ಹೈಕೋರ್ಟ್ ಜಡ್ಜ್ ಹೇಳಿಕೆ ವಿಡಿಯೋ ವೈರಲ್: ವರದಿ ಕೇಳಿದ ಸುಪ್ರೀಂಕೋರ್ಟ್
ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಚಾರಣೆ ವೇಳೆ ನೀಡಿರುವ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹೈಕೋರ್ಟ್ ಯೂಟ್ಯೂಬ್ ಚಾನಲ್‌ನಿಂದ ಈ ವಿಡಿಯೋವನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ವೈರಲ್ ಆಗಿದೆ. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ವರದಿ ನೀಡುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಚಾರಣೆ ವೇಳೆ 'ಗೋರಿಪಾಳ್ಯ ಮಿನಿ ಪಾಕಿಸ್ತಾನ' ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಪ್ರೀಂಕೋರ್ಟ್, ನ್ಯಾಯಾಂಗ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಹಾಗೂ ಅದಕ್ಕೆ ಅನುಗುಣವಾಗಿ ನಾವು ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ. ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ಪೀಠ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ ನ್ಯಾಯಾಲಯ ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ.
ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಂದ ಬಂದಿರುವ ಕೆಲವು ಪ್ರತಿಕ್ರಿಯೆಗಳ ಬಗ್ಗೆ ಮಾಧ್ಯಮ ವರದಿಗಳ ಮೂಲಕ ಗಮನ ಸೆಳೆಯಲಾಗಿದೆ. ಈ ಸಂಬಂಧ ಎರಡು ದಿನದಲ್ಲಿ ವಿಸ್ತೃತ ವರದಿ ನೀಡುವಂತೆ ಸುಪ್ರೀಂಕೋರ್ಟ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶ ನೀಡಿದೆ. ಅರ್ಟಾನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಗೋರಿಪಾಳ್ಯ ಮಿನಿ ಪಾಕಿಸ್ತಾನ: ಆಗಸ್ಟ್ 28ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರ ಪೀಠದಲ್ಲಿ ಬಾಡಿಗೆ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು. ಆಗ ಅವರು 'ಮುಸ್ಲಿಂ ಬಾಹುಳ್ಯ ಪ್ರದೇಶವಾಗಿರುವ ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಾರೆ. ಅದೊಂದು ಮಿನಿ ಪಾಕಿಸ್ತಾನವಾಗಿ ಮಾರ್ಪಟ್ಟಿದೆ' ಎಂದು ಕಲಾಪದಲ್ಲಿ ಹೇಳಿದ್ದರು.
'ಬೆಂಗಳೂರು ಮೈಸೂರು ರಸ್ತೆ ಮೇಲ್ಸೇತುವೆ ಮೇಲೆ ಹೋಗಿ ನೋಡಿ, ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೋದಲ್ಲಿಯೂ 10 ಜನರನ್ನು ತುಂಬಿಕೊಂಡಿರಲಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೇತುವೆಯಿಂದ ಸಾಗುವಾಗ ಬದಿಯಲ್ಲಿನ ಗೋರಿಪಾಳ್ಯದಿಂದ ಹೂವಿನ ಮಾರುಕಟ್ಟೆಯ ತನಕದ ಪ್ರದೇಶ ಭಾರತದಲ್ಲಿ ಇಲ್ಲ, ಅದೊಂದು ಮಿನಿ ಪಾಕಿಸ್ತಾನ' ಎಂದು ಹೇಳಿಕೆ ನೀಡಿದ್ದರು.
ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಹಲವಾರು ಜನರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕರ್ನಾಟಕ ಹೈಕೋರ್ಟ್ ಕಲಾಪದ ವಿಡಿಯೋವನ್ನು ಸುಪ್ರೀಂಕೋರ್ಟ್ ಕೂಡಾ ಗಮನಿಸಿ, ಸ್ವಯಂ ಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಮತ್ತೊಂದು ಕಡೆ ಹೈಕೋರ್ಟ್ ಕಲಾಪದ ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಪೂರ್ವಾನುಮತಿ ಪಡೆಯದೇ ವಿಡಿಯೋ ರೆಕಾರ್ಡ್ ಮಾಡಿ ಹಂಚಿಕೆ ಮಾಡಬಾರದು ಎಂದು ಎಚ್ಚರಿಸಿ ನೋಟಿಸ್ ಜಾರಿಗೊಳಿಸಿದೆ. ಸದ್ಯ ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ (ಲೈವ್ ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು-2021 ಅನ್ನು ಜಾರಿಗೊಳಿಸಲಾಗಿದೆ. ಇದರ ಅನ್ವಯ ಪೂರ್ವಾನುಮತಿ ಪಡೆಯದೇ ಲೈವ್ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್ ಮಾಡುವುದು, ಪೋಸ್ಟ್ ಮಾಡುವುದು ಅಥವ ಮರು ಪ್ರಸಾರ ಮಾಡುವಂತಿಲ್ಲ.












Click it and Unblock the Notifications