Cauvery: ಕಾವೇರಿ ನೀರು ಹಂಚಿಕೆ ವಿವಾದ ಅರ್ಜಿ: ತ್ರಿಸದಸ್ಯ ಪೀಠ ರಚಿಸಿದ ಸುಪ್ರಿಂ ಕೋರ್ಟ್
ನವದೆಹಲಿ, ಆಗಸ್ಟ್ 22: ಕಾವೇರಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ನೀರು ಹಂಚಿಕೆ ತಿಕ್ಕಾಟ ಸಂಬಂಧ ನ್ಯಾಯಾಲಯವು ಅರ್ಜಿ ವಿಚಾರಣೆಗಾಗಿ ಮಂಗಳವಾರ ತ್ರಿಸದಸ್ಯ ಪೀಠ ರಚನೆ ಮಾಡಿದೆ.
ತಮಿಳುನಾಡು ರಾಜ್ಯ ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠ ರಚನೆಗೆ ನೀಡಿದ ಒಪ್ಪಿಗೆಯಂತೆ ಇಂದು ತ್ರಿಸದಸ್ಯ ಪೀಠ ರಚನೆ ಮಾಡಿತು. ಕಾವೇರಿ ನೀರು ಹಂಚಿಕೆ ಸಂಬಂಧದ ಅರ್ಜಿ ವಿಚಾರಣೆಯು ಇದೇ ಶುಕ್ರವಾರ ತ್ರಿಸದಸ್ಯ ಪೀಠದ ಮುಂದೆ ಬರಲಿದೆ.

ಮೂರು ನ್ಯಾಯಮೂರ್ತಿಗಳ ತ್ರಿಸದಸ್ಯಪೀಠ
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾ. ಡಿವೈ ಚಂದ್ರಚೂಡ್ ಅವರು, 'ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಬಿಕೆ ಮಿಶ್ರಾ ಹಾಗೂ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ರಚನೆ ಮಾಡಿದರು. ಈ ನ್ಯಾಯಾಧೀಶರು ಕಾವೇರಿ ನೀರು ಹಂಚಿಕೆ ವಿವಾದ ಅರ್ಜಿ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳಲಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಆ ರಾಜ್ಯದ ಪರ ವಕೀಲರಾದ ಮುಕುಲ್ ರೋಹಟಗಿ ಅವರು ಅರ್ಜಿ ವಿಚಾರಪ್ರಸ್ತಾಪಿಸಿದರು. ಕಳೆದ ಆಗಸ್ಟ್ 14ರಿಂದ ಅನ್ವಯಿಸುವಂತೆ ಕರ್ನಾಟಕವು ಕಾವೇರಿ ಜಲಾಶಯದಿಂದ 24,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಬೇಕು ಎಂದು ಅವರು ಕೋರಿದ್ದರು.
ಅದರಂತೆ ಕಳೆದ ಶುಕ್ರವಾರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಸಿಜೆಐ ಮುಂದೆ ಅರ್ಜಿಯಲ್ಲಿನ ಮನವಿಯನ್ನು ಪ್ರಸ್ತಾಪಿಸಿದ್ದರು.
ತಮಿಳುನಾಡು ಹೇಳೋದೇನು?
ಕಾವೇರಿ ತಪ್ಪಲು ಜಿಲ್ಲಾ ಪ್ರದೇಶಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ತುರ್ತಾಗಿ ನೀರು ಬೇಕಿದೆ. ಈ ಸಂಬಂಧ ನೀರು ಬಿಡಲು ಸೂಚಿಸುವಂತೆ ತಮಿಳುನಾಡು ಪರ ರೋಹಟಗಿ ವಾದ ಮಂಡಿಸಿದ್ದರು. ಇನ್ನೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ಕರ್ನಾಟಕ KRS ಮತ್ತು ಕಬಿನಿ ಜಲಾಶಯದಿಂದ ಬಿಲ್ಲಿಗುಂಡ್ಲುವಿನಲ್ಲಿ ಕಳೆದ ಆಗಸ್ಟ್ 11ರಂದು ಮುಂದಿನ 15 ದಿನಗಳಲ್ಲಿ ಬಿಡುಗಡೆ ಮಾಡಬೇಕಾಗಿದ್ದ ನೀರಿನ ಪ್ರಮಾಣ 15 ಸಾವಿರ ಕ್ಯೂಸೆಕ್ಸ್ ನಿಂದ 10 ಸಾವಿರ ಕ್ಯೂಸೆಕ್ಸ್ ಗೆ ಇಳಿಸಿದ್ದರು. ಇದರಿಂದ ನಿಯಮ ಉಲ್ಲಂಘನೆ ಆಗಿದೆ ಎಂದು ಅವರು ತಿಳಿಸಿದ್ದರು.












Click it and Unblock the Notifications