ಪೊಲೀಸ್ ಗಾಡೀಲಿ ವೈರಲ್ ಆಗಿದ್ದ ಗಣೇಶನಿಗೆ ಸಿಕ್ತು 'ವಿಸರ್ಜನೆ' ಭಾಗ್ಯ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಖಂಡಿಸಿ ಹಿಂದೂ ಸಂಘಟನೆಗಳು ಬೆಂಗಳೂರಿನ ಟೌನ್‌ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದವು. ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ಖಂಡಿಸಿ ಇಲ್ಲಿಯೂ ಗಣೇಶನ ಮೂರ್ತಿ ತಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಆ ಮೂರ್ತಿಯನ್ನು ಪೊಲೀಸರ ವಾಹನದಲ್ಲಿ ಕೂರಿಸಿದ್ದರು.
ಗಣೇಶ ಮೂರ್ತಿ ಪೊಲೀಸರ ಗಾಡಿಯಲ್ಲಿದ್ದ ಫೋಟೋವೊಂದು ಎಲ್ಲೆಡೆ ಹರಿದಾಡಿತ್ತು. ದೇಶಾದ್ಯಂತ ಪೊಲೀಸರ ಈ ನಡೆಗೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಘಟನೆ ಉಲ್ಲೇಖಿಸಿ, ನಿನ್ನೆ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕುಟುಕಿದ್ದರು.

ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುವ ಈ ಗಣೇಶನಿಗೆ ಇಂದು ವಿಸರ್ಜನೆ ಭಾಗ್ಯ ಸಿಕ್ಕಿದೆ. ಮೊನ್ನೆ ಪ್ರತಿಭಟನೆ ವೇಳೆ ಗಾಡಿಯಲ್ಲಿ ಕೂರಿಸಿದ್ದ ಪೊಲೀಸರೇ ಈ ಮೂರ್ತಿಯನ್ನು ಇಂದು ಖುದ್ದು ವಿಸರ್ಜನೆ ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಬೆಂಗಳೂರಿನ ಎಸ್.ಜೆ.ಠಾಣೆ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ನಂತರ ಪೊಲೀಸ್ ಅಧಿಕಾರಿಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣೇಶ ಮೂರ್ತಿಯ ವಿಸರ್ಜನೆ ಮಾಡಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 13ರಂದು ನಾಗಮಂಗಲ ಗಣೇಶ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಫ್ರೀಡಂಪಾರ್ಕ್‌ಗೆ ಸೀಮಿತಗೊಳಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಕೆಲವರು ಗಣಪತಿ ಮೂರ್ತಿಯೊಂದಿಗೆ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆಗೆ ಕಾರಣರಾದರು. ಈ ವೇಳೆ ಅವರು ಪ್ರತಿಭಟನೆಗೆ ತಂದಿದ್ದ ಗಣೇಶನ ಮೂರ್ತಿಯನ್ನು ಪೊಲೀಸರೇ ವಿಧಿವಿಧಾನದೊಂದಿಗೆ ವಿಸರ್ಜನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಗಣೇಶನ ಮೂರ್ತಿಯನ್ನು ಪೊಲೀಸರು ಹೊತ್ತೊಯ್ದು ಪೊಲೀಸರ ಗಾಡಿಯಲ್ಲಿ ಇಟ್ಟಿದ್ದ ಫೋಟೋಗಳು ಹಾಗೂ ವಿಡಿಯೋ ಎಲ್ಲೆಡೆ ಸಂಚಲನ ಸೃಷ್ಟಿಸಿದ್ದವು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿಯು ʼಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಕಾಂಗ್ರೆಸ್ ಸರ್ಕಾರ ರಾಹು ಕಾಲಕ್ಕೆ ಗಣೇಶ ಮೂರ್ತಿಗಳನ್ನು ಬಂಧಿಸಿದೆ. ಹಿಂದೂ ವಿರೋಧಿ ಕರ್ನಾಟಕ ಸರ್ಕಾರ ಅದೆಷ್ಟರಮಟ್ಟಿಗೆ ಲಜ್ಜೆ ಬಿಟ್ಟು ನಿಂತಿದೆ ಎನ್ನುವುದಕ್ಕೆ ಗಣೇಶ ಮೂರ್ತಿಯನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವುದೇ ಸಾಕ್ಷಿ! ಎಂದು ವಾಗ್ದಾಳಿ ನಡೆಸಿತ್ತು.

ಇಷ್ಟು ದಿನ ಹಿಂದೂಗಳ ಮೇಲೆ ದಾಳಿ ಮಾಡಿಸುವುದು, ಹಿಂದೂಗಳ ಭೂಮಿ ಕಬಳಿಸುವುದು, ಹಿಂದೂಗಳನ್ನು ಬಂಧಿಸುವುದು, ಹಿಂದೂಗಳನ್ನು ಹತ್ತಿಕ್ಕುತ್ತಿದ್ದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಗಣೇಶ ಮೂರ್ತಿಗಳನ್ನೇ ಬಂಧಿಸಿರುವುದು "ರಾಹು ಕಾಲ" ಶೀಘ್ರದಲ್ಲೇ ಕೊನೆಯಾಗಲಿದೆ ಎಂಬುದರ ಮುನ್ಸೂಚನೆ! ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ನಿನ್ನೆ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕುರುಕ್ಷೇತ್ರದಲ್ಲಿ ಭಾಷಣ ಮಾಡುವ ವೇಳೆ ಕರ್ನಾಟಕದ ಈ ಘಟನೆ ಉಲ್ಲೇಖಿಸಿದ್ದರು. ʼಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಗಣೇಶನನ್ನೂ ಬಂಧಿಸಲಾಗುತ್ತಿದೆ. ಇಡೀ ದೇಶವೇ ಗಣೇಶೋತ್ಸವವನ್ನು ಆಚರಿಸುತ್ತಿದೆ. ಆದರೆ ಕಾಂಗ್ರೆಸ್ ವಿಘ್ನನಿವಾರಕನ ಪೂಜೆಗೂ ವಿಘ್ನವನ್ನುಂಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ಮೀಸಲಾತಿ ವಿರೋಧಿ ಪಕ್ಷ. ಹಾಗಾಗಿ ಕಾಂಗ್ರೆಸ್ ದಿನಕ್ಕೊಂದು ಹೊಸ ಸುಳ್ಳನ್ನು ಹೇಳುತ್ತಲೇ ಇದೆ. ಈ ರೀತಿ ಸುಳ್ಳುಗಳನ್ನು ಹೇಳಲು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಆಗುವುದಿಲ್ಲವೇ?ʼ ಎಂದು ಪ್ರಶ್ನಿಸಿದ್ದರು. ಪೊಲೀಸರ ಈ ನಡೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ಪೊಲೀಸರು ಗಣೇಶನ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ವಿಸರ್ಜನೆ ಮಾಡುವ ಮೂಲಕ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.












Click it and Unblock the Notifications