ಕೊಲ್ಲೂರು ಸನ್ನಿಧಿಯಲ್ಲಿ ತಮಿಳುನಾಡು ಸಿಎಂ ವಿಜಯ್; ಎಂಜಿಆರ್, ಜಯಲಲಿತಾ ಹಾದಿಯಲ್ಲಿ ದೇವಿಗೆ ವಿಶೇಷ ಕಾಣಿಕೆ

ಉಡುಪಿ: ನಟ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಐತಿಹಾಸಿಕ ಶಕ್ತಿಪೀಠವಾದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕರ್ನಾಟಕಕ್ಕೆ ಅವರ ಮೊದಲ ಅಧಿಕೃತ ಭೇಟಿ ಇದಾಗಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಅಪರೂಪದ ಕಾಣಿಕೆಯೊಂದನ್ನು ಅರ್ಪಿಸಿದ್ದಾರೆ.

ವಿಜಯದ ಸಂಕೇತವಾಗಿ ವಿಶೇಷ ಕಾಣಿಕೆ

ರಾಜಕೀಯ ರಂಗದಲ್ಲಿ ಭರ್ಜರಿ ಜಯ ಸಾಧಿಸಿ ಮುಖ್ಯಮಂತ್ರಿ ಗದ್ದುಗೆ ಏರಿರುವ ಸಿಎಂ ವಿಜಯ್ ಅವರು, ತಮ್ಮ ಈ ಯಶಸ್ಸಿನ ಸ್ಮರಣಾರ್ಥ ಹಾಗೂ ವಿಜಯದ ಸಂಕೇತವಾಗಿ ಮೂಕಾಂಬಿಕಾ ದೇವಿಗೆ ವಿಶೇಷವಾದ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಆಕರ್ಷಕ ಖಡ್ಗವು ಬರೋಬ್ಬರಿ 1.6 ಕೆಜಿ ತೂಕ ಹೊಂದಿದ್ದು, ದೇವಸ್ಥಾನದ ಇತಿಹಾಸದಲ್ಲಿ ಇದೊಂದು ಅಪರೂಪದ ಹಾಗೂ ವಿಶೇಷ ಸಲ್ಲಿಕೆಯಾಗಿ ಗಮನ ಸೆಳೆದಿದೆ.

Tamil Nadu CM Vijay

ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ರಂಗದಿಂದ ಬಂದು ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ (ಎಂಜಿಆರ್‌) ಹಾಗೂ ಜೆ. ಜಯಲಲಿತಾ ಅವರು ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಭಕ್ತರಾಗಿದ್ದರು. ಜಯಲಲಿತಾ ಅವರು ಈ ಹಿಂದೆ ದೇವಿಗೆ ಚಿನ್ನದ ಕವಚವನ್ನು ಕಾಣಿಕೆಯಾಗಿ ನೀಡಿದ್ದರು. ಅವರ ಹಾದಿಯಲ್ಲೇ ನಡೆದಿರುವ ವಿಜಯ್, ಅಧಿಕಾರದಲ್ಲಿರುವಾಗಲೇ ಕೊಲ್ಲೂರಿಗೆ ಭೇಟಿ ನೀಡಿ ಖಡ್ಗ ಸಮರ್ಪಿಸಿರುವ ತಮಿಳುನಾಡಿನ ಪ್ರಮುಖ ನಾಯಕ ಎನಿಸಿಕೊಂಡಿದ್ದಾರೆ.

ವಿಜಯ್‌ಗೆ ಅದ್ಧೂರಿ ಸ್ವಾಗತ

ಚೆನ್ನೈನಿಂದ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ವಿಜಯ್‌, ನೇರವಾಗಿ ಕೊಲ್ಲೂರಿಗೆ ತೆರಳಿದರು. ದೇಗುಲದ ಮಹಾದ್ವಾರಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಗಳನ್ನು ಅರ್ಚಕ ವೃಂದದವರು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ರಾಜ್ಯ ಸರ್ಕಾರದ ಪರವಾಗಿ ಕುಂದಾಪುರ ಉಪವಿಭಾಗಾಧಿಕಾರಿ (ಎಸಿ) ರಶ್ಮಿ ಅವರು ಸಿಎಂ ವಿಜಯ್ ಅವರನ್ನು ಅಧಿಕೃತವಾಗಿ ಸ್ವಾಗತಿಸಿದರು.

ದೇವಸ್ಥಾನದ ಗರ್ಭಗುಡಿಯಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳ ಸಂಕಲ್ಪವನ್ನು ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗರು ನೆರವೇರಿಸಿಕೊಟ್ಟರು. ಪೂಜೆಯ ನಂತರ ದೇವಾಲಯದ ಅರ್ಚಕರು ಶಾಸ್ತ್ರೋಕ್ತವಾಗಿ ವಿಜಯ್ ಅವರಿಗೆ ರಕ್ಷಾ ದಾರ ಕಟ್ಟಿದರು. ಈ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಬು ಹೆಗ್ಡೆ ಉಪಸ್ಥಿತರಿದ್ದು, ಸಿಎಂ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಮರ್ಪಿಸಿದರು. ವಿಜಯ್ ಅವರ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಕೊಲ್ಲೂರಿನಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿತ್ತು.

ಕೊಲ್ಲೂರು ಕ್ಷೇತ್ರವು ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿನ ದೇವಿಯನ್ನು ಸರಸ್ವತಿ, ಲಕ್ಷ್ಮಿ ಮತ್ತು ದುರ್ಗಾ ದೇವಿಯರ ಸ್ವರೂಪವಾಗಿ ಆರಾಧಿಸಲಾಗುತ್ತದೆ. ಕರ್ನಾಟಕದಲ್ಲಿದ್ದರೂ ಈ ಕ್ಷೇತ್ರಕ್ಕೆ ಕೇರಳ ಮತ್ತು ತಮಿಳುನಾಡಿನಿಂದ ಅತಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಚಿತ್ರರಂಗ, ರಾಜಕೀಯ ರಂಗದ ಪ್ರಮುಖರು ತಮ್ಮ ಯಶಸ್ಸಿಗಾಗಿ ಇಲ್ಲಿಗೆ ಬಂದು ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆಯುವುದು ದಶಕಗಳಿಂದ ನಡೆದುಬಂದಿದೆ. ಪ್ರಸ್ತುತ ರಾಜಕೀಯ ಪ್ರವೇಶಿಸಿ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್ ಅವರು, ಎಂಜಿಆರ್ ಅವರಂತೆಯೇ ಖಡ್ಗವನ್ನು (ಬೆಳ್ಳಿಯ ಖಡ್ಗ) ಕಾಣಿಕೆಯಾಗಿ ನೀಡಿ ಆ ಸಾಂಪ್ರದಾಯಿಕ ನಂಟನ್ನು ಮುಂದುವರಿಸಿದ್ದಾರೆ.

ವಿಜಯ್ ಅವರು ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಸ್ಥಾಪಿಸಿ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಯಶಸ್ವಿಯಾದ ಎಂಜಿಆರ್, ಜಯಲಲಿತಾ ಅವರ ಹಾದಿಯಲ್ಲೇ ವಿಜಯ್ ಕೂಡ ಸಾಗುತ್ತಿರುವುದರಿಂದ, ಅವರ ಈ ಕೊಲ್ಲೂರು ಭೇಟಿ ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+