Suttur Jatra Mahotsav 2026: ಜ.15ರಿಂದ ಸುತ್ತೂರು ಜಾತ್ರಾ ಮಹೋತ್ಸವ, ಈ ಬಾರಿ ಏನೆಲ್ಲ ವಿಶೇಷ
ಮೈಸೂರು: ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಇದೇ ಜನವರಿ 15ರಿಂದ 20ರವರೆಗೆ ನೆರವೇರಲಿದೆ. ಮೈಸೂರಿನ ನಂಜನಗೂಡು ಕಪಿಲಾ ನದಿತೀರದಲ್ಲಿರುವ ಸುತ್ತೂರು ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಆರು ದಿನಗಳ ಕಾಲ ಈ ಜಾತ್ರಾ ಮಹೋತ್ಸವ ನಡೆಯಲಿದೆ. ವೈವಿಧ್ಯತೆಗಳಿಂದ ಕೂಡಿರುವ ಸುತ್ತೂರು ಜಾತ್ರೆಯು ಗ್ರಾಮೀಣ ಸೊಗಡಿನ ಅದ್ಧೂರಿ ಹಾಗೂ ಸಂಭ್ರಮದ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ.
ಸುತ್ತೂರು ಜಾತ್ರೆಯಲ್ಲಿ ಎಲ್ಲ ಕ್ಷೇತ್ರಗಳ ಗಣ್ಯರು ಭಾಗವಹಿಸುವುದು ವಿಶೇಷವಾಗಿರಲಿದೆ. ಇದು ಮೈಸೂರು ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತದೆ. ಜ.15ರಿಂದ ಜಾತ್ರೆಗೆ ಚಾಲನೆ ಸಿಗಲಿದ್ದು, ಮೊದಲ ದಿನ ಉತ್ಸವ ಮೂರ್ತಿ ಗದ್ದುಗೆಗೆ ಪೂಜೆ, ಜನವರಿ 16ರಂದು ಹಾಲರವಿ ಉತ್ಸವ, ಸೋಮೇಶ್ವರ ಸ್ವಾಮಿ ಕುಂಬಾಭಿಷೇಕ, ವೀರಭದ್ರೇಶ್ವರ ಕೊಂಡೋತ್ಸವ, 17ರಂದು ರಥೋತ್ಸವ, 18ರಂದು ಮಹದೇಶ್ವರ ಕೊಂಡೊತ್ಸವ, ಲಕ್ಷ ದೀಪೋತ್ಸವ, ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, 19ರಂದು ತೆಪ್ಪೋತ್ಸವ ಹಾಗೂ ಜನವರಿ 20ರಂದು ಕೊನೆಯ ದಿನ ಅನ್ನ ಬ್ರಹ್ಮೋತ್ಸವದೊಂದಿಗೆ ಜಾತ್ರೆಯು ಸಂಪನ್ನಗೊಳ್ಳಲಿದೆ.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಈ ಜಾತ್ರೆ ನೆರವೇರಲಿದ್ದು, ಜನವರಿ 15ರ ಸಂಜೆ 4 ಗಂಟೆಗೆ ವಸ್ತುಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಗಚ್ಚಿನಮಠದ ಶಿವಬಸವ ಸ್ವಾಮಿಗಳು, ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮೀಜಿ, ಸಂಸದ ಜಗದೀಶ್ ಶೆಟ್ಟರ್, ಗೃಹ ಸಚಿವ ಜಿ.ಪರಮೇಶ್ವರ್, ಸಚಿವ ಶಿವಾನಂದ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಳರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ.
ಜಾತ್ರೆಯ ವಿಶೇಷತೆಗಳು
ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೇವಲ ಧಾರ್ಮಿಕ ಆಚರಣೆಗಳ ಜೊತೆಗೆ ಆರೋಗ್ಯ ಮೇಳ, ಕೃಷಿ ಮೇಳ, ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ, ರಾಗಿ ಬೀಸುವ ಸ್ಪರ್ಧೆ, ವಸ್ತುಪ್ರದರ್ಶನ, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯಲಿವೆ. ಈ ಜಾತ್ರೆ ಮಹೋತ್ಸವದಲ್ಲಿ ಪ್ರಸಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ವಸ್ತುಪ್ರದರ್ಶನವು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಇರಲಿದೆ. ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಕೈಗಾರಿಕೋತ್ಪನ್ನಗಳು, ಗೃಹಬಳಕೆ ವಸ್ತುಗಳು, ಪುಸ್ತಕಗಳು ಹಾಗೂ ಕಲಾಕೃತಿಗಳ ಪ್ರದರ್ಶನ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ತಯಾರಿಸಿದ ಶೈಕ್ಷಣಿಕ ಮಾದರಿಗಳ ಪ್ರದರ್ಶನ ಇರಲಿದೆ.
ಕೃಷಿ ಮೇಳದಲ್ಲಿ ಮೈಸೂರಿನ ಪ್ರಾದೇಶಿಕ ಬೆಳೆಗಳು ಹಾಗೂ ದೇಸಿ ಜಾನುವಾರುಗಳ ಪ್ರದರ್ಶನ, ಸುಧಾರಿತ ಏಕ ಹಾಗೂ ದ್ವಿದಳ ಧಾನ್ಯಗಳು, ವೈವಿಧ್ಯಮಯ ಸೊಪ್ಪು, ತರಕಾರಿ ಹಾಗೂ ಸಲಾಡ್ ಬೆಳೆಗಳ ಪ್ರಾತ್ಯಕ್ಷಿಕೆ, ಕಬ್ಬಿನ ಅಂತರ ಬೆಳೆಗಳ ಹಾಗೂ ಹನಿ/ತುಂತುರು ನೀರಾವರಿಯ ಪ್ರಾತ್ಯಕ್ಷಿಕೆ, ಬಳ್ಳಿಲೋಕ, ಕಸಿ ಟೊಮ್ಯಾಟೋ, ಬದನೆ, ನುಗ್ಗೆ, ಪರಂಗಿ ಹಣ್ಣು, ಚಿಕ್ರಮುನಿ, ನಿಂಬೆಹುಲ್ಲಿನ ಬೆಳೆಗಳ ಪ್ರಾತ್ಯಕ್ಷಿಕೆ, ವೈವಿಧ್ಯಮಯ ಪುಷ್ಪ ಪ್ರದರ್ಶನ, ರೇಷ್ಮೆ ಹಾಗೂ ನಿಖರ ಕೃಷಿ ಬೇಸಾಯ ಪ್ರಾತ್ಯಕ್ಷಿಕೆ, ಸರ್ಕಾರಿ ಮತ್ತು ಖಾಸಗಿ ಕೃಷಿ ಮಳಿಗೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಈ ಭಾರಿ ಆಕರರ್ಷಣೆಗಳಾಗಿವೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಗೋಲಿ, ಬುಗುರಿ, ಹುಲಿ-ಕುರಿ, ನವಕಂಕರಿ, ಹಾವು-ಏಣಿ, ಚೌಕಾಬಾರ, ಚದುರಂಗ, ಪಗ್ಗದ ಆಟ, ಪಂಚ, ಸಿಂಗಮ್, ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಆಣೆಕಲ್ಲು, ಗ್ರಾಮೀಣರಿಗಾಗಿ ಕಲ್ಲುಗುಂಡು ಎತ್ತುವುದು, 50 ಕೆ.ಜಿ. ಭಾರದ ಚೀಲ ಹೊತ್ತು ಓಡುವುದು, ಬುಗುರಿ, ಕೆಸರುಗದ್ದೆ ಓಟು ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ನಿಂಬೆಹಣ್ಣು ಇರುವ ಚಮಚವನ್ನು ಬಾಯಲ್ಲಿಟ್ಟುಕೊಂಡು ನಡೆಯುವುದು, ಹನ್ನಜಾ ಅಳಿಗುಳಿಮಣೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವುದು, ಆಣೆಕಲ್ಲು, ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ವೇಗವಾಗಿ ನಡೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆಯಲಿವೆ.












Click it and Unblock the Notifications