ವೀರಶೈವರು ಯಾರು? ಲಿಂಗಾಯತರು ಯಾರು? (ಒಂದು ವಿಚಾರ ಮಂಥನ)

Posted By:
Subscribe to Oneindia Kannada

ರಾಜ್ಯದಲ್ಲಿ ಕಳೆದ ಹಲವಾರು ದಿನಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಈಗ ರಾಜಕೀಯ ರಂಗೂ ಬಂದು ಸೇರಿಕೊಂಡಿದೆ. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮವಾಗಬೇಕು ಎಂದು ಬಸವ ಧರ್ಮೀಯರು ಪ್ರತಿಭಟನೆ, ಹರತಾಳ ನಡೆಸುತ್ತಿದ್ದರೆ, ಮತ್ತೆ ಕೆಲವರು ಲಿಂಗಾಯತರು ವೀರಶೈವರಿಂದ ಪ್ರತ್ಯೇಕಿಸಲ್ಪಡುವುದು ಬೇಡ ಎಂಬ ಕೂಗಿಡುತ್ತಿದ್ದಾರೆ.

ಆದರೆ, ಅನ್ಯ ಜಾತಿಯರಿವರಿಗೆ, ಅದರಲ್ಲೂ ಪ್ರತ್ಯೇಕ ಧರ್ಮ ವಿವಾದದ ಚೌಕಟ್ಟಿನ ಹೊರಗಡೆಯಿಂದ ನೋಡುವವರಿಗೆ ಇದು ತುಂಬಾ ಗೊಂದಲವಾಗಿ ಕಾಣುತ್ತಿದೆ. ಏಕೆಂದರೆ, ಬಹುತೇಕರು ವೀರಶೈವರು, ಲಿಂಗಾಯತರು ಎರಡೂ ಒಂದೇ ಎಂದು ತಿಳಿದಿದ್ದರು. ಇಬ್ಬರೂ ಹಿಂದೂಗಳ ದೇವರಾದ ಶಿವನ ಆರಾಧಕರು ಎಂದೇ ನಂಬಿದ್ದರು.

The differences between Veerashaivas and Lingayats

ಆದರೆ, ನಿಜ ಹೇಳಬೇಕೆಂದರೆ, ಲಿಂಗಾಯತರೇ ಬೇರೆ, ವೀರಶೈವರೇ ಬೇರೆ. ಮೇಲ್ನೋಟಕ್ಕೆ ಅವು ಒಂದೇ ಎಂದು ಕಾಣಿಸಿಕೊಂಡರೂ ಲಿಂಗಾಯತ ಎಂಬ ಪದದ ಅರ್ಥ, ವ್ಯಾಖ್ಯಾನ, ಆಚರಣೆ, ಸಂಪ್ರದಾಯ, ಸಂಸ್ಕಾರಗಳೆಲ್ಲವೂ ವೀರಶೈವರಿಗಿಂತ, ಹಿಂದೂ ಧರ್ಮಕ್ಕಿಂತ ಭಿನ್ನವಾಗಿವೆ ಎಂಬುದು ಅಷ್ಟೇ ಸತ್ಯ.

ಈ ಎರಡು ಸಮುದಾಯಗಳ ಅರ್ಥವೇನು, ಇವುಗಳ ನಡುವಿನ ವ್ಯತ್ಯಾಸವೇನು ಎಂಬ ಕುತೂಹಲದ ಪ್ರಶ್ನೆಗಳಿಗೆ ಲಿಂಗಾಯತ ಬಾಂಧವರಿಂದಲೇ ಪಡೆದ ಉತ್ತರವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ವೀರಶೈವರು ಎಂದರೆ ಯಾರು?
ಶೈವರು ಮೂಲತಃ ಶಿವನ ಆರಾಧಕರು. ಇವರು ಬಸವಣ್ಣನವರ ಕಾಲಘಟ್ಟಕ್ಕಿಂತಲೂ ಬಹು ಹಿಂದಿನಿಂದ ಇದ್ದವರು, ಈಗಲೂ ಇರುವವರು. ಇವರು ಶಿವನನ್ನು ಬಿಟ್ಟು ಬೇರೆ ಯಾರನ್ನೂ ಪೂಜಿಸುವುದಿಲ್ಲ. ಭಾರತದ ನಾನಾ ಭಾಗಗಳಲ್ಲಿ ಇವರು ಹರಡಿಕೊಂಡಿದ್ದಾರೆ. ಇವರಲ್ಲಿ, ಪಾಶುಪತ ಶೈವ, ಸೋಮ ಶೈವ, ದಕ್ಷಿಣ ಶೈವ, ಕಾಳಮುಖ ಶೈವ, ಲಾಕುಳ ಶೈವ, ಯಾವಳ ಶೈವ, ಸಾಮಾನ್ಯ ಶೈವ, ಮಿಶ್ರ ಶೈವ, ಶುದ್ಧ ಶೈವ, ಆದಿ ಶೈವ, ಅನು ಶೈವ, ಅವಾಂತರ ಶೈವ ಎಂಬಿತ್ಯಾದಿ ಪಂಗಡಗಳಿವೆ.

ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ

ಇದೇ ಶೈವ ಪರಂಪರೆಯಲ್ಲಿ ಬರುವ ಮತ್ತೊಂದು ಪಂಗಡವೇ ವೀರಶೈವ. ಈ ಪಂಗಡವರು ಕರ್ನಾಟಕ ಬಿಟ್ಟರೆ ಬೇರೆಡೆ ಕಾಣಸಿಗುವುದು ಆಂಧ್ರಪ್ರದೇಶ, ಕೇರಳದಲ್ಲಿ. ಇವರಲ್ಲಿ ಮಾಂಸಾಹಾರಿಗಳು, ಸಸ್ಯಾಹಾರಿಗಳೂ ಇದ್ದಾರೆ. ಹಾಗಾಗಿ, ಈ ವೀರಶೈವರನ್ನು ಬ್ರಾಹ್ಮಣ ಶೈವ, ಕ್ಷತ್ರಿಯ ಶೈವ ಎಂದೂ ವಿಂಗಡಿಸುತ್ತಾರೆ.

ಪಂಚ ಪೀಠಗಳೇ ಮೂಲ
ಈ ಎಲ್ಲಾ ಬಗೆಯ ಶೈವರಿಗೆ ಪಂಚ ಪೀಠಗಳೇ ಮೂಲ. ಆ ಪಂಚಪೀಠಗಳೆಂದರೆ, ಕಾಶಿ ಮಠ, ರಾಮೇಶ್ವರ ಮಠ, ಉಜ್ಜಯಿನಿ ಮಠ, ರಂಭಾಪುರಿ ಮಠ ಹಾಗೂ ಶ್ರೀಶೈಲ ಮಠ. ಈ ಐದು ಮಠಗಳಿಗೆ (ಪಂಚ ಪೀಠ) ಶೈವರು ನಡೆದುಕೊಳ್ಳುತ್ತಾರೆ.

The differences between Veerashaivas and Lingayats

ವೀರಶೈವರು ಲಿಂಗಾಯತರಾಗಿದ್ದು ಹೇಗೆ?
ಬಸವಣ್ಣನವರ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಇದ್ದ ವೀರಶೈವರು ಬಸವಣ್ಣನವರ ಪ್ರಭಾವಕ್ಕೊಳಗಾಗಿ ಬಸವ ತತ್ವಗಳನ್ನು ಅಳವಡಿಸಿಕೊಂಡರು. ಹಾಗೆ, ಬಸವ ತತ್ವ ಅಳವಡಿಸಿಕೊಂಡವರನ್ನು ಅವರ ಮೂಲ ಜಾತಿಗೆ ತಕ್ಕಂತೆ, ಬಣಜಿಗ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು, ಗಾಣಿಗ ಲಿಂಗಾಯತರು, ಗೌಡ ಲಿಂಗಾಯತರು ಎಂದು ಕರೆಯುವುದು ರೂಢಿಗೆ ಬಂದಿದ್ದರಿಂದ, ಲಿಂಗಾಯತ ಧರ್ಮವನ್ನು ಅಳವಡಿಸಿಕೊಂಡ ವೀರಶೈವರನ್ನು 'ವೀರಶೈವ ಲಿಂಗಾಯತರು' ಎಂದು ಕರೆಯಲಾಯಿತು.

ಶೈವ - ಬಸವ ತತ್ವಗಳ ವ್ಯತ್ಯಾಸ
ಇನ್ನು, ಶೈವರು ಹಾಗೂ ಬಸವ ಧರ್ಮೀಯರ ಮೂಲಭೂತ ಆಚರಣೆಗಳು ಬೇರೆ. ಮೊದಲೇ ಹೇಳಿದಂತೆ, ಶೈವರು ಶಿವನನ್ನು ಪೂಜಿಸುತ್ತಾರೆ. ಶಿವನನ್ನು ಬಿಟ್ಟರೆ ಮಿಕ್ಕ ಯಾರನ್ನೂ ಪೂಜಿಸುವುದಿಲ್ಲ. ಆದರೆ, ಬಸವಣ್ಣ ಹೇಳುವ ಶಿವ, ಶೈವರು ಪೂಜಿಸುವ ಶಿವ ಅಲ್ಲ. ಅಂದರೆ, ಶೈವರು ಪೂಜಿಸುವುದು - ಹಿಂದೂ ಪುರಾಣಗಳಲ್ಲಿ ಕಾಣಬರುವ ಕೈಲಾಸೇಶ್ವರ, ಪಾರ್ವತಿಯ ಪತಿ, ಗಣೇಶ - ಸುಬ್ರಮಣ್ಯರ ತಂದೆ, ತ್ರಿಶೂಲಧಾರಿ, ನಾಗಾಭರಣನೆಂದು ಹೇಳುವ ಶಿವನನ್ನು.

ಆದರೆ, ಬಸವಣ್ಣನವರು ಹೇಳುವ 'ಶಿವ' ಎಂಬ ಪದದ ಅರ್ಥವೇ ಬೇರೆ. ಅವರು ಹೇಳುವ 'ಶಿವ' ಎಂಬ ಪದ ನಿರ್ಗುಣ, ನಿರಾಕಾರಗಳ ಸಾಂಕೇತಿಕ ಪದ. ಅಂದರೆ, ದೇವರು ನಿರಾಕಾರಿ. ಆತನಿಗೆ ಆಕಾರವಿಲ್ಲ. ಆತನಿಗೆ ಎಲ್ಲಾ ಗುಣಗಳಿಗೂ ಅತೀತ. ಹಾಗಾಗಿ, ಆತ ನಿರ್ಗುಣ ಎಂಬ ಪರಿಕಲ್ಪನೆಯಿದು. ಹಾಗಾಗಿಯೇ, ಬಸವಣ್ಣನವರ ಮೂಲ ವಚನಗಳಲ್ಲಿ ಎಲ್ಲೂ ಕೈಲಾಸ, ಗಣೇಶ, ಸುಬ್ರಮಣ್ಯ, ಪಾವರ್ತಿಯರ ಉಲ್ಲೇಖವಿರುವುದಿಲ್ಲ ಎನ್ನುತ್ತಾರೆ ಲಿಂಗಾಯತರು.

ಬೀದರ್ : ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆಗಾಗಿ ಹೋರಾಟ

ಇನ್ನು, ಆಚರಣೆಗಳ ವಿಚಾರಕ್ಕೆ ಬರುವುದಾದರೆ, ಬಸವಣ್ಣನವರು ಇಷ್ಟ ಲಿಂಗ ಪೂಜೆ ಹೊರತುಪಡಿಸಿದರೆ, ಮಿಕ್ಕ ಯಾವ ಸಾಂಪ್ರದಾಯಿಕ ಪೂಜೆಯನ್ನೂ ಸೂಚಿಸಿದವರಲ್ಲ. ಅಂದರೆ, ಯಜ್ಞ, ಯಾಗ, ಹೋಮ, ಬಲಿ ಕೊಡುವುದು ಮುಂತಾದ ಪದ್ಧತಿಗಳನ್ನು ಅವರು ಪ್ರತಿಪಾದಿಸಲಿಲ್ಲ. ಆದರೆ, ಈ ಯಜ್ಞ, ಯಾಗಾದಿಗಳ ಸಂಸ್ಕೃತಿ ಶೈವ ಪರಂಪರೆಯಲ್ಲಿವೆ. ವೀರಶೈವರು ಹಾಗೂ ಲಿಂಗಾಯತರ ಆಚರಣೆಗಳ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ಇದೂ ಒಂದು.

The differences between Veerashaivas and Lingayats

ಗುರುತರ ಆರೋಪ
ಇನ್ನು, ವೀರಶೈವರ ವಿರುದ್ಧ ಲಿಂಗಾಯತರಿಗೆ ಮುನಿಸು ಬರಲು ಮೇಲೆ ಹೇಳಿದ ಸಿದ್ಧಾಂತಕ್ಕೆ ಸಂಭವಿಸಿದ ಭಿನ್ನಾಭಿಪ್ರಾಯಗಳು ಮಾತ್ರ ಕಾರಣವಲ್ಲ. ವೀರಶೈವರು, ಲಿಂಗಾಯತರ ಮೇಲೆ ಪ್ರಭಾವ ಬೀರಿ ತಮ್ಮ ಆಚಾರ, ವಿಚಾರಗಳನ್ನು ಅವರ ಮೇಲೆ ಹೇರಿದ್ದಕ್ಕೇ ವೀರಶೈವ ಮಠಗಳ ವಿರುದ್ಧ, ವೀರಶೈವರ ವಿರುದ್ಧ ಲಿಂಗಾಯತರು ಸಿಡಿದೇಳಲು ಕಾರಣ ಎನ್ನುವವರಿದ್ದಾರೆ.

ಉದಾಹರಣೆಗೆ, ಬಸವಣ್ಣನವರ ಮಾರ್ಗದರ್ಶನದಂತೆ ಇಷ್ಟ ಲಿಂಗಧಾರಣೆ ಮಾಡಿಕೊಂಡರೂ, ಆನಂತರ ವೀರಶೈವರು ಅವುಗಳನ್ನು ಶಿವದಾರದಲ್ಲಿ ಕಟ್ಟಿಕೊಳ್ಳುವ ಪದ್ಧತಿ (ಬ್ರಾಹ್ಮಣ ಶೈಲಿ) ಅಳವಡಿಸಿಕೊಂಡರು. ಇಷ್ಟಲಿಂಗವನ್ನು ಕೊರಳಿಗೆ ಕಟ್ಟಿಕೊಳ್ಳಲು ಬಸವಣ್ಣ ಹೇಳಿದ್ದನ್ನು ಬಿಟ್ಟೇಬಿಟ್ಟರು.

ವಚನಗಳನ್ನು ಹಲವಾರು ಪ್ರತಿಗಳನ್ನಾಗಿಸಿ ಹೆಚ್ಚೆಚ್ಚು ಜನರಿಗೆ ತಲುಪಿಸುವ ಸಂದರ್ಭದಲ್ಲಿ, ಆ ಜವಾಬ್ದಾರಿಯನ್ನು ಹೊತ್ತ ಪಂಚಪೀಠಗಳು, ತಾವು ಹೇಳಬೇಕಾದ್ದನ್ನು ಬಸವಣ್ಣನವರ ಬಾಯಿಂದ ಬಂದಂತೆ ವಚನಗಳನ್ನು ತಿದ್ದಿದರು.

ಹಾಗೆ, ವಚನಗಳನ್ನು ತಮಗೆ ಬೇಕಾದಂತೆ ತಿದ್ದಿ, ಬಸವಣ್ಣ ಹೇಳುತ್ತಿದ್ದ ಶಿವ ಹಾಗೂ 'ಪಾರ್ವತಿಯ ಪತಿ ಶಿವ' ಒಂದೇ ಎಂದು ಬಿಂಬಿಸಿ, ಅನೇಕ ಲಿಂಗಾಯತರು ಇಂದಿಗೂ ಪೌರಾಣಿಕ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ದೇವರುಗಳನ್ನು ಅರ್ಚಿಸುವಂತೆ ಮಾಡಿದರು ಎಂಬ ಆರೋಪವಿದೆ.

ವಾದ- ವಿವಾದ
ಅಂಥ ತಿದ್ದಲ್ಪಟ್ಟ ವಚನಗಳನ್ನು ಓದಿಯೇ ಅನೇಕ ಸಂಶೋಧಕರು, ಸಾಹಿತಿಗಳು, - ''ಬಸವಣ್ಣನವರೇ, ಹುಟ್ಟಿನಿಂದ ಶೈವ ಬ್ರಾಹ್ಮಣನಾಗಿದ್ದ ನಾನು, ಭಕ್ತಿ ಮಾರ್ಗಕ್ಕೆ ಮನಸೋತು ವೀರಶೈವನಾದೆ ಎಂದು ಹೇಳಿದ್ದಾರಲ್ಲ?'' ಎಂದು ಪ್ರಶ್ನೆ ಮಾಡುವಂತಾಗಿದೆ ಎನ್ನುತ್ತಾರೆ ಲಿಂಗಾಯತರು.

ಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ: ಚಿದಾನಂದ ಮೂರ್ತಿ

ಸಂಶೋಧಕರ ಈ ಪ್ರಶ್ನೆಗೆ ಉತ್ತರಿಸುವ ಬಸವ ಧರ್ಮೀಯರು, 'ಬಸವಣ್ಣನವರು ಹುಟ್ಟು ಬ್ರಾಹ್ಮಣ ಶೈವರೇನೋ ನಿಜ. ಆದರೆ, ಅವರು ವೀರಶೈವ ಸಂಸ್ಕೃತಿಗೆ ಮಾರುಹೋಗಿದ್ದರೆಂಬುದು ಸುಳ್ಳು. ಬಾಲ್ಯದಲ್ಲೇ ಶೈವ ಸಂಸ್ಕೃತಿಗೆ ಸಡ್ಡು ಹೊಡೆದು ಬಂದ ಬಸವಣ್ಣ ಪುನಃ ಶೈವ ಪದ್ಧತಿಗೆ ಹಿಂದಿರುಗಲು ಸಾಧ್ಯವೇ?' ಎಂದು ಕೇಳುತ್ತಾರೆ.

ಹಾಗಾಗಿ, ಬಸವಣ್ಣ ಹೇಳಿದ್ದೇ ಬೇರೆ. ಇವರು (ವೀರಶೈವರು) ಹೇಳುತ್ತಿರುವುದೇ ಬೇರೆ. ಅಷ್ಟರ ಮಟ್ಟಿಗೆ, ವಚನಗಳನ್ನು ತಿದ್ದಿ, ತೀಡಿ, ಲಿಂಗಾಯತರನ್ನು ಶತಶತಮಾನಗಳಿಂದ ದಾರಿ ತಪ್ಪಿಸಲಾಗಿದೆ. ಮೂಲ ಬಸವ ತತ್ವಗಳನ್ನು ತಿರುಚಲಾಗಿದೆ ಎಂಬ ಅಸಮಾಧಾನ ಲಿಂಗಾಯತರಲ್ಲಿದೆ.

ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ: ಮುರುಘಾ ಶ್ರೀ (ವಿಶೇಷ ಸಂದರ್ಶನ)

ಕೊನೆಯದಾಗಿ...

Lakshmi Hebbalkar Gives Controversial Statement About Basavanna

ಒಂದೇ ಮಾತಿನಲ್ಲಿ ಹೇಳುವುದಾದರೆ, ವೀರಶೈವ ತತ್ವಗಳೇ ಬೇರೆ, ಲಿಂಗಾಯತ ತತ್ವಗಳೇ ಬೇರೆ. ಹಾಗಾಗಿಯೇ, ಲಿಂಗಾಯತರಿಂದ ಪ್ರತ್ಯೇಕ ಧರ್ಮದ ಸ್ಥಾನಮಾನದ ಕೂಗು ಎದ್ದಿದೆ. ಬಸವ ಧರ್ಮೀಯರು ಹೇಳುವುದಿಷ್ಟೇ, ಜೈನರಿಗೆ, ಬೌದ್ಧರಿಗೆ, ಸಿಖ್ ಸಮುದಾಯಗಳಿಗೆ ಹೇಗೆ ಒಬ್ಬ ಧರ್ಮ ಗುರು ಇದ್ದಾರೋ, ಹಾಗೆಯೇ ನಮಗೂ ಒಬ್ಬ ಗುರು (ಬಸವಣ್ಣ) ಇದ್ದಾರೆ. ಅವರಂತೆ, ನಮಗೂ (ಲಿಂಗಾಯತ) ಪ್ರತ್ಯೇಕ ಆಚರಣೆ, ಪದ್ಧತಿ, ವಿಚಾರಗಳಿವೆ. ಹಾಗಾಗಿ, ಜೈನರಿಗೆ, ಬೌದ್ಧರಿಗೆ, ಸಿಖ್ಖರಿಗೆ ನೀಡಿದ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ನಮಗೂ ನೀಡಬೇಕು ಎನ್ನುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The demand of Lingayats of Karnataka, to get a separate religious status has gone to the peak level. But, many of Kannadigas or other people not known the fact that Veerashaivas and Lingayats are different.
Please Wait while comments are loading...