಯ್ಯ ಅವರ ಅನುಭವ ಇದೆ. ಬಡತನದ ಹಿನ್ನೆಲೆಯ ಸಿದ್ಧರಾಮಯ್ಯ ಕುಟುಂಬದ ಬಗ್ಗೆ ನನಗೆ ಗೊತ್ತಿದೆ. ಆ ಕಾರಣಕ್ಕೆ ಸಿದ್ಧರಾಮಯ್ಯ ಅನ್ನಭಾಗ್ಯ ತಂದಿದ್ದಾರೆ.
ಅದಕ್ಕಾಗಿ ನಾನು ಸಿದ್ಧರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಸಿದ್ದರಾಮಯ್ಯ ಅವರ ಕುಟುಂಬ, ಹೋಲ, ಗದ್ದೆ ನನಗೆ ಗೊತ್ತು. ಆದರೆ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸಹಕಾರ ನೀಡದಿರುವುದು ಸರಿಯಲ್ಲ ಎಂದರು.

ಅಕ್ಕಿಯನ್ನು ಕೇಂದ್ರ ಸರಕಾರ ನೀಡಬೇಕು. ನಮ್ಮ ತೆರಿಗೆ ಕೇಂದ್ರ ಸರಕಾರಕ್ಕೆ ಹೋಗುವುದು, ಅನ್ನಭಾಗ್ಯಕ್ಕೆ ಅಕ್ಕಿ ಕೊಡಲ್ಲ ಅನ್ನೋದು ಸರಿಯಲ್ಲ. ಗಾಂಧೀಜಿ ಸಹ ಅನ್ನದ ಮಹತ್ವದ ಬಗ್ಗೆ ಹೇಳಿದ್ದಾರೆ. ಹಾಗಾಗಿ ಅನ್ನಭಾಗ್ಯ ಯೋಜನೆ ಸರಿಯಾಗಿ ಜಾರಿಯಾಗಬೇಕು ಎಂದ ಜಿ.ಟಿ.ದೇವೆಗೌಡ ಹೇಳಿದರು.
ಈ ವೇಳೆ ರಾಜ್ಯಪಾಲರ ಭಾಷಣದ ವಂದಣಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಎಚ್ ಡಿ ರೇವಣ್ಣ ಮಾತನಾಡಿ, ಹಾಸನ ಆರ್ಟ್ಸ್ ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರುಗೆ ಹುದ್ದೆ ಕೊಟ್ಟಿಲ್ಲ, ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ, ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಅದನ್ನು ಸರಿಪಡಿಸಿ ಎಂದು ಎಚ್ ಡಿ ರೇವಣ್ಣ ಆಗ್ರಹಿಸಿದರು.












Click it and Unblock the Notifications