ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಸಚಿವರು ವೈಯಕ್ತಿಕ ನಿಂದನೆ ಬಿಟ್ಟು, ತಮ್ಮ ಘನತೆ ಕಾಪಾಡಿಕೊಳ್ಳಲಿ: ಬರಗೂರು

|
Google Oneindia Kannada News

ಬೆಂಗಳೂರು, ಮೇ 24: ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ವಿವಾದ ತಾಕಕ್ಕೆರುತ್ತಿದೆ. ಶಿಕ್ಷಣ ಇಲಾಖೆ ರೋಹಿತ್ ಚಕ್ರತೀರ್ಥ ಸಮಿತಿಯನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಿತ್ತು. ಪಠ್ಯದಲ್ಲಿ ಪ್ರಮುಖವಾಗಿ 6 ರಿಂದ 10ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಬದಲಾವಣೆಯನ್ನು ಮಾಡಿದ್ದರು. ಶಿಕ್ಷಣ ಸಚಿವರು ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದರು. ಇದೀಗ ತಮ್ಮ ಮೇಲಿನ ಟೀಕೆಗಳಿಗೆ ಸಾಹಿತಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಸಮಿತಿ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ, ಸ್ಪಷ್ಟನೆ ನೀಡಿದ್ದಾರೆ.

ಸಚಿವರ ತಪ್ಪು ಮಾಹಿತಿ, ಸತ್ಯದ ಸ್ಪಷ್ಟತೆ

ಶಿಕ್ಷಣ ಸಚಿವ ಬಿಸಿ ನಾಗೇಶ್‌ರವರು ಮೇ23 ರಂದು ಸುದ್ದಿಗೋಷ್ಠಿಯನ್ನು ನಡೆಸಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದರು. ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಪಠ್ಯ ಸಮಿತಿಯ ನೇತೃತ್ವ ವಹಿಸಿದ್ದ ಬರಗೂರು ರಾಮಚಂದ್ರಪ್ಪನವರು ಸಹ ಹಿಂದೂ ಸಮಾಜಕ್ಕೆ ಸೇರಿದ ಸತ್ಯದ ವಿಚಾರವನ್ನು ಕಡಿತಗೊಳಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ನೀಡಿದ್ದರು. ಇದಕ್ಕಾಗಿಯೇ ಬರಗೂರು ರಾಮಚಂದ್ರ ಸ್ಪಷ್ಟನೆಯನ್ನು ನೀಡಿದ್ದಾರೆ.

"ನನ್ನ ಸವಾಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕಗಳ ಪರಿಷ್ಕರಣೆ ನಡೆದಾಗ ಕುವೆಂಪು , ಗಾಂಧಿ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ , ಕೆಂಪೇಗೌಡರ ಪಠ್ಯವಿಷಯಗಳನ್ನು ಕೈ ಬಿಟ್ಟಿರುವುದಾಗಿ ಮಾನ್ಯ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರು ಹೇಳಿದ್ದಾರೆ. ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿ. ಕುವೆಂಪುರವರ ರಚನೆಗಳು 10 ಮತ್ತು 7 ನೇ ತರಗತಿಯ ಪಠ್ಯಪುಸ್ತಕದಲ್ಲಿವೆ. ಖಂಡಿತ ಕೈಬಿಟ್ಟಿಲ್ಲ. ಪ್ರೌಢಶಾಲೆ ಹಂತಯಲ್ಲಿ ಇದ್ದ ಕುವೆಂಪುರವರ ಭರತ ಭೂಮಿ ನಮ್ಮ ತಾಯಿ ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಟಿಯಿಂದ ಏಳನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದೆವು ಅಷ್ಟೇ," ಎಂದು ಬರಗೂರು ಸ್ಪಷ್ಟಪಡಿಸಿದ್ದಾರೆ.

Karnataka Text Book Row : Text Book Committee Chief Baraguru Ramachandrappa Clarification

ಇನ್ನು 7ನೇ ತರಗತಿ ಭಾಗ -2 ಮತ್ತು 10ನೇ ತರಗತಿ ಭಾಗ -2 ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಗಾಂಧಿಯವರ ಬಗ್ಗೆ ಸಾಕಷ್ಟು ವಿವರಗಳಿವೆ. ಸಮಾಜ ವಿಜ್ಞಾನದ 8ನೇ ತರಗತಿ ಭಾಗ -1 ಮತ್ತು 10ನೇ ತರಗತಿ ಭಾಗ -2ರಲ್ಲಿ ಡಾ. ಅಂಬೇಡ್ಕರ್ ಪಾಠಗಳಿವೆ. 9ನೇ ತರಗತಿಯಲ್ಲಿ ನಮ್ಮ ಸಂವಿಧಾನ ಎಂಬ ಪಾಠವಿದ್ದು ಅಲ್ಲಿಯೂ ಅಂಬೇಡ್ಕರ್ ಕುರಿತಾದ ವಿವರಗಳಿವೆ. ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆೆ ಸಮಾಜ ವಿಜ್ಞಾನದ 6ನೇ ತರಗತಿ ಭಾಗ -2 ಮತ್ತು ಹತ್ತನೇ ತರಗತಿಯ ಭಾಗ 1ರಲ್ಲಿ ಪಾಠಗಳಿವೆ. ಜೊತೆಗೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಐದನೇ ತರಗತಿಯ ಕನ್ನಡ ಪಠ್ಯದಲ್ಲಿ ಪಾಠವನ್ನು ಸೇರಿಸಲಾಗಿದೆ.

ಮದಕರಿ ನಾಯಕರವರ ಬಗ್ಗೆ ಪಾಠವನ್ನು ಕೈ ಬಿಟ್ಟಿಲ್ಲ. ಮದಕರಿ ನಾಯಕನ ಜೊತೆ ಸುರಪುರ ಸಂಸ್ಥಾನದ ಬಗ್ಗೆಯು ಸೇರಿಸಿ ಪ್ರಕಟಿಸಲಾಗಿದೆ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ವಿವರಗಳು ಇಲ್ಲ ಎಂಬುದು ಕೂಡ ತಪ್ಪು ಮಾಹಿತಿ. ಯಲಹಂಕ ನಾಡಪ್ರಭುಗಳ ಬಗ್ಗೆ ಪ್ರತ್ಯೇಕ ವಿವರಗಳಿದ್ದೂ ಬೆಂಗಳೂರು ನಿರ್ಮಾತೃ ಇಮ್ಮಡಿ ಕೆಂಪೇಗೌಡರ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ನೀಡಲಾಗಿದೆ. ಇದಿಷ್ಟು ಪಾಠಗಳು ಸಮಾಜ ವಿಜ್ಞಾನ 7ನೇ ತರಗತಿ ಭಾಗ ಒಂದರ ಪಠ್ಯಪುಸ್ತಕದಲ್ಲಿದೆ. 7ನೇ ತರಗತಿ ಭಾಗ 2ರ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ರಾಣಿ ಅಬ್ಬಕ್ಕ ಕುರಿತ ವಿವರಗಳಿವೆ ಎಂದು ಬರಗೂರು ವಿವರಿಸಿದ್ದಾರೆ.

"7ನೇ ತರಗತಿ ಭಾಗ 1ರ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೈಸೂರು ಒಡೆಯರು ಎಂಬ ಪ್ರತ್ಯೇಕ ಅಧ್ಯಾಯವೇ ಇದೆ. ಸಚಿವರು ಹೇಳಿದಂತೆ ಇದರಲ್ಲಿ ಕಡಿಮೆ ವಿವರಣೆಗಳಿದ್ದವು ಎನಿಸಿದ್ದರೆ ಪಠ್ಯಮರುಪರಿಷ್ಕರಣೆ ವೇಳೆ ವಿಸ್ತರಿಸಬಹುದಿತ್ತಲ್ಲ. ಟಿಪ್ಪುವನ್ನು ಒಳಗೊಂಡಂತೆ ನಮ್ಮ ಸಮಾಜವಿಜ್ಞಾನ ಪಠ್ಯಪುಸ್ತಕ ಸಮಿತಿಯವರು ಆಧಾರವಿಲ್ಲದೇ ಏನನ್ನು ಸೇರಿಸಿಲ್ಲ. ಟಿಪ್ಪು , ಸಾವರ್ಕರ್ ಒಳಗೊಂಡಂತೆ ಯಾರ ಬಗ್ಗೆಯೂ ನಕರಾತ್ಮಕ ವಿಷಯವನ್ನು ಹೇಳದೆ ನಡೆದ ಘಟನೆಗಳ ವಾಸ್ತವ ಮಾಹಿತಿಯನ್ನಷ್ಟೇ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಹಂತದ ಮಕ್ಕಳಿಗೆ ಪರ ಮತ್ತು ವಿರೋಧದ ಚರ್ಚೆಗಳ ಬದಲು ಮಾಹಿತಿ ಒದಗಿಸುವ ವಿಷಯವೇ ಮುಖ್ಯವೆಂದು ಭಾವಿಸಲಾಗಿದೆ," ಎಂದು ಹೇಳಿದ್ದಾರೆ.

Karnataka Text Book Row : Text Book Committee Chief Baraguru Ramachandrappa Clarification

ಇಷ್ಟಕ್ಕೂ ಎಲ್ಲಾ ಪಠ್ಯಪುಸ್ತಕಗಳನ್ನು ನಾನೊಬ್ಬನೇ ಬರೆದಂತೆ ಬಿಂಬಿಸಿ ಟೀಕೆಯನ್ನು ಮಾಡಲಾಗುತ್ತಿದೆ. ವಾಸ್ತವವಾಗಿ ಆಗ 27 ಸಮಿತಿಗಳಿದ್ದವು. 117 ಜನ ತಜ್ಞರು ಪ್ರಾಧ್ಯಾಪಕರು ಈ ಸಮಿತಿಯಲ್ಲಿದ್ದರು. 27 ಸಮಿತಿಗಳಿಗೂ ಒಬ್ಬೊಬ್ಬರು ಅಧ್ಯಕ್ಷರು ಇದ್ದರು. ಈ ಸಮಿತಿಗಳ ಆಚೆಗೂ ನಾವು ಪ್ರಾಧ್ಯಾಪಕರುಗಳ ಸಂಘದ ಜೊತೆ , ಡಯಟ್ ಪ್ರಾಂಶುಪಾಲರು, ವಿಷಯ ಪರೀಕ್ಷಕರು ಮತ್ತು ಎಲ್ಲಪಠ್ಯ ಪರಿಣಿತರ ಜೊತೆ ಮುವತ್ತಕ್ಕೂ ಹೆಚ್ಚು ಸಭೆ ನಡೆಸಿ ಸಲಹೆಯನ್ನು ಪಡೆದುಕೊಂಡಿದ್ದೇನೆ. ಅನಂತರವೇ ಪರಿಷ್ಕರಣೆ ಮಾಡಲಾಗಿದೆ. ಇಷ್ಟಾಗಿಯೂ ಅರಿವಿಲ್ಲದ ಮಾಹಿತಿ ಕೊರತೆ ಮತ್ತು ದೋಷಗಳು ಉಳಿದಿದ್ದರೆ, ಮುಂದೆ ಮರುಪರಿಷ್ಕರಿಸಬಹುದು ಎಂದು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ.

ಆದರೆ ನನಗಿಂತ ಹಿಂದೆ ಪಠ್ಯಪುಸ್ತಕ ರಚನೆ ಮಾಡಿದ ಬಗ್ಗೆ ಒಂದೇ ಒಂದು ಟೀಕೆಯನ್ನು ಮಾಡಿಲ್ಲ. ವೈಯಕ್ತಿಕ ನಿಂದನೆಯನ್ನು ಕನ್ನಡ ಸಂವೇದನೆ ನನಗೆ ಕಲಿಸಿಲ್ಲ. ಮಾನ್ಯ ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಘನತೆಯನ್ನು ಕಾಪಾಡಲಿ ಎಂದು ಬರಗೂರು ಹೇಳಿದ್ದಾರೆ.

English summary
Karnataka Text Book Row : Former Text Book Committee Chief Baraguru Ramachandrappa Clarification to text book revision controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X