4.8 ಲಕ್ಷ ಟಿಕೆಟ್ ರಹಿತ ಸಂಚಾರ ಪ್ರಕರಣ ಪತ್ತೆ: ₹45.89 ಕೋಟಿ ಆದಾಯ ಸಂಗ್ರಹ: ನೈಋತ್ಯ ರೈಲ್ವೆ
ಬೆಂಗಳೂರು, ಡಿಸೆಂಬರ್ 17: ಭೌಗೋಳಿಕವಾಗಿ ಕರ್ನಾಟಕ ರಾಜ್ಯದ ಬಹುಪಾಲು ಹೊಂದಿರುವ ನೈಋತ್ಯ ರೈಲ್ವೆ ವಿಭಾಗವು (South Western Railways) ಟಿಕೆಟ್ ರಹಿತ ಪ್ರಕರಣಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಈ ಕ್ರಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾವಿರಾರು ಟಿಕೆಟ್ ಲೆಸ್ ಪ್ರಕರಣ ವರದಿ ಆಗಿದ್ದು, ಕೋಟ್ಯಾಂತರ ರೂಪಾಯಿ ಆದಾಯ ರೈಲ್ವೆ ಬೊಕ್ಕಸ ಸೇರಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಗೆ ಕರ್ನಾಟಕ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಬರುತ್ತದೆ. ಹುಬ್ಬಳ್ಳಿಯಲ್ಲಿ ಪ್ರಮುಖ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ಅಧಿಕಾರಿಗಳು ಈ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಪ್ರಕರಣಗಳ ಪರಿಶೀಲನೆ ತೀವ್ರಗೊಳಿಸಿದ್ದರು.

ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ ಪ್ರಸಕ್ತ (2025-26 ರ) ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ರೈಲ್ವೆಗೆ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. 2025 ನವೆಂಬರ್ ತಿಂಗಳೊಂದರಲ್ಲೇ ಒಟ್ಟು 67,000 ಟಿಕೆಟ್ ಲೆಸ್ ಪ್ರಕರಣ ಪತ್ತೆ ಆಗಿವೆ. ಇದರಿಂದ ಬರೋಬ್ಬರಿ 5.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಕಳೆದ ವರ್ಷ 2024 ನವೆಂಬರ್ ತಿಂಗಳ ಇದೇ ಅವಧಿಗೆ ಹೋಲಿಸಿದರೆ, ಟಿಕೆಟ್ ರಹಿತ ಸಂಚಾರ ಪ್ರಕರಣಗಳ ಸಂಖ್ಯೆಯಲ್ಲಿ ಶೇಯಲ್ಲಿ. 24 ರಷ್ಟು ಹೆಚ್ಚಾಗಿದೆ. ಇನ್ನೂ ನಿಯಮ ಉಲ್ಲಂಘಿಸಿದಕ್ಕಾಗಿ ದಂಡ ರೂಪದಲ್ಲಿ ಆದಾಯದಲ್ಲೂ ಶೇಕಡಾ 60 ರಷ್ಟು ದಾಖಲೆಯ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ (ನವೆಂಬರ್ 2024) 54,000 ಪ್ರಕರಣಗಳಿಂದ 3.35 ಕೋಟಿ ರೂ. ಸಂಗ್ರಹವಾಗಿತ್ತು.
ಏಪ್ರಿಲ್-ನವೆಂಬರ್ ಅವಧಿಯಲ್ಲಿ 4.8 ಲಕ್ಷ ಕೇಸ್ ಪತ್ತೆ
2025 ಏಪ್ರಿಲ್ 1 ರಿಂದ ನವೆಂಬರ್ 30ರವರೆಗಿನ ಸಂಚಿತ ಅವಧಿಯಲ್ಲಿ SWR ಅಧಿಕಾರಿಗಳು ಬರೋಬ್ಬರಿ 5.57 ಲಕ್ಷ ಟಿಕೆಟ್ ರಹಿತ ಸಂಚಾರ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಇದರಿಂದ ಒಟ್ಟು ಬರೋಬ್ಬರಿ 45.89 ಕೋಟಿ ರೂಪಾಯಿ ಆದಾಯ ರೈಲ್ವೆ ಬೊಕ್ಕಸಕ್ಕೆ ಬಂದಿದೆ. 2024ರ ಇದೇ ಅವಧಿಯಲ್ಲಿ (ಏಪ್ರಿಲ್ 1 ರಿಂದ ನವೆಂಬರ್ 30ರ) 4.8 ಲಕ್ಷ ಟಿಕೆಟ್ ಲೆಸ್ ಸಂಚಾರ ಪ್ರಕರಣಗಳು ಪತ್ತೆ ಆಗಿದ್ದವು, ಅದರಿಂದ 32.87 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು.ಇದರರ್ಥ, ಈ ಅವಧಿಯಲ್ಲಿ ಪ್ರಕರಣಗಳಲ್ಲಿ ಶೇಕಡಾ 16 ರಷ್ಟು ಮತ್ತು ಆದಾಯದಲ್ಲಿ ಶೇಕಡಾ 40 ರಷ್ಟು ಪ್ರಗತಿ ಸಾಧಿಸಿದಂತಾಗಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ.
ಅನಧಿಕೃತ ಪ್ರಯಾಣ ತಡೆಗೆ ಕ್ರಮ
ನಿರಂತರವಾಗಿ ನಡೆಸಿದ ಟಿಕೆಟ್ ತಪಾಸಣಾ ಅಭಿಯಾನಗಳು, ವಿಶೇಷ ತಪಾಸಣೆಗಳು ಮತ್ತು ರೈಲು ನಿಲ್ದಾಣಗಳಲ್ಲಿ ಹಾಗೂ ಪ್ರಯಾಣಿಸುವ ರೈಲುಗಳಲ್ಲಿ ಹಠಾತ್ ತಪಾಸಣೆಗಳನ್ನು ನಡೆಸಿದ ಫಲಿತಾಂಶವೇ ಈ ಸುಧಾರಿತ ಸಾಧನೆಗೆ ಕಾರಣವಾಗಿದೆ. ಈ ಉಪಕ್ರಮಗಳು ಅನಧಿಕೃತ ಪ್ರಯಾಣವನ್ನು ತಡೆಯುವ ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸುವ ಗುರಿ ಹೊಂದಿವೆ.
ಕ್ರಿಸ್ಮಸ್, ಹೊಸ ವರ್ಷ ಹಾಗೂ ನಂತರದ ದಿನಗಳಲ್ಲಿ ಎದುರಾಗುವ ಹಬ್ಬಗಳು ಮತ್ತು ಗರಿಷ್ಠ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ರೈಲು ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕಾಗಿ ಟಿಕೆಟ್ ತಪಾಸಣಾ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಯಾಣಿಕರು ಯಾವಾಗಲೂ ಟಿಕೆಟ್ ಸಹಿತ ಪ್ರಯಾಣ ಮಾಡಬೇಕು. ರೈಲು ನಿಯಮಗಳನ್ನು ಪಾಲಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ.












Click it and Unblock the Notifications