ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕ ಸಮುದಾಯದಿಂದ "ಗಾಂಧಿಗಿರಿ" ಅಭಿಯಾನಕ್ಕೆ ಚಾಲನೆ!

|
Google Oneindia Kannada News

ಬೆಂಗಳೂರು, ಮೇ. 20: "ಕೊರೊನಾ ಸಂಕಷ್ಟಕ್ಕೆ ನಲುಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ ನ್ಯಾಯ ಒದಗಿಸಿ. ಇಲ್ಲವೇ ನೀವೆಲ್ಲರೂ ರಾಜೀನಾಮೆ ನೀಡಿ ನಮ್ಮ ಹೋರಾಟಕ್ಕೆ ಧ್ವನಿಯಾಗಿ" ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಹದಿನೇಳು ಮಂದಿ ವಿಧಾನ ಪರಿಷತ್ ಸದಸ್ಯರ ವೈಯಕ್ತಿಕ ಮೊಬೈಲ್ ಸಂಖ್ಯೆಗಳಿಗೆ "ನ್ಯಾಯ ಕೊಡಿಸಿ ಇಲ್ಲವೇ ರಾಜೀನಾಮೆ ನೀಡಿ" ಸಂದೇಶ ರವಾನಿಸುವ ಅಭಿಯಾನಕ್ಕೆ ಶಿಕ್ಷಕ ಸಮುದಾಯ ಚಾಲನೆ ನೀಡಿದೆ.

ಶಿಕ್ಷಕರಿಗೆ ನಯಾಪೈಸೆ ಪರಿಹಾರ ಇಲ್ಲ

ಶಿಕ್ಷಕರಿಗೆ ನಯಾಪೈಸೆ ಪರಿಹಾರ ಇಲ್ಲ

ಕೊರೊನಾ ಸಂಕಷ್ಟದಿಂದ ನಲುಗಿರುವ ರಾಜ್ಯದ ಜನತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಆಟೋ ಚಾಲಕರಿಗೆ, ರೈತರಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ಗ್ರಾಮೀಣ ಭಾಗದ ಬಡವರಿಗಷ್ಟೇ ಈ ವಿಶೇಷ ಪ್ಯಾಕೇಜ್ ಸೀಮಿತವಾಗಿತ್ತು. ರಾಜ್ಯದಲ್ಲಿ ಕೊರೊನಾ ದಿಂದ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡು ಕೋವಿಡ್‌ಗೆ ಬಲಿಯಾದ ಶಿಕ್ಷಕರಿಗೆ ಪರಿಹಾರ ಘೋಷಣೆ ಮಾಡಬೇಕು. ಇದರ ಜತೆಗೆ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪರಿಹಾರ ನೀಡಬೇಕು ಎಂದು ಖಾಸಗಿ ಶಾಲಾ ಶಿಕ್ಷಕರು ಒತ್ತಾಯಿಸಿದ್ದರು. ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ ಸರ್ಕಾರ, ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ವೇಳೆ ನಯಾಪೈಸೆ ಪರಿಹಾರ ಕೂಡ ಘೋಷಣೆ ಮಾಡಲಿಲ್ಲ. ಹೀಗಾಗಿ ರಾಜ್ಯದಲ್ಲಿರುವ 3.5 ಲಕ್ಷ ಮಂದಿ ಶಿಕ್ಷಕ ಸಮುದಾಯ ಶಿಕ್ಷಕರ ಸಚಿವರ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಂಧಿಗಿರಿ ಅಭಿಯಾನ

ಗಾಂಧಿಗಿರಿ ಅಭಿಯಾನ

ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಶಿಕ್ಷಕರ ಕಷ್ಟವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸೋತಿದ್ದಾರೆ. ಕೂಡಲೇ ಅವರ ರಾಜೀನಾಮೆ ನೀಡಬೇಕು. ಇದರ ಜತೆಗೆ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಪರಿಹಾರ ಸಿಗಬೇಕು. ಈ ಎರಡು ಬೇಡಿಕೆ ಮುಂದಿಟ್ಟುಕೊಂಡು ಶಿಕ್ಷಕರೇ ಆನ್‌ಲೈನ್‌ನಲ್ಲಿ ಗಾಂಧಿಗಿರಿ ಹೋರಾಟ ಆರಂಭಿಸಿದ್ದಾರೆ. ಶಿಕ್ಷಕರು ಕೊರೊನಾ ದಿಂದ ಎದುರಿಸುತ್ತಿರುವ ಕಷ್ಟದ ಬಗ್ಗೆ ಸಂಕ್ಷಿಪ್ತ ವಿವರವುಳ್ಳ ಸಂದೇಶವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ರಾಜ್ಯದ ಹದಿನೇಳು ವಿಧಾನ ಪರಿಷತ್ ಸದಸ್ಯರಿಗೆ ಸಂದೇಶ ರವಾನಿಸುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಹದಿನೇಳು ವಿಧಾನ ಪರಿಷತ್ ಸದಸ್ಯರ ಮೊಬೈಲ್ ನಂಬರ್‌ಗಳನ್ನು ಶಿಕ್ಷಕರ ಬಳಗಗಳು ಹಂಚಿಕೊಂಡು ಸಂದೇಶ ರವಾನಿಸುತ್ತಿವೆ.

ಯಾರಿಗೆ ಸಂದೇಶ ರವಾನೆ

ಯಾರಿಗೆ ಸಂದೇಶ ರವಾನೆ

ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಚಿವ ಸಿ.ಪಿ. ಯೋಗೀಶ್ವರ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಬಿ. ಪಾಟೀಲ್, ಚಿದಾನಂದ ಎಂ. ಗೌಡ, ವೈ.ಎ. ನಾರಾಯಣಸ್ವಾಮಿ, ಕೆ. ಹರೀಶ್ ಕುಮಾರ್, ಕೆ.ಪಿ. ನಂಜುಂಡಿ, ಕೆ.ಟಿ. ಶ್ರೀಕಂಠೇಗೌಡ, ಮರಿತಿಪ್ಪೇಗೌಡ, ಎನ್. ರವಿಕುಮಾರ್, ನಿರಾಣಿ ಹನುಮಂತ ರುದ್ರಪ್ಪ, ಎಸ್. ಎಲ್. ಬೋಜೇಗೌಡ, ಎಸ್.ವಿ. ಸಂಕನೂರ, ಶಶೀಲ್ ಜಿ. ನಮೋಶಿ, ದೇವೇಗೌಡ ಅವರ ಮೊಬೈಲ್‌ಗಳಿಗೆ ಶಿಕ್ಷಕರು ತಮ್ಮ ವೈಯಕ್ತಿಕ ಕಷ್ಟಗಳ ಸಂದೇಶಗಳನ್ನು ರವಾನಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಕೊರೊನಾ ನಿರ್ಬಂಧ ಜಾರಿಯಲ್ಲಿರುವ ಕಾರಣ ಸಾಮಾಜಿಕ ಜಾಲ ತಾಣಗಳಿಗೆ ಈ ಹೋರಾಟವನ್ನು ಸೀಮಿತಗೊಳಿಸಲಾಗಿದೆ.

Recommended Video

ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರೋದು ಕಷ್ಟ ಏನು ಅಲ್ಲಾ !! | Oneindia Kannada
ಶಿಕ್ಷಕರ ಹೋರಾಟ

ಶಿಕ್ಷಕರ ಹೋರಾಟ

ಶಿಕ್ಷಕರನ್ನು ಹೋರಾಟ ಮಾಡಿ ಎಂದು ನಾನು ಪ್ರೇರಣೆ ನೀಡಿಲ್ಲ. ಶಿಕ್ಷಕರು ತುಂಬಾ ಕಷ್ಟದಲ್ಲಿದ್ದೀವಿ. ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಿ ಎಂದು ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅವರು ತಮ್ಮ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿಗಳಿಗೆ ಶಿಕ್ಷಕರ ಕಷ್ಟವನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕ ರಾಜ್ಯ ಇಂತಹ ಶಿಕ್ಷಣ ಸಚಿವರನ್ನು ಎಂದೂ ನೋಡಿಲ್ಲ. ಶಿಕ್ಷಕರು ಬೀದಿ ಬದಿ ತರಕಾರಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶಿಕ್ಷಕರೇ ಸ್ವಯಂ ಪ್ರೇರಿತವಾಗಿ ತಮ್ಮ ಕಷ್ಟಗಳನ್ನು ಶಿಕ್ಷಕ ಸಮುದಾಯವನ್ನು ಪ್ರತಿನಿಧಿಸಿರುವ ಜನ ನಾಯಕರಿಗೆ ಸಂದೇಶ ಕಳಿಸುವ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದಾರೆ. ಇದಕ್ಕೂ ಸರ್ಕಾರ ಸ್ಪಂದನೆ ಮಾಡಲಿಲ್ಲ ಎಂದರೆ ಬಹುದೊಡ್ಡ ಹೋರಾಟ ನಡೆಯಲಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
Private school teachers have launched the Gandhigiri campaign demanding a special package know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X