Suvarna survey: ಕಾಂಗ್ರೆಸ್ ತೆಕ್ಕೆಗೆ ಬೀಳಲಿದೆ ಕಲ್ಯಾಣ ಕರ್ನಾಟಕ!
ಬೆಂಗಳೂರು, ಮೇ. 04: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು 6 ದಿನ ಬಾಕಿಯಿದೆ. ಅಧಿಕಾರದ ಗದ್ದುಗೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಫಲಿತಾಂಶಕ್ಕೂ ಮುನ್ನ ಹಲವು ಸಂಸ್ಥೆಗಳು ಚುನಾವಣಾ ಸಮೀಕ್ಷೆ ನಡೆಸಿವೆ.
ಮೇ 4 ರ ಗುರುವಾರ ಜನ್ ಕೀ ಬಾತ್ - ಸುವರ್ಣ ನ್ಯೂಸ್ ಮಹಾ ಸಮೀಕ್ಷೆ ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಸಿಗಲಿದೆ ಎಂದು ಹೇಳಿದೆ. ಇದರ ಜೊತೆಗೆ ಹಳೇ ಮೈಸೂರು ಭಾಗ, ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ, ಬೆಂಗಳೂರಿನ ಪ್ರದೇಶವಾರು ಸಮೀಕ್ಷೆಯನ್ನು ಬಹಿರಂಗ ಪಡಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಬಹಿರಂಗಪಡಿಸಿದೆ.

ಜನ್ ಕೀ ಬಾತ್ - ಸುವರ್ಣ ನ್ಯೂಸ್ ಸಮೀಕ್ಷೆ ಪ್ರಕಾರ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಮೇಲುಗೈ ಸಾಧಿಸಲಿದೆ. ಕಲ್ಯಾಣ ಕರ್ನಾಟಕ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಕಲ್ಯಾಣ ಕರ್ನಾಟಕ ಭಾಗದ 40 ಕ್ಷೇತ್ರಗಳ ಸಮೀಕ್ಷೆ ನಡೆಸಿ 2ನೇ ಬಾರಿ ಫಲಿತಾಂಶ ಪ್ರಕಟಿಸಿರುವ ಸುವರ್ಣ ಟಿವಿ, ಆಡಳಿತರೂಢ ಬಿಜೆಪಿ ಈ ಬಾರಿ (ಮೇ. 4 ) 16 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಇದೇ ಜನ್‌ಕಿ ಬಾತ್- ಸುವರ್ಣದ ಮೊದಲ ಸಮೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 14ರಂದು ಬಿಟ್ಟಿದ್ದು, ಅಂದು 16 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ 15 ಸ್ಥಾನಗಳಲ್ಲಿ ಜಯಗಳಿಸಿತ್ತು.

ಇನ್ನು, ಮೇ. 4 ರಂದು ಬಿಡುಗಡೆ ಮಾಡಿರುವ ಸಮೀಕ್ಷೆ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಈ ಬಾರಿ 21 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಏಪ್ರಿಲ್ 14 ರ ಜನ್‌ಕಿ ಬಾತ್ ಮೊದಲ ಸಮೀಕ್ಷೆಯ 23 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಕಳೆದ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ 21 ಸ್ಥಾನಗಳಲ್ಲಿ ಜಯಗಳಿಸಿತ್ತು.
ಸುವರ್ಣ ಟಿವಿ ಮೇ. 4 ರಂದು ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಜಾತ್ಯಾತೀತ ಜನತಾದಳ 03 ಸ್ಥಾನಗಳನ್ನು ಹೊಂದಲಿದೆ. ಏಪ್ರಿಲ್ 14 ರಂದು 01 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಜೆಡಿಎಸ್ 2018 ರ ಚುನಾವಣೆಯಲ್ಲಿ ಈ ಭಾಗದಲ್ಲಿ 04 ಸ್ಥಾನಗಳನ್ನು ಬಾಚಿಕೊಂಡಿತ್ತು. ಇದರ ಜೊತೆಗೆ ಇತರರು ಒಂದು ಸ್ಥಾನವನ್ನು ಪಡೆಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಟಿವಿ 9 ಹಾಗೂ ಸಿ ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿಯೂ ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ 11 ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಇನ್ನು ಈ ಭಾಗದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು 16 ರಿಂದ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು, ಜೆಡಿಎಸ್ ಈ ಭಾಗದಲ್ಲಿ ಪ್ರಭಾವ ಹೊಂದಿಲ್ಲ ಆದರೂ ಒಂದು ಸ್ಥಾನ, ಪಕ್ಷೇತರ ಅಭ್ಯರ್ಥಿ ಕೂಡ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದಿತ್ತು.
ಇನ್ನು, ಜನ್ ಕೀ ಬಾತ್ ಸುವರ್ಣನ್ಯೂಸ್ ಸಮೀಕ್ಷೆಯ 2ನೇ ಹಂತದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಪಕ್ಷ 100 ರಿಂದ 114 ಸ್ಥಾನಗಳನ್ನು ಏಕಾಂಗಿಯಾಗಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ವಿಪಕ್ಷ ಕಾಂಗ್ರೆಸ್ 86 ರಿಂದ 98 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ 20 ರಿಂದ 26 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಿದ್ದು, ಪಕ್ಷೇತರ ಅಭ್ಯರ್ಥಿಗಳು ಗರಿಷ್ಠ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿದೆ.












Click it and Unblock the Notifications