ಈಗ Pay Cm, Pay DCM ಆಗಿದೆಯೇ? ಸರಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿದೆಯೇ?: ಆರ್.ಅಶೋಕ್

ಬೆಂಗಳೂರು, ಆಗಸ್ಟ್‌ 10: ಕರ್ನಾಟಕದ ಕಾಂಗ್ರೆಸ್ ಸರಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿದೆಯೇ? ಎಂದು ಮಾಜಿ ಸಚಿವ ಆರ್.ಅಶೋಕ್ ಅವರು ಪ್ರಶ್ನಿಸಿದರು.

ಈ ಕುರಿತು ಗುರುವಾರ ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು ಕಾಂಗ್ರೆಸ್ ಅಧಿಕಾರ ಪಡೆದರೆ ಎಟಿಎಂ ಸರಕಾರದ ಮುನ್ಸೂಚನೆ ಕೊಟ್ಟಿದ್ದರು. ಅವರ ಮಾತು ನೂರಕ್ಕೆ ನೂರು ಸತ್ಯವಾಗಿದೆ. ಹಿಂದೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್? ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

The Congress Government Gone Into Fund Collection For The Lok Sabha Elections Said R Ashok

ಫಂಡ್ ಕಲೆಕ್ಷನ್ ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ?

ನಮ್ಮ ಮೇಲೆ 40 ಶೇಕಡಾ ಕುರಿತಂತೆ ನಿರಾಧಾರ ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ ಶೇ 15ರ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಎಂದು ಕೇಳಿದ ಅವರು, ಗುತ್ತಿಗೆದಾರರು ಅಜ್ಜಯ್ಯ ದೇವಸ್ಥಾನಕ್ಕೆ ಹೋಗಿ ಆಣೆ ಮಾಡುವಂತೆ ಕೇಳಿದ್ದಾರೆ. ನೀವು ಕಮಿಷನ್ ಕೇಳದೆ ಇದ್ದರೆ ಸವಾಲು ಒಪ್ಪಬೇಕಿತ್ತಲ್ಲವೇ? ಎಂದು ಆರ್.ಅಶೋಕ್ ಪ್ರಶ್ನಿಸಿದರು.

ಫಂಡ್ ಕಲೆಕ್ಷನ್ ಎಂಬುದು ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ? ಎಂದು ಕೇಳಿದ ಅವರು, ಕೆಂಪಣ್ಣನವರೇ ಎಲ್ಲಿದ್ದೀರಪ್ಪ? ಬಿಬಿಎಂಪಿಯ 2019ರಿಂದ 2023ರ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತ ಇದ್ದೀರಿ. ನೀವು ಪ್ರಾಮಾಣಿಕರಿದ್ದರೆ 2013ರಿಂದ ತನಿಖೆ ಮಾಡಬಹುದಲ್ಲವೇ? ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ಸಿನ ಬಳುವಳಿ ಇವರೇ? ಎಂದು ಪ್ರಶ್ನಿಸಿದರು.

ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಕಥೆ ಏನು? ದಯಾಮರಣ ಕೋರಿ 300 ಜನ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನವರೇ ಇದಕ್ಕೆ ನಿಮ್ಮ ಉತ್ತರ ಏನು? ದೆಹಲಿಯಲ್ಲಿ ಸಚಿವರ ಸಭೆ ಮಾಡಿದ್ದು ಲೋಕಸಭಾ ಸೀಟು ಗೆಲ್ಲಿಸಲೇ ಅಥವಾ ಸೂಟ್‍ಕೇಸ್ ತುಂಬಿಸಲೋ? ಸನ್ಮಾನ್ಯ ಶಿವಕುಮಾರ್ ಅವರೇ ನಿಮ್ಮದು ಬ್ರ್ಯಾಂಡ್ ಬೆಂಗಳೂರೇ ಅಥವಾ ಬ್ಲ್ಯಾಕ್ ಬೆಂಗಳೂರೇ? ಎಂದು ಪ್ರಶ್ನಿಸಿದರು.

ಈ ಗುತ್ತಿಗೆದಾರರೆಲ್ಲರೂ ಬಿಜೆಪಿಯ ಮೂರು ವರ್ಷಗಳ ಆಡಳಿತದ ವೇಳೆ ಆಕಾಶದಿಂದ ಇಳಿದಿದ್ದಾರಾ? ಒಬ್ಬರು 29 ವರ್ಷದಿಂದ ಗುತ್ತಿಗೆದಾರರಾಗಿದ್ದವರು ಇಲ್ಲಿದ್ದಾರೆ. 29 ವರ್ಷದಿಂದ ಯಾರು ಆಡಳಿತ ಮಾಡಿದ್ದರು? ಕಾಂಗ್ರೆಸ್ ಪಕ್ಷದ ಆಡಳಿತ ಇತ್ತಲ್ಲವೇ? ಇಲ್ಲಿ ಹಲವು ದಶಕಗಳಿಂದ ಇದ್ದ ಅಧಿಕಾರಿಗಳಿದ್ದಾರೆ. ಅವರಿಗೆಲ್ಲ ತರಬೇತಿ ನೀಡಿದವರು ನೀವೇ ತಾನೇ? ನಿಮ್ಮ ಯೂನಿವರ್ಸಿಟಿಯಲ್ಲಿ ಈ ಕಂಟ್ರಾಕ್ಟರ್‍ಗಳು, ಇಂಜಿನಿಯರ್‍ಗಳು ಓದಿದ್ದಾರೆ. ಅಲ್ಲೇ ಪದವಿ, ಪಿ.ಎಚ್.ಡಿ. ಪಡೆದವರು. ಎಲ್ಲ ನಿಮ್ಮ ಯೂನಿವರ್ಸಿಟಿಯಲ್ಲೇ ಇರುವಾಗ ಈಗ ಕಳಪೆ ಎಂದರೆ ಹೇಗೆ ಎಂದರು.

ಎಲ್ಲ ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮ ಲೆಕ್ಕದಲ್ಲಿ ಕಳ್ಳರು. ಹೊಸ ಸರಕಾರ ಬಂದ ಮೇಲೆ ನೀವೆಲ್ಲ ಸತ್ಯ ಹರಿಶ್ಚಂದ್ರರಾ? ಇಂಜಿನಿಯರ್, ವೈದ್ಯರು ಸೇರಿ ಎಲ್ಲ ವೃತ್ತಿಯಲ್ಲೂ ಸಣ್ಣ ಪ್ರಮಾಣದ ಕಳ್ಳರಿರುತ್ತಾರೆ. ಶೇ 5ರಿಂದ 10 ಜನ ಇದ್ದಾರು. ಅವರನ್ನು ನೋಡಿ ತನಿಖೆಗೆ ಒಳಪಡಿಸಿ. ಎಲ್ಲ ಕಂಟ್ರಾಕ್ಟರ್‍ಗಳ ವಿರುದ್ಧ ಕಳ್ಳರೆಂಬ ಪದ ಬಳಕೆ ಎಷ್ಟು ಸರಿ ಎಂದರು. ಇವರೆಲ್ಲ ಕಳ್ಳರಾದರೆ ನೀವೇನು ದರೋಡೆಕೋರರೇ ಎಂದು ಪ್ರಶ್ನಿಸಿದರು.

ನೀವೇನು ಸತ್ಯಹರಿಶ್ಚಂದ್ರರೇ?

ಹೊಸ ಸರಕಾರ ಬಂದಾಗ 6 ತಿಂಗಳು ವಿರೋಧ ಪಕ್ಷ, ಜನರು ಮಾತನಾಡುವುದಿಲ್ಲ. ಮಾಧ್ಯಮದವರು ಅವರ ತಂಟೆಗೆ ಹೋಗುವುದಿಲ್ಲ. ಇಲ್ಲಿ ಬಂದು ಎರಡೇ ತಿಂಗಳಿಗೆ ಹಗರಣಗಳೇ (ಸ್ಕ್ಯಾಂಡಲ್) ಹೆಚ್ಚುತ್ತಿದೆ. ದಿನನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಟೀಕಿಸಿದರು. ಹಲವು ಸಚಿವರ ವಿರುದ್ಧ ಕಮಿಷನ್ ಆರೋಪ ಬಂದಿದೆ ಎಂದು ಅಶೋಕ್ ಆಕ್ಷೇಪಿಸಿದರು. ನೀವೇನು ಸತ್ಯಹರಿಶ್ಚಂದ್ರರೇ? 2013ರಿಂದ ತನಿಖೆ ನಡೆಸಿ ಎಂದು ಸವಾಲೆಸೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+