ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಸ್ಪೋಟಿಸಲು ಲಕ್ಷ ಲಕ್ಷ ಪಡೆದಿದ್ದ ಶಂಕಿತ ಉಗ್ರರು!
ಬೆಂಗಳೂರು, ಜುಲೈ 28: ಬೆಂಗಳೂರು ಹಾಗೂ ಮಂಗಳೂರು ಸೇರಿ ಕರ್ನಾಟಕದ ಹಲವೆಡೆ ಬಾಂಬ್ ಸ್ಪೋಟಿಸಿ ಜನರನ್ನು ಹತ್ಯೆ ಮಾಡಲು ಈಗ ಬಂಧಿತರಾಗಿರುವ ಶಂಕಿತ ಉಗ್ರರಿಗೆ ವಿದೇಶಿಯರು ಬರೋಬ್ಬರಿ 15 ಲಕ್ಷ ನೀಡಿದ್ದರು ಎಂಬ ಮಾಹಿತಿ ಈಗ ತನಿಖೆಯಿಂದ ಬಹಿರಂಗವಾಗಿದೆ.
ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬಾಂಬ್ ಸ್ಫೋಟಿಸಿ ಜನರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪ ಹೊತ್ತಿರುವ ಶಂಕಿತ ಉಗ್ರರಿಗೆ ಕೆಲ ವಿದೇಶಿಯರು ₹ 15 ಲಕ್ಷ ನೀಡಿರುವ ಮಾಹಿತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಸಾಕ್ಷಿ ಸಮೇತ ಪತ್ತೆ ಮಾಡಿದ್ದಾರೆ.

ದುಬೈ ಸೇರಿ ಇತರೆ ದೇಶಗಳಲ್ಲಿರುವ ವಿದೇಶಿಯರು, ಪ್ರಕರಣದ ಪ್ರಮುಖ ಆರೋಪಿ ಜುನೇದ್ ಅಹಮ್ಮದ್ ಸೇರಿದಂತೆ ಆತನ ಮೂಲಕವೇ ಶಂಕಿತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಿರುವ ಸಿಸಿಬಿ ಪೊಲೀಸರು, ಹಣ ನೀಡಿರುವ ವಿದೇಶಿಯರು ಯಾರು ಅವರ ಉದ್ದೇಶವೇನು ? ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿ ಈಗ ಬಂಧಿತರಾಗಿರುವ ಆರೋಪಿಗಳಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಹಾಗೂ ಮೊಹಮ್ಮದ್ ಉಮರ್ ಖಾತೆಗಳಿಗೆ ಹಣ ಬಂದಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಟಿ. ನಾಸೀರ್ ಸದ್ಯ ಜೈಲಿನಲ್ಲಿದ್ದಾನೆ. ಅಲ್ಲಿ ಆರ್.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಜುನೇದ್ ಅಹಮ್ಮದ್ ಹಾಗೂ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಾಸೀರ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಧರ್ಮ ರಕ್ಷಣೆಗಾಗಿ ಬಾಂಬ್ ಸ್ಫೋಟಿಸುವಂತೆ ಹೇಳಿದ್ದ ನಾಸೀರ್, ಅದಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದನು. ಇದಕ್ಕೆ ಜುನೇದ್ ಹಾಗೂ ಇತರರು ಒಪ್ಪಿಕೊಂಡಿದ್ದರು. ಇದಾದ ಬಳಿಕವೇ ಶಂಕಿತರ ಖಾತೆಗಳಿಗೆ ಹಂತ ಹಂತವಾಗಿ ಹಣ ಬಂದಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈಗ ಬಂಧಿತ ಐವರ ಹೆಸರಿನಲ್ಲಿರುವ 20 ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ ಸುಮಾರು ಒಟ್ಟು 23 ಲಕ್ಷ ಜಮೆ ಆಗಿದೆ. ಅದರಲ್ಲಿ 15 ಲಕ್ಷ ವಿದೇಶಗಳಿಂದ ಬಂದಿದೆ. ಬಹುಪಾಲು ಹಣವನ್ನು ಶಂಕಿತರು ಡ್ರಾ ಮಾಡಿಕೊಂಡಿದ್ದಾರೆ. ಜಾಹೀದ್ ತಬ್ರೇಜ್‌ಗೆ ಹಣದ ವ್ಯವಹಾರದಲ್ಲಿ ಹೆಚ್ಚಿನ ತಿಳಿವಳಿಕೆ ಇದೆ. ಹೀಗಾಗಿ ಈತನ ಮೂಲಕವೇ ಹೆಚ್ಚು ಬಾರಿ ಬ್ಯಾಂಕ್ ವಹಿವಾಟು ನಡೆದಿದೆ. ದುಬೈನಲ್ಲಿದ್ದಾನೆ ಎನ್ನಲಾದ ಜುನೇದ್, ಜಾಹೀದ್ ತಬ್ರೇಜ್ ಮೂಲಕ ಇತರೆ ಶಂಕಿತರಿಗೂ ಹಣ ತಲುಪಿಸಿದ್ದಾನೆ. ಈ ಬಗ್ಗೆ ಶಂಕಿತರು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ವಿದೇಶಗಳಲ್ಲಿರುವ ಕೆಲವರು, ಭಾರತದಲ್ಲಿ ಭಯೋತ್ಪಾದನೆ ಪ್ರಚೋದಿಸಿ ಶಾಂತಿ ಕದಡಲು ಸಂಚು ರೂಪಿಸುತ್ತಿದ್ದಾರೆ. ನಾಸೀರ್ ಮೂಲಕ ಜುನೇದ್ ಹಾಗೂ ಸಹಚರರಿಗೆ ಹಣ ನೀಡಿರುವ ವಿದೇಶಿಯರು, ತ್ವರಿತವಾಗಿ ಬಾಂಬ್ ಸ್ಫೋಟಿಸಿ ಎಂಬುದಾಗಿ ಪದೇ ಪದೇ ಸಂದೇಶ ರವಾನಿಸುತ್ತಿದ್ದ ಮಾಹಿತಿಯನ್ನು ಶಂಕಿತರು ಬಾಯ್ಬಿಟ್ಟಿದ್ದಾರೆ. ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತರ ಉಗ್ರರ ಖಾತೆಗಳಿಗೆ ಕೆಲ ಸ್ಥಳೀಯರು ₹ 8 ಲಕ್ಷ ಜಮೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿ ಟಿ.ನಾಸೀರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಎಂಟು ದಿನಗಳವರೆಗೆ ಸಿಸಿಬಿ ಪೊಲೀಸರ ಕಸ್ಟಡಿಗೆ ವಹಿಸಲಾಗಿದೆ. ಬೆಂಗಳೂರು ಸರಣಿ ಬಾಂಬ್ ಸ್ಫೋಟ ಸೇರಿದಂತೆ 36 ಪ್ರಕರಣಗಳಲ್ಲಿ ಭಾಗಿಯಾಗಿರುವ ನಾಸೀರ್ ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ. ನಾಸೀರ್ ಸೂಚನೆಯಂತೆ ಶಂಕಿತರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications