
ಎಸ್.ಸಿ.ಎಸ್.ಪಿ, ಹಾಗೂ ಟಿ.ಎಸ್.ಪಿ ಯೋಜನೆ ಸಮರ್ಪಕ ಅನುಷ್ಠಾನ: ಕೋಟ ಶ್ರೀನಿವಾಸ್ ಪೂಜಾರಿ
ಬೆಂಗಳೂರು, ಡಿಸೆಂಬರ್ 3: ಎಸ್.ಸಿ.ಎಸ್.ಪಿ, ಹಾಗೂ ಟಿ.ಎಸ್.ಪಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಈ ಕುರಿತು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು 35 ಇಲಾಖೆಗಳ ನೋಡಲ್ ಏಜೆನ್ಸಿ ಸಭೆ ನಡೆಸಲಾಗಿದ್ದು, ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆ ಹಾಗೂ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದಿದ್ದಾರೆ.
ಈ ಹಿಂದಿನ ವರ್ಷಗಳಂತೆ 2022-23ನೇ ಸಾಲಿನಲ್ಲಿ ಸಹ ಪ್ರಗತಿಸಾಧಿಸಲಾಗಿದೆ. ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅನುದಾನವನ್ನು ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಉಪಯೋಗಿಸುತ್ತಿದ್ದು ಪ್ರಗತಿಯಲ್ಲಿ ಹಿನ್ನಡೆ ಆಗಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
2022-223ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಅಡಿ ವಿವಿಧ ಇಲಾಖೆಗಳಿಗೆ ಒಟ್ಟು ರೂ.20843.03 ಕೋಟಿ ಹಂಚಿಕೆ ಮಾಡಿದ್ದು, ದಿನಾಂಕ:29.11.2022 ರವರೆಗೆ ರೂ.9298.54 ಕೋಟಿ (ಶೇ.45%) ಪ್ರಗತಿಯಾಗಿರುತ್ತದೆ. ಟಿ.ಎಸ್.ಪಿ ಅಡಿಯಲ್ಲಿ ರೂ.8322.78 ಕೋಟಿ ಹಂಚಿಕೆಯಾಗಿದ್ದು, ರೂ.2928.46 ಕೋಟಿ (ಶೇ.35%) ಪ್ರಗತಿಯಾಗಿರುತ್ತದೆ. ಒಟ್ಟಾರೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅಡಿ ಹಂಚಿಕೆಯಾಗಿರುವ ರೂ.29,165.81 ಕೋಟಿಗಳಲ್ಲಿ ರೂ.12,227 ಕೋಟಿ ವೆಚ್ಚವಾಗಿದ್ದು ಶೇ.42% ಪ್ರಗತಿ ಸಾಧಿಸಲಾಗಿದೆ. ಬಿಡುಗಡೆಗೆ ಹೋಲಿಸಿದ್ದಲ್ಲಿ ಶೇ.89% ಪ್ರಗತಿಯಾಗುತ್ತದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ನೋಡಲ್ ಏಜೆನ್ಸಿ ಸಭೆಯನ್ನು ನಡೆಸುತ್ತಿದ್ದು, ಅನುಷ್ಠಾನಾಧಿಕಾರಿಗಳಾದ 35 ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಲಾಗುತ್ತದೆ. ಅಲ್ಲದೇ, ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಸಾಮಾಜಿಕ ಪರಿಶೋಧನೆ ಮತ್ತು ಮೌಲ್ಯಮಾಪನವನ್ನು ಸಹ ಮಾಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಸರ್ಕಾರವು ಬದ್ದವಾಗಿದ್ದು, ಕಾರ್ಯಕ್ರಮಗಳ ಅನುಷ್ಟಾನದಲ್ಲಿ ವಿಳಂಬ ಅಥವಾ ನಿರ್ಲಕ್ಷವನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.