ಚುನಾವಣೆಗೂ ಮುನ್ನ ಸಿಎಂ ಬಗ್ಗೆ ಚರ್ಚೆ; ಈ ಬಾರಿ ಬಿಜೆಪಿಯಿಂದ ಕಿರಿಯ ವಯಸ್ಸಿನ ಲಿಂಗಾಯತ ಮುಖಂಡನೇ ಸಿಎಂ: ಬೆಲ್ಲದ್
ಧಾರವಾಡ, ಏಪ್ರಿಲ್17: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಈ ಬಾರಿ ರಾಜ್ಯದ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿರುವ ರಾಜಕೀಯ ಪಕ್ಷಗಳು ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದ್ದು, ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿಯಲ್ಲಿಯೂ ಮುಖ್ಯಮಂತ್ರಿ ವಿಚಾರ ಮತ್ತೆ ಚರ್ಚೆಯಾಗುತ್ತಿದೆ.
ಈ ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿದ್ ಅರವಿಂದ್ ಬೆಲ್ಲದ್ ಅವರು ಇದೀಗ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ವಿಚಾರವನ್ನ ಪ್ರಸ್ತಾಪಿಸಿರುವುದು ಕುತೂಗಲಕ್ಕೆ ಕಾರಣವಾಗಿದೆ.

ಈ ಕುರಿತು ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿ, ಈ ಬಾರಿ ಬಿಜೆಪಿಯಿಂದ ಲಿಂಗಾಯತ ಸಮುದಾಯದ ಕಿರಿಯ ವಯಸ್ಸಿನವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲಕಾರಿ ಸಂಗತಿಯ ಹೇಳಿಕೆಯನ್ನ ನೀಡಿದ್ದು, ಇದೀಗ ಅರವಿಂದ್ ಬೆಲ್ಲದ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಈ ಬಾರಿ ಚಿಕ್ಕ ವಯಸ್ಸಿನವರು ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬಹುದು. ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಮುಖ್ಯಮಂತ್ರಿ ಆಗಲಿದ್ದಾರೆ. ಈ ಬಾರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಬದಲಿಗೆ ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕುತೂಹಲಕಾರಿಯ ಹೇಳಿಕೆಯನ್ನ ನೀಡಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷ ಬಿಡುವುದರಿಂದ ಯಾವ ರೀತಿಯಲ್ಲೂ ಬಿಜೆಪಿ ಮೇಲೆ ಪರಿಣಾಮ ಬೀಳುವುದಿಲ್ಲ. ಟಿಕೆಟ್ ಸಿಗದ್ದಕ್ಕೆ ಜಗದೀಶ್ ಶೆಟ್ಟರ್ ಅವರು ಅಸಮಾಧಾನಗೊಂಡು ಬಿಜೆಪಿ ತೊರೆಯಲು ಮುಂದಾದಾಗ ನಮ್ಮ ಪಕ್ಷದ ವರಿಷ್ಠರು ಶೆಟ್ಟರ್ ಅವರೊಂದಿಗೆ ಚರ್ಚೆ ಮಾಡಿದ್ದರು. ಈ ಬಾರಿ ಬಿಜೆಪಿ ಸರ್ಕಾರದಲ್ಲಿ ಕಿರಿಯ ವಯಸ್ಸಿನವರು ಮುಖ್ಯಮಂತ್ರಿಯಾಗಲಿದ್ದಾರೆ. ಅವರ ಸಚಿವ ಸಂಪುಟದಲ್ಲಿ ನೀವು ಸಚಿವರಾಗಿರುವುದು ಅಷ್ಟೊಂದು ಸರಿಯಲ್ಲ ಎಂದು ಹೇಳಿದ್ದರು. ಆದರೂ ಶೆಟ್ಟರ್ ಒಪ್ಪಲಿಲ್ಲ ಎಂದು ಹೇಳಿದರು.
ರಾಜಕೀಯದ ನಂತರ ಜಗದೀಶ್ ಶೆಟ್ಟರ್ ಅವರು, ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ ಪಕ್ಷ ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೆವು. ಇದು ಪಕ್ಷಕ್ಕೆ ಬಹಳ ದುಃಖದ ಸಂಗತಿ. ಹಾಗಂತ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದ ಅವರು, ಬಿಜೆಪಿ ಪಕ್ಷ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಿರಿಯರೊಬ್ಬರು ಮನೆ ತೊರೆದಿದ್ದಕ್ಕೆ ಬೇಜಾರಾಗಿದೆ. ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೇವೆ ಎಂದರೂ ಶೆಟ್ಟರ್ ಕೇಳಲಿಲ್ಲ ಎಂದು ಕೇಂದ್ರ ನಾಯಕರು ಕೊಟ್ಟ ಅಫರ್ ಕುರಿತು ಮಾಹಿತಿ ತಿಳಿಸಿದರು.
ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇ ಭಾರತೀಯ ಜನಾತ ಪಾರ್ಟಿ. ಬಿಜೆಪಿ 67 ಸೀಟುಗಳನ್ನು ಲಿಂಗಾಯತರಿಗೆ ಕೊಟ್ಟಿದೆ. ರಾಜ್ಯದ ಜನತೆಗೆ ಗೊತ್ತಿದೆ. ಬಿಜೆಪಿ ಪಕ್ಷದಲ್ಲಿ ಲಿಂಗಾಯತರಿಗೆ ಮಾನ್ಯತೆ ಕೊಟ್ಟಿದೆ. ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರನ್ನು ಮೂಲೆಗುಂಪು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ಹಿರಿಯ ನಾಯಕರಾಗಿದ್ದರು. ವಕೀಲರಾಗಿದ್ದ ಅವರಿಗೆ ಬಿಜೆಪಿ ಪಕ್ಷ ಕರೆದು ಟಿಕೆಟ್ ನೀಡಿ, ಶಾಸಕರನ್ನಾಗಿ ಮಾಡಿತ್ತು. ಜೊತೆಗೆ ಮಂತ್ರಿಯನ್ನಾಗಿ ಮಾಡಿ ಕೊನೆಗೆ ಮುಖ್ಯಮಂತ್ರಿಯನ್ನಾಗಿಯೂ ಬಿಜೆಪಿ ಪಕ್ಷ ಮಾಡಿತ್ತು. ಆದರೆ, ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದು ನಮಗೆ ಬಹಳ ನೋವಾಗಿದೆ ಎಂದು ಹೇಳಿದರು.
ಶೆಟ್ಟರ್ ಸಾಮಾನ್ಯ ಕಾರ್ಯಕರ್ತರಾದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು ಬಿಜೆಪಿ. ಎಲ್ಲ ಸ್ಥಾನಮಾನಗಳನ್ನು ಅಲಂಕರಿಸಿ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದು ಕಾರ್ಯಕರ್ತರಿಗೆ ಬಹಳ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications