115 ರೂಪಾಯಿಯ ಪೊಂಗಲ್‌ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ

ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೋಗಳಲ್ಲಿ ಹೋಟೆಲ್‌ನ ಮೂಲ ಬೆಲೆಗಿಂತ ದುಪ್ಪಟ್ಟು ದರ ವಿಧಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ವಿಚಾರವಾಗಿ ಹಿರಿಯ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್ ಧ್ವನಿ ಎತ್ತಿದ್ದು, ಆನ್‌ಲೈನ್ ಆರ್ಡರ್‌ನ ದರ ಪಟ್ಟಿಯನ್ನು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅವರು ಇತ್ತೀಚೆಗೆ ಬೆಂಗಳೂರಿನ ಖ್ಯಾತ 'ರಾಮೇಶ್ವರಂ ಕೆಫೆ'ಯಿಂದ ಸ್ವಿಗ್ಗಿ ಮೂಲಕ ಪೊಂಗಲ್ ಆರ್ಡರ್ ಮಾಡಲು ಮುಂದಾಗಿದ್ದರು. ಹೋಟೆಲ್‌ನಲ್ಲಿ ಈ ಪೊಂಗಲ್‌ನ ದರ ಸುಮಾರು 115 ರೂಪಾಯಿ. ಆದರೆ, ಸ್ವಿಗ್ಗಿ ಆಪ್‌ನಲ್ಲಿ ಎಲ್ಲ ತೆರಿಗೆ ಮತ್ತು ಶುಲ್ಕಗಳನ್ನು ಸೇರಿಸಿ ಅಂತಿಮ ಮೊತ್ತ 273 ರೂಪಾಯಿ ಎಂದು ತೋರಿಸಿದೆ. ಅಂದರೆ ವಸ್ತುವಿನ ಮೂಲ ಬೆಲೆಗಿಂತ ಎರಡೂವರೆ ಪಟ್ಟು ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ.

Sumalatha Ambareesh

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ಸುಮಲತಾ

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಅವರು, ನೇರವಾಗಿ ಸ್ವಿಗ್ಗಿ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. ಇದು ಸಾಮಾನ್ಯ ಅಭ್ಯಾಸವೇ?, ಇಷ್ಟು ದೊಡ್ಡ ಮೊತ್ತದ ವ್ಯತ್ಯಾಸಕ್ಕೆ ಕಾನೂನಿನಲ್ಲಿ ಅನುಮತಿ ಇದೆಯೇ?, ಗ್ರಾಹಕರಿಂದ ಇಷ್ಟು ಹಣ ಪಡೆಯುವುದು ನೈತಿಕವೇ? ಎಂದು ಪ್ರಶ್ನಿಸಿದ್ದಾರೆ.

ಸುಮಲತಾ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರು ಗ್ರಾಹಕರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಧ್ಯಮ ವರ್ಗದ ಜನರಿಗೆ ಆನ್‌ಲೈನ್ ಆಹಾರ ಸೇವನೆ 'ದುಬಾರಿ'ಯಾಗುತ್ತಿರುವುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

ಸುಮಲತಾ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಸಾಮಾನ್ಯ ಜನರು ಪ್ರತಿದಿನ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ, ಸೆಲೆಬ್ರಿಟಿಗಳು ಧ್ವನಿ ಎತ್ತಿರುವುದು ಒಳ್ಳೆಯದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ವಾಣಿಜ್ಯ ಎಲ್‌ಪಿಜಿ ದರ ಏರಿಕೆಯ ನಡುವೆ ಹೋಟೆಲ್ ತಿಂಡಿಗಳ ಬೆಲೆಯೂ ಹೆಚ್ಚಾಗುತ್ತಿದ್ದು, ಈ ಮಧ್ಯೆ ಡೆಲಿವರಿ ಆ್ಯಪ್‌ಗಳ ಈ 'ಡಬಲ್ ಧಮಾಕಾ' ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸುಮಲತಾ ಪೋಸ್ಟ್‌ಗೆ ಸ್ವಿಗ್ಗಿ ಪ್ರತಿಕ್ರಿಯೆ

115 ರೂಪಾಯಿಯ ಪೊಂಗಲ್‌ಗೆ 273 ರೂಪಾಯಿ ಬಿಲ್ ವಿಧಿಸಿರುವ ಬಗ್ಗೆ ಹಿರಿಯ ನಟಿ ಸುಮಲತಾ ಅಂಬರೀಷ್ ವ್ಯಕ್ತಪಡಿಸಿದ್ದ ಆಕ್ರೋಶಕ್ಕೆ ಇದೀಗ ಸ್ವಿಗ್ಗಿ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಸುಮಲತಾ ಅವರ ಎಕ್ಸ್ ಪೋಸ್ಟ್‌ಗೆ ರಿಪ್ಲೈ ಮಾಡಿರುವ ಸ್ವಿಗ್ಗಿ ಸಹಾಯವಾಣಿ ತಂಡ (@SwiggyCares), "ಹಲೋ ಸುಮಲತಾ ಅವರೇ, ಈ ಸಮಸ್ಯೆಗೆ ಸಂಬಂಧಿಸಿದಂತೆ ನಮಗೆ ಸಹಾಯ ಮಾಡಲು ದಯವಿಟ್ಟು ಆ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಹಂಚಿಕೊಳ್ಳಿ. ಇದರಿಂದ ನಾವು ನಿಮಗೆ ಹೆಚ್ಚಿನ ನೆರವು ನೀಡಲು ಸಾಧ್ಯವಾಗುತ್ತದೆ" ಎಂದು ಕೇಳಿಕೊಂಡಿದೆ.

ಸ್ವಿಗ್ಗಿ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನೆಟ್ಟಿಗರು ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಇದು ಕೇವಲ ಸುಮಲತಾ ಅವರೊಬ್ಬರ ಸಮಸ್ಯೆಯಲ್ಲ, ಲಕ್ಷಾಂತರ ಗ್ರಾಹಕರು ಪ್ರತಿದಿನ ಅನುಭವಿಸುತ್ತಿರುವ ದರ ಏರಿಕೆಯ ಕಟು ಸತ್ಯ. ಸ್ಕ್ರೀನ್ ರೆಕಾರ್ಡಿಂಗ್ ಕೇಳುವ ಬದಲು ನಿಮ್ಮ ಆಪ್‌ನಲ್ಲಿರುವ ಅತಿಯಾದ ಚಾರ್ಜ್‌ಗಳನ್ನು ಸರಿಪಡಿಸಿ" ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.

ದರ ಏರಿಕೆಗೆ ಕಾರಣವೇನು?

ಇತ್ತೀಚೆಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಬೆಲೆ ಏರಿಕೆ ಮಾಡುತ್ತಿದ್ದರೂ, ಡೆಲಿವರಿ ಆಪ್‌ಗಳು ವಿಧಿಸುವ ಕಮಿಷನ್, ಪ್ಯಾಕೇಜಿಂಗ್ ಶುಲ್ಕ, ಡೆಲಿವರಿ ಚಾರ್ಜ್ ಮತ್ತು ಪ್ಲಾಟ್‌ಫಾರ್ಮ್ ಫೀಗಳು ಸೇರಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ವಾಣಿಜ್ಯ ಎಲ್‌ಪಿಜಿ ದರ ಏರಿಕೆಯಿಂದ ಹೋಟೆಲ್ ಮಾಲೀಕರು ಬೆಲೆ ಹೆಚ್ಚಿಸುತ್ತಿದ್ದರೆ, ಇತ್ತ ಡೆಲಿವರಿ ಆಪ್‌ಗಳ ಹೆಚ್ಚುವರಿ ಶುಲ್ಕಗಳು ಗ್ರಾಹಕರನ್ನು ಕಂಗಾಲಾಗಿಸಿವೆ. ಸುಮಲತಾ ಅವರ ಈ ಧ್ವನಿ ಈಗ ಫುಡ್ ಡೆಲಿವರಿ ಸಂಸ್ಥೆಗಳ ಪಾರದರ್ಶಕತೆಯ ಬಗ್ಗೆ ಹೊಸ ಚರ್ಚೆ ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+