Sugarcane Farmers: ಕಬ್ಬು ಬೆಳೆಗಾರರ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರವೇ ಹೊಣೆ; ಮೊದಲು SAP ಘೋಷಿಸಲಿ ಎಂದ ಬಿಜೆಪಿ ನಾಯಕರು!
Sugarcane Farmers: ಕರ್ನಾಟಕದಲ್ಲಿ ಕಬ್ಬು ಬೆಳಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸರಣಿ ಟ್ವೀಟ್ ಮಾಡಿದ್ದಾರೆ. ಸಂಸದ ಯದುವೀರ್ ಒಡೆಯರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಕಳೆದ ಒಂದು ದಶಕದಿಂದ, ಕೇಂದ್ರದ ಮೋದಿ ಸರ್ಕಾರವು ಭಾರತದ ಕಬ್ಬು ಬೆಳೆಗಾರರ ಹಿತರಕ್ಷಣೆಯನ್ನು ತನ್ನ ಕೃಷಿ ನೀತಿಯ ಕೇಂದ್ರಬಿಂದುವನ್ನಾಗಿ ಮಾಡಿದೆ.
2014ರಿಂದ 2026ರ ಅವಧಿಯಲ್ಲಿ ಸಕ್ಕರೆ ಕ್ಷೇತ್ರದ ಮರುಕಳಿಸುವ ಬಿಕ್ಕಟ್ಟುಗಳನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಬಗೆಹರಿಸಿದೆ. ಸಕ್ಕರೆ ಕಾರ್ಖಾನೆಗಳಿಂದ ರೈತರ ಬಾಕಿ ಹಣವನ್ನು ಪಾವತಿಸಲು ಕನಿಷ್ಠ ಮಾರಾಟ ಬೆಲೆ (MSP) ಜಾರಿಗೊಳಿಸುವುದು, ರಿಯಾಯಿತಿ ದರದ ಸಾಲ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಖಾನೆಗಳ ನಗದು ಹರಿವನ್ನು ಹೆಚ್ಚಿಸಿ ರೈತರಿಗೆ ಸಕಾಲದಲ್ಲಿ ಹಣ ದೊರೆಯುವಂತೆ ಮಾಡಲು ಎಥನಾಲ್ ಮಿಶ್ರಣ ಯೋಜನೆಯನ್ನು ವಿಸ್ತರಿಸುವಂತಹ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಮುಂದುವರಿದು ಕೇಂದ್ರ ಸರ್ಕಾರದ ಈ ರೈತಪರ ಬದ್ಧತೆಯು, ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆಯ (FRP) ನಿರಂತರ ಹಾಗೂ ದಾಖಲೆಯ ಏರಿಕೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರತಿ ಕ್ವಿಂಟಾಲ್‌ಗೆ ಎಫ್‌ಆರ್‌ಪಿ ದರವು 2023-24ರಲ್ಲಿ ₹315, 2024-25ರಲ್ಲಿ ₹340 ಮತ್ತು 2025-26ರಲ್ಲಿ ₹355 ನಿಗದಿಯಾಗಿತ್ತು; ಈಗ 2026-27ರ ಮುಂಬರುವ ಹಂಗಾಮಿಗೆ ಇದನ್ನು ₹365ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕಬ್ಬು ಬೆಳೆಗಾರರಿಗೆ ಸ್ಥಿರವಾದ ಆದಾಯ ಮತ್ತು ಭದ್ರತೆಯನ್ನು ಖಾತರಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಸ್ಥಿರ ನೀತಿಗಳು, ಖಾತರಿಯ ಕನಿಷ್ಠ ಬೆಲೆ ಹಾಗೂ ಇಡೀ ಸಕ್ಕರೆ ಕ್ಷೇತ್ರಕ್ಕೆ ನೀಡಿದ ಸಮಗ್ರ ಬೆಂಬಲದ ಮೂಲಕ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಸದಾ ಸಮರ್ಪಿಸಿಕೊಂಡಿದೆ. ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕೇಂದ್ರದ ಮೇಲೆ ಗೂಬೆ ಕೂರಿಸುವ ನಿರಂತರ ದೂಷಣೆಯ ರಾಜಕೀಯವನ್ನು ಬಿಟ್ಟು, ರಾಜಕೀಯ ಲಾಭಕ್ಕಾಗಿ ರೈತರನ್ನು ಪ್ರಚೋದಿಸುವುದನ್ನು ತಕ್ಷಣ ನಿಲ್ಲಿಸಬೇಕಿದೆ.
ಅನಗತ್ಯ ಸಂಘರ್ಷಕ್ಕೆ ಇಳಿಯುವ ಬದಲು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ಎಲ್ಲಾ ಪಾಲುದಾರರೊಂದಿಗೆ ಸಕಾರಾತ್ಮಕವಾಗಿ ಮತ್ತು ಸಹಕಾರದ ಮನೋಭಾವದಿಂದ ಕೈಜೋಡಿಸಿ ರೈತರಿಗೆ ಗರಿಷ್ಠ ಲಾಭ ದೊರಕಿಸಿಕೊಡಬೇಕು. ಜೊತೆಗೆ ರಾಜ್ಯ ಮಟ್ಟದಲ್ಲಿ 'ವಿಶೇಷ ಸಲಹಾ ಬೆಲೆ'ಯನ್ನು (SAP) ಪರಿಗಣಿಸುವ ಮೂಲಕ, ನಾಡಿನ ಸಮಸ್ತ ಶ್ರಮಜೀವಿ ಕಬ್ಬು ಬೆಳೆಗಾರರ ಬೆವರು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕಂತೆ ಅರ್ಹವಾದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಸಂಸದ ಯದುವೀರ್ ಒಡೆಯರ್ ಅವರು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಮುತುವರ್ಜಿ ವಹಿಸಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಮಿತಿ ಸಹ ರಚಿಸಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಪರವಾಗಿದೆ. ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮೋದಿ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಉಳಿಸಿಕೊಂಡಿದ್ದ ಕಬ್ಬು ಬೆಳೆಗಾರರ ರೂ. 16,600 ಕೋಟಿ ಬಾಕಿಯನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿದೆ. ಎಫ್‌ಆರ್‌ಪಿ ದರವನ್ನು 360 ರೂಪಾಯಿಗಳಿಗೆ ಹೆಚ್ಚಿಸಿದ್ದೇ ಮೋದಿ ಸರ್ಕಾರ. ಮೊದಲು ಕಾಂಗ್ರೆಸ್ ಸರ್ಕಾರ ಎಸ್‌ಎಪಿ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.


Click it and Unblock the Notifications
