ಹುಟ್ದಾಗ ಹೆಣ್ಮಗು ಎಂದು ಸತ್ತ ಗಂಡ್ಮಗು ಕೊಟ್ಟರು!
ಮನೆಗೆ ಹೊಸ ಅತಿಥಿ (ಮಗು) ಬರುವುದು ಎಂದರೆ ಅದು ಇಡೀ ಕುಟುಂಬಕ್ಕೆ ಸಂತೋಷದ ವಿಷಯ. ಮಗುವಿನ ನಗು, ಪುಟ್ಟ ಪುಟ್ಟ ಕೈ- ಕಾಲುಗಳು ಕಿರುದನಿಯ ಅಳು. ದಂಪತಿಗಳ ಜೀವನದಲ್ಲಿ ಆಗಬಹುದಾದ ಬಹುದೊಡ್ಡ ಬದಲಾವಣೆ ಅದು. ಹೊಸ ಅತಿಥಿಯನ್ನು ಇಡೀ ಕುಟುಂಬವೇ ರಾಜ / ರಾಣಿಯಂತೆ ನೋಡಿಕೊಳ್ಳುತ್ತಾರೆ. ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಇಂತಹದ್ದೇ ಒಂದು ಅನುಭವವನ್ನು ಕೊಪ್ಪಳದ ದಂಪತಿ ಹಾಗೂ ಕುಟುಂಬಕ್ಕೆ ಆಗಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ಮಾಡಿದ ಯಡವಟ್ಟು ಆ ಸಂಭ್ರಮವನ್ನು ಒಂದೇ ವಾರದಲ್ಲಿ ಕಸಿದುಕೊಂಡಿದೆ.
ಕೊಪ್ಪಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮಾಡಿರುವ ಯಡವಟ್ಟನ್ನು ಕೇಳಿದರೆ ಯಾರಿಗಾದರೂ ಕೋಪ ಬರುತ್ತದೆ. ಸಣ್ಣಪುಟ್ಟ ತಪ್ಪುಗಳು ಎಲ್ಲ ವೃತ್ತಿಯಲ್ಲೂ ಆಗುತ್ತವೆ. ಅವುಗಳನ್ನು ತಿದ್ದಿಕೊಳ್ಳಬಹುದು ಕೂಡ. ಆದರೆ, ಈ ಆಸ್ಪತ್ರೆ ಸಿಬ್ಬಂದಿ ಮಾಡಿರುವ ಯಡವಟ್ಟು ನೆನಪಿಸಿಕೊಂಡರೆ ನಿಮ್ಮ ಪಿತ್ತವೂ ನೆತ್ತಿಗುರುವುದು ಕನ್ಫರ್ಮ್. ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಅದಲು ಬದಲು ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಇದರಲ್ಲಿ ಮಗು ಅದಲು ಬದಲು ಮಾತ್ರವಾಗಿಲ್ಲ. ಒಂದು ವಾರದ ಹಿಂದೆ ಹೆಣ್ಣು ಮಗುವಾಗಿದೆ ಎಂದು ಹೇಳಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಇದೀಗ ಮೃತ ಗಂಡು ನವಜಾತ ಶಿಶುವನ್ನು ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಜಯನಗರದ ಹಗರಿಬೊಮ್ಮನಳ್ಳಿಯ ನಿವಾಸಿ ಗೌರಿ ಅವರು ಈಚೆಗೆ ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಗೌರಿ ಅವರಿಗೆ ಅವಧಿಪೂರ್ವ ಮಗು ಜನನವಾಗಿತ್ತು. ಏಳು ತಿಂಗಳ ಗರ್ಭಿಣಿಯಾಗಿದ್ದಾಲೇ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಆಸ್ಪತ್ರೆಗೆ ದಾಖಲಾಗುವಾಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ ಎಂದು ಹೇಳಲಾಗಿತ್ತು.

ಮೊದಲು ಹಗರಿಬೊಮ್ಮನಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇಲೆ ಹೆಚ್ಚಿನ ಚಿಕಿತ್ಸೆಗಾಗಿಂದು ಕೊಪ್ಪಳ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 23ಕ್ಕೆ ಗೌರಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಸೆಪ್ಟೆಂಬರ್ 25ಕ್ಕೆ ಹೆರಿಗೆ ಆಗಿತ್ತು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಗೌರಿ ಕುಟುಂಬದವರಿಗೆ ಹೆಣ್ಣು ಮಗುವಾಗಿದೆ ಎಂದು ಹೇಳಿದ್ದರು.
ಆದರೆ, ಮಗು ಅವಧಿ ಪೂರ್ವ ಜನಿಸಿರುವುದರಿಂದ ಮಗುವಿನ ತೂಕ ಕಡಿಮೆ ಇದೆ. ಹೀಗಾಗಿ ತೀವ್ರ ನಿಘಾ ಘಟಕದಲ್ಲಿ ಇರಿಸಬೇಕು ಎಂದಿದ್ದರು. ಆ ಸಂದರ್ಭದಲ್ಲಿ ಮಗುವನ್ನು ಸರಿಯಾಗಿ ತೋರಿಸದೆಯೇ ತೀವ್ರ ನಿಘಾ ಘಟಕಕ್ಕೆ ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮಗು ಸಾವಿನ ಸುದ್ದಿ: ಮಗುವಿಗೆ ತೂಕ ಕಡಿಮೆ ಇದೆ. ಅಲ್ಲದೇ ಕಾಮಲೆಯು ಇದೆ ಹೀಗಾಗಿ, ಹೆಚ್ಚಿನ ಚಿಕಿತ್ಸೆ ಇದೆ ಎಂದು ಹೇಳಿ ಮಗುವನ್ನು ಕಳೆದ ಒಂದು ವಾರದಿಂದ ತೀವ್ರ ನಿಘಾ ಘಟಕದಲ್ಲಿ ಇರಿಸಿದ್ದ ಆಸ್ಪತ್ರೆ ಸಿಬ್ಬಂದಿ ಮಂಗಳವಾರ ಕರೆ ಮಾಡಿ, ನಿಮ್ಮ ಮಗು ಸಾವನ್ನಪ್ಪಿದೆ ಬಂದು ತೆಗೆದುಕೊಂಡು ಹೋಗಿ ಎಂದಿದ್ದಾರೆ.
ದಂಪತಿ ಮಗುವನ್ನು ಮನೆಗೆ ತಂದು ನೋಡಿದರೆ, ಆಸ್ಪತ್ರೆ ಅವರು ನೀಡಿರುವುದು ಗಂಡು ನವಜಾತ ಶಿಶುವಿನ ಶವ ಎಂದು ಗೊತ್ತಾಗಿದೆ. ಹೆರಿಗೆ ಆದಾಗ, ಚಿಕಿತ್ಸೆ ನೀಡುವಾಗ ಹೆಣ್ಣು ಮಗು ಎಂದೇ ಹೇಳಲಾಗಿತ್ತು. ಆದರೆ, ಈಗ ಗಂಡು ಮಗುವಿನ ಶವ ಕೊಟ್ಟಿದ್ದಾರೆ ಎಂದು ಗೌರಿ ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆರಿಗೆ ಆದಾಗಿನಿಂದಲೂ ಹೆಣ್ಣು ಮಗು ಅಂತ ಹೇಳಿದ್ದರು. ಈಗ ಸಾವನ್ನಪ್ಪಿರುವ ಗಂಡು ಮಗುವನ್ನು ಕೈಗಿಟ್ಟಿದ್ದಾರೆ ಎಂದು ಗೌರಿ ದುಃಖಿತರಾಗಿದ್ದಾರೆ. ನಮಗೆ ಕೊಟ್ಟಿರುವುದು ನಮ್ಮ ಮಗುವಲ್ಲ. ಶಿಶುವನ್ನು ನೋಡಿದರೆ ಏಳು ದಿನದ ಮಗುವಿನಂತೆಯೂ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹುಟ್ಟಿದ್ದು ಗಂಡು ಮಗುವೇ ಹೆಣ್ಣು ಹಾಗೂ ಗಂಡು ಎಂದು(ಕಾಲಂ) ಬರೆಯುವಾಗ ತಪ್ಪಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇಲ್ಲಿಯವರೆಗೂ ಗಂಡು ನವಜಾತ ಶಿಶುವಿನ ಅಂತ್ಯಸಂಸ್ಕಾರ ಆಗಿಲ್ಲ. ಶಿಶುವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.












Click it and Unblock the Notifications