ಕರ್ನಾಟಕದಲ್ಲಿ 220 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ
ಬೆಂಗಳೂರು, ಮೇ 15: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ ಭಾರೀ ಬೇಡಿಕೆ ಇದೆ.
ಟಾಟಾ ಪವರ್ ತನ್ನ ಇವಿ ಚಾರ್ಜಿಂಗ್ ನೆಟ್‌ವರ್ಕ್ ಅಡಿಯಲ್ಲಿ ರಾಜ್ಯದಲ್ಲಿ 220 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡುತ್ತಿದೆ. ಮಂಗಳೂರು, ದಾವಣಗೆರೆ, ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಕಡೆ ಈ ಚಾರ್ಜಿಂಗ್ ಪಾಯಿಂಟ್ ಆರಂಭಗೊಂಡಿದೆ.

ಮಾಲಿನ್ಯ ರಹಿತ ವಾಹನ ಸಂಚಾರಕ್ಕೆ ಆದ್ಯತೆ ನೀಡುವ ಭಾಗವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ವಿವಿಧ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ಗೆ ಬೇಡಿಕೆ ಇದ್ದು, ಇದರ ಅನ್ವಯ ಚಾರ್ಜಿಂಗ್ ಪಾಯಿಂಟ್‌ಗಳು ಸ್ಥಾಪನೆಗೊಂಡಿವೆ.
ವಿಶೇಷತೆಗಳು: ಟಾಟಾ ಪವರ್ ಸ್ಥಾಪನೆ ಮಾಡಿರುವ ಎಲ್ಲಾ ಎಲ್ಲಾ ಚಾರ್ಜಿಂಗ್ ಪಾಯಿಂಟ್ ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಅನಗತ್ಯವಾದ ಕಿರಿಕಿರಿಯನ್ನು ತಪ್ಪಿಸುತ್ತದೆ. ಎಲ್ಲಾ ಪಾಯಿಂಟ್‌ಗಳು ಆರ್‌ಎಫ್ಐಡಿ ಕಾರ್ಡ್ ಪಾವತಿ ವ್ಯವಸ್ಥೆಯನ್ನು ಹೊಂದಿವೆ.
ಬೆಂಗಳೂರು, ಮಂಗಳೂರು, ದಾವಣಗೆರೆ ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಮುಖವಾಗಿ ಈ ಚಾರ್ಜಿಂಗ್ ಪಾಯಿಂಟ್‌ಗಳು ಸ್ಥಾಪನೆಯಾಗಿವೆ. ಪ್ರಮುಖವಾದ ಪ್ರವಾಸಿ ತಾಣಗಳಲ್ಲಿ ಸಹ ಪಾಯಿಂಟ್‌ಗಳಿವೆ.
ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಈಗ ಚಾರ್ಜಿಂಗ್ ಪಾಯಿಂಟ್‌ಗಳಿವೆ. ಬೆಂಗಳೂರು ಹೊರತುಪಡಿಸಿ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ನಗರದಲ್ಲಿ ಹೆಚ್ಚು ಪಾಯಿಂಟ್ ಸ್ಥಾಪಿಸಲಾಗಿದೆ.
ಸಾರ್ವಜನಿಕ ಪ್ರದೇಶದ ಪ್ರಮುಖ ಸ್ಥಳಗಳಾದ ಹೋಟೆಲ್, ಪಾರ್ಕ್, ಮಾಲ್ ಮುಂತಾದ ಕಡೆಯೂ ಚಾರ್ಜಿಂಗ್ ಪಾಯಿಂಟ್‌ಗಳಿದ್ದು, ವಾಹನ ಸವಾರರಿಗೆ ಅನುಕೂಲವಾಗಿದೆ.
ಕರ್ನಾಟಕ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಈ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ, ತೆರಿಗೆ ವಿನಾಯಿತಿ ಇರುವುದರಿಂದ ರಾಜ್ಯದಲ್ಲಿ ವಾಹನಗಳ ನೋಂದಣಿಯೂ ಹೆಚ್ಚಿದೆ. 2020-21 ಮತ್ತು 2023-24ನೇ ಅವಧಿಯಲ್ಲಿ ವಾಹನಗಳ ನೋಂದಣಿ ಶೇ 1,275ರಷ್ಟು ಏರಿಕೆ ಕಂಡಿದೆ.
ಮೊದಲು ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಜನರಿಗೆ ಆಸಕ್ತಿ ಇದ್ದರೂ ಸಹ ಚಾರ್ಜಿಂಗ್ ಸ್ಟೇಷನ್‌ಗಳ ಕುರಿತು ಗೊಂದಲವಿತ್ತು. ಈಗ ಸುಲಭವಾಗಿ ಚಾರ್ಜಿಂಗ್ ಸ್ಟೇಷನ್‌ಗಳು ಸಿಗುವುದರಿಂದ ಕಾರು, ಬೈಕ್‌ಗಳ ನೋಂದಣಿ ಏರಿಕೆ ಕಂಡಿದೆ.
ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಉತ್ತರ ಪ್ರದೇಶ ಪ್ರಥಮ, ಮಹಾರಾಷ್ಟ್ರ ದ್ವಿತೀಯ ಮತ್ತು ಕರ್ನಾಟಕ 3ನೇ ಸ್ಥಾನದಲ್ಲಿದೆ. 2017-18ರಲ್ಲಿ ರಾಜ್ಯದಲ್ಲಿ ನೋಂದಣಿಯಾದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 1922. 2023-24ರ ಮಾರ್ಚ್ ಅಂತ್ಯಕ್ಕೆ ಒಂದೇ ವರ್ಷ1,59,428 ವಾಹನಗಳ ನೋಂದಣಿಯಾಗಿದೆ.
ಕರ್ನಾಟಕ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ವಿದ್ಯುತ್ ಚಾಲಿನ ವಾಹನಗಳ ಖರೀದಿಗೆ (25 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಾಹನ ಹೊರತುಪಡಿಸಿ) ತೆರಿಗೆ ವಿನಾಯಿತಿ ನೀಡಲಾಗಿದೆ.
ಕೇಂದ್ರ ಸರ್ಕಾರ 2016ರಲ್ಲಿಯೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಎಲ್ಲಾ ಬಗೆಯ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಕರ್ನಾಟಕದಲ್ಲಿ ಇರುವ ಎಲೆಕ್ಟ್ರಿಕ್ ವಾಹನಗಳಲ್ಲಿ ಅತಿ ಹೆಚ್ಚು ವಾಹನಗಳು ಬೆಂಗಳೂರು ನಗರದಲ್ಲಿಯೇ ಇವೆ.
ರಾಜ್ಯದಲ್ಲಿ ನೋಂದಣಿಯಾಗಿರುವ ಎಲೆಕ್ಟ್ರಿಕ್ ವಾಹನಗಳಲ್ಲಿ ಬೈಕ್‌ಗಳೇ ಅಧಿಕ. 2017-18ರಲ್ಲಿ 1922 ವಾಹನಗಳಲ್ಲಿ 97 ಬೈಕ್, 1589 ತ್ರಿಚಕ್ರ ವಾಹನ, 236 4 ಚಕ್ರದ ವಾಹನಗಳಿದ್ದವು. ಈಗ ರಾಜ್ಯದಲ್ಲಿ ಸುಮಾರು 2.98 ಲಕ್ಷ ಬೈಕ್, 23,516 ನಾಲ್ಕು ಚಕ್ರದ ವಾಹನಗಳು, 18,246 ತ್ರಿಚಕ್ರ ವಾಹನಗಳಿವೆ.












Click it and Unblock the Notifications