ಕನ್ನಡದಲ್ಲಿ ಟ್ವೀಟ್ ಮಾಡಿದ ತಮಿಳುನಾಡಿನ ಸಿ.ಎಂ ಎಂ.ಕೆ ಸ್ಟಾಲಿನ್, ಭಾರೀ ವೈರಲ್!
ಭಾಷೆ ಮತ್ತು ಜಲ ವಿವಾದಗಳ ನಡುವೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಹೊಸ ಬೆಳವಣಿಗೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕನ್ನಡದಲ್ಲಿ ಶುಭಕೋರಿದ್ದಾರೆ. ಇದೀಗ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ನೆರೆಯ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭಕೋರಿದ್ದಾರೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ತಿರು (ಶ್ರೀ) ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಮುನ್ನಡೆಸುವಲ್ಲಿ ನಿಮ್ಮ ಬಲವಾದ ಧ್ವನಿಯು ನಿಜವಾದ ಒಕ್ಕೂಟ ಮತ್ತು ಅಂತರ್ಗತ ಪ್ರಜಾಪ್ರಭುತ್ವದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಈ ಮೌಲ್ಯಗಳು ಇಂದಿನ ಭಾರತದಲ್ಲಿ ಅಪಾರ ಮಹತ್ವವನ್ನು ಹೊಂದಿವೆ; ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಜನರು ಅವುಗಳನ್ನು ಎತ್ತಿಹಿಡಿಯುವಲ್ಲಿ ಒಟ್ಟಾಗಿ ನಿಲ್ಲುವರು.

ನಿಮಗೆ ನಿರಂತರ ಶಕ್ತಿ, ಸಂತೋಷ ಮತ್ತು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ ಎಂದು ಹೇಳಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡಿಗರಿಂದ ಮೆಚ್ಚುಗೆ: ಕನ್ನಡದಲ್ಲಿ ಶುಭಕೋರಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ನಡೆಗೆ ಕನ್ನಡಿಗರು ಶುಭಕೋರಿದ್ದಾರೆ. ಕನ್ನಡದಲ್ಲಿ ಶುಭಾಶಯಗಳನ್ನು ಕೋರುವ ಮೂಲಕ ಸ್ಟಾಲಿನ್ ಅವರು ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಕನ್ನಡಿಗರು ಸಂತೋಷಪಡುತ್ತಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಹಾಗೆಯೇ ಅದೇ ಸಂತೋಷದಲ್ಲಿ ಕಾವೇರಿ ವಿವಾದ ಬಗೆಹರಿಸಿ.💛❤️ ಎಂದು ಕನ್ನಡಿಗರು ಹೇಳಿದ್ದಾರೆ.
ಸರ್ವ ಕನ್ನಡಿಗರ ಪರವಾಗಿ ತಮಗೆ ಧನ್ಯವಾದಗಳು ಸ್ಟಾಲಿನ್ ಸರ್ 🎉🙏. ಸ್ಟಾಲಿನ್ ಅವರು ಕನ್ನಡ ಭಾಷೆಗೆ ಗೌರವ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಮತ್ತು ತಮಿಳಿಗೆ ಈಗ ಹಿಂದಿ ಭಾಷೆಯ ಹೇರಿಕೆ ಬಹಳವಾಗಿದೆ. ನಮ್ಮ ನಡುವೆ ವಿವಾದಗಳು ಏನೇ ಇದ್ದರೂ ಹಿಂದಿ ಹೇರಿಕೆಯ ವಿರುದ್ಧವಾಗಿ ಈ ಎರಡೂ ರಾಜ್ಯಗಳು ಒಟ್ಟಾಗಿ ನಿಲ್ಲಬೇಕಾಗಿದೆ ಎಂದು ಶ್ರೀನಿವಾಸ್ ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಯ ಎನ್ನುವವರು, ಒಬ್ಬ ಕನ್ನಡಿಗನಾಗಿ, ಈ ಸುಂದರ ಕಾರ್ಯಕ್ಕಾಗಿ ನಾನು ಶ್ರೀ ಸ್ಟಾಲಿನ್ ಅವರನ್ನು ಅಭಿನಂದಿಸುತ್ತೇನೆ. ಭಾರತದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರು ಮತ್ತು ತಮಿಳರು ಒಟ್ಟಾಗಿ ಹೋರಾಡಬೇಕು! ಭಾಷಾ ಸಮಾನತೆಯನ್ನು ಉತ್ತೇಜಿಸಿ! #ಕನ್ನಡ #ತಮಿಳು #StopHindiImposition ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ತಿರು. @Siddaramaiah ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
— M.K.Stalin (@mkstalin) August 3, 2025
ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಮುನ್ನಡೆಸುವಲ್ಲಿ ನಿಮ್ಮ ಬಲವಾದ ಧ್ವನಿಯು ನಿಜವಾದ ಒಕ್ಕೂಟ ಮತ್ತು ಅಂತರ್ಗತ ಪ್ರಜಾಪ್ರಭುತ್ವದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಈ ಮೌಲ್ಯಗಳು ಇಂದಿನ ಭಾರತದಲ್ಲಿ ಅಪಾರ… pic.twitter.com/2Q13WobUEW
ಜಿ.ಪರಮೇಶ್ವರ್ ಟ್ವೀಟ್: ಇನ್ನು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸೇರಿದಂತೆ ಹಲವರು ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭ ಕೋರಿದ್ದಾರೆ.












Click it and Unblock the Notifications