ಕನ್ನಡಿಗರು ಈ ಕೆಲಸ ಮಾಡೋದು ಕಡಿಮೆ; ಅದಕ್ಕೆ ಐಟಿ - ಬಿಟಿಯಲ್ಲಿ ಹಿನ್ನಡೆ ಎಂದ ಟೆಕ್ಕಿ, ಕನ್ನಡಿಗರಷ್ಟೇ ಮರಾಠಿಗರಿಗೂ ಸಂಕಷ್ಟ!
ಐಟಿ - ಬಿಟಿ ಕಂಪನಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿರುವ ವಿಷಯ ಚರ್ಚೆ ಆಗುತ್ತಿರುವಾಗಲೇ ಕನ್ನಡಿಗರು ಗ್ರೂಪಿಸಂ ಮಾಡದೆ ಇರುವುದೇ ಸಮಸ್ಯೆಗೆ ಕಾರಣ ಎಂದು ಐಟಿ ಉದ್ಯೋಗಿಯೊಬ್ಬರು ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಐಟಿ - ಬಿಟಿಯಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗ ಉದ್ಯೋಗಿಗಳಿಗೆ ಉದ್ಯೋಗ ಹಾಗೂ ಪ್ರಮೋಷನ್ ಕೊಡುವ ವಿಚಾರದಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎನ್ನುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.
ಐಟಿ ಬಿಟಿಯಲ್ಲಿ ಕನ್ನಡಿಗರ ಕಡೆಗಣನೆ ಹಾಗೂ ರೆಸ್ಯೂಮೆ ವಿಚಾರವು ಇದೀಗ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಹಲವು ಗಂಭೀರ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬಂದಿದೆ.

ಮನ್ನನ್ ಪಠಾಣ್ (@mannan_pathan) ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಾನು ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಗುರ್‌ಗಾಂವ್ ಪ್ರದೇಶಗಳಲ್ಲಿ ಕೆಲಸ ಮಾಡಿದ್ದೇನೆ. ಐಟಿ ಉದ್ಯಮದಲ್ಲಿ ನಾನು ಹಿಂದೂ - ಮುಸ್ಲಿಂ ತಾರತಮ್ಯವನ್ನು ಎದುರಿಸಿಲ್ಲ. ದೇವರಿಗೆ ಧನ್ಯವಾದಗಳು. ಆದರೆ ಹೌದು, ನಾನು ಪ್ರಾದೇಶಿಕವಾಗಿ ಮತ್ತು ಭಾಷಾವಾರು ತಾರತಮ್ಯವನ್ನು ನೋಡಿದ್ದೇನೆ. ವಿಶೇಷವಾಗಿ ಮುಂಬೈ ಮತ್ತು ಬೆಂಗಳೂರಿನಲ್ಲಿ.
ದುರದೃಷ್ಟವಶಾತ್ ಕನ್ನಡಿಗರು ಯಾವಾಗಲೂ ಇದನ್ನು ಎದುರಿಸುತ್ತಾರೆ. ಮರಾಠಿ, ತಮಿಳು ಮತ್ತು ಮಲಯಾಳಿಗಳಲ್ಲಿ ಗುಂಪುಗಾರಿಕೆ / ಗ್ರೂಪಿಸಂ ತುಂಬಾ ಹೆಚ್ಚಾಗಿದೆ. ಕನ್ನಡಿಗರು ಎಂದಿಗೂ ಗುಂಪುಗಾರಿಕೆ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರೀತಿ ಎನ್ನುವವರು, ಕನ್ನಡಿಗರಿಗೆ ಅವಕಾಶಗಳನ್ನು ನೀಡದಿರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ನಾನು ವೈಯಕ್ತಿಕವಾಗಿ ದೃಢೀಕರಿಸಬಲ್ಲೆ. ನಾನು ಮತ್ತು ನನ್ನ ತಂದೆ ಒಂದು ಆ್ಯಪ್ ಮೂಲಕ ಆಸ್ಪತ್ರೆಗೆ ಆಟೋ ಹತ್ತಿದೆವು. ತಲುಪಬೇಕಾದ ಸ್ಥಳದ ಬಗ್ಗೆ ಖಚಿತಪಡಿಸಲು ಚಾಲಕ ಹಿಂದಿಯಲ್ಲಿ ವಿವರವಾಗಿ ನಮ್ಮೊಂದಿಗೆ ಮಾತನಾಡಿದರು.
ಆಟೋದಲ್ಲಿ ಪ್ರಯಾಣ ಮಾಡುವಾಗ ನನ್ನ ತಂದೆ ಮತ್ತು ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೆವು. ತಂದೆ ಒಂದು ಶಾರ್ಟ್ ಕಟ್‌ರೂಟ್‌ನ ಬಗ್ಗೆ ಹೇಳುತ್ತಿದ್ದರು, ಅದಕ್ಕೆ ಆಟೋ ಚಾಲಕ ನೀವು ಹೋಗಬೇಕು ಎನ್ನುವ ಶಾರ್ಟ್‌ಕಟ್‌ಗಿಂತಲೂ ಈ ಮಾರ್ಗದ ಮೂಲಕ ತುಂಬಾ ಬೇಗ ಹೋಗಬಹುದು ಎಂದು ಹೇಳಿದರು. ಅವರ ಪ್ರೊಫೈಲ್ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಪಟ್ಟಿ ಮಾಡಿದ್ದರೆ ಅವರಿಗೆ ಕನ್ನಡದಲ್ಲಿ ಮಾತನಾಡಲು ಹೇಗೆ ಗೊತ್ತು ಎಂದು ನಾವು ಅವರನ್ನು ಕೇಳಿದ್ವಿ. ಅವರು, "ನಾನು ಕನ್ನಡ ಭಾಷೆಯನ್ನು ಉಲ್ಲೇಖಿಸಿದರೆ, ಅವರು ನನ್ನ ಆಟೋವನ್ನು ಬುಕ್ ಮಾಡುವುದಿಲ್ಲ' ಎಂದು ಹೇಳಿದರು.
ಇದು ಕಂಪನಿ ಮಟ್ಟದಲ್ಲಿ ಮಾತ್ರ ಸಮಸ್ಯೆಯಲ್ಲ. ಈ ಬೆಳೆಯುತ್ತಿರುವ ಪ್ರವೃತ್ತಿಯನ್ನು ನಮ್ಮ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅರಿತುಕೊಂಡಿದ್ದಾರೆ ಎಂದು ನನಗೆ ಸಂತೋಷವಾಗಿದೆ ಅಂತ ಹೇಳಿದ್ದಾರೆ.
ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಬಗ್ಗೆ ಚರ್ಚೆ
ಇನ್ನು ಉದ್ಯಮಿ ಮೋಹನ್‌ದಾಸ್ ಪೈ ಅವರು, ಡಿ.ಕೆ ಶಿವಕುಮಾರ್ ಅವರೇ ದಯವಿಟ್ಟು ನಮ್ಮ ಯುವಕರಿಗೆ, ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಉನ್ನತ ಶಿಕ್ಷಣವನ್ನು ನೀಡಿ. GER ಕಡಿಮೆ, ಮೃದು ಕೌಶಲ್ಯಗಳು ಕಡಿಮೆ. ಅವರಿಗೆ ಉತ್ತಮ ತರಬೇತಿ ನೀಡಿ. ಸರ್ಕಾರಿ ಕಾಲೇಜುಗಳಲ್ಲಿ 60-70% ಕ್ಕಿಂತ ಹೆಚ್ಚು ಅಧ್ಯಾಪಕರು ಅತಿಥಿ ಅಧ್ಯಾಪಕರಾಗಿದ್ದಾರೆ ಎಂದು ವರದಿಯಾಗಿದೆ.
ದಯವಿಟ್ಟು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಶಾಶ್ವತ ಅಧ್ಯಾಪಕರನ್ನು ನೇಮಿಸಿ, ಸಂಶೋಧನೆಗೆ ಹಣಕಾಸು ಒದಗಿಸಿ. AI ಸಮಯದಲ್ಲಿ ಹೆಚ್ಚು ಕೌಶಲ್ಯಪೂರ್ಣ ಜನರನ್ನು ಸೃಷ್ಟಿಸುವ ಮಾರ್ಗ ಅದು ಅಂತ ಹೇಳಿದ್ದಾರೆ. ಐಟಿ - ಬಿಟಿಯಲ್ಲಿ ಕನ್ನಡ ಕಡೆಗಣನೆ ಮಾಡಿದರೆ ಸಹಿಸುವುದಿಲ್ಲ ಎನ್ನುವ ಡಿ.ಕೆ ಶಿವಕುಮಾರ್ ಅವರ ಪೋಸ್ಟ್‌ಗೆ ಪ್ರತ್ಯುತ್ತರವಾಗಿ ಪೈ ಅವರು ಈ ಟ್ವೀಟ್ ಮಾಡಿದ್ದಾರೆ.


Click it and Unblock the Notifications
